Advertisement

ರಾಜ್ಯ ಚುನಾವಣೆಗೆ ರಣಕಹಳೆ: ಉಡುಪಿಯಲ್ಲಿ ಮೊಳಗಿತು ಬಿಜೆಪಿಯ ಸಂಘಟನಾತ್ಮಕ ಪಾಂಚಜನ್ಯ

07:56 PM May 10, 2022 | Team Udayavani |

ಉಡುಪಿ: ಮುಂದಿನ ಒಂದು ವರ್ಷದಲ್ಲಿ ಬರಲಿರುವ ವಿಧಾನಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಸಂಘಟನಾತ್ಮಕ ಸಿದ್ಧತೆ ಮಾಡಿಕೊಳ್ಳುವ ಜತೆಗೆ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಉಡುಪಿಯಲ್ಲಿ ಸೋಮವಾರ ನಡೆದ ಪದಾಧಿಕಾರಿಗಳ ಸಭೆಯ ಉದ್ಘಾಟನೆಯಲ್ಲಿ ಪಾಂಚಜನ್ಯ ಮೊಳಗಿಸುವ ಮೂಲಕ ಇನ್ನಷ್ಟು ವೇಗ ನೀಡಿದರು.

Advertisement

ನಗರದ ಸರ್ವಿಸ್‌ ಬಸ್‌ ನಿಲ್ದಾಣದ ಕ್ಲಾಕ್‌ ಟವರ್‌ನಲ್ಲಿ ರಾಜ್ಯಾಧ್ಯಕ್ಷರ ಜತೆಗೆ ಸಚಿವರಾದ ಸುನಿಲ್‌ ಕುಮಾರ್‌, ಎಸ್‌.ಅಂಗಾರ, ಶಾಸಕ ಕೆ. ರಘುಪತಿ ಭಟ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್‌ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ ಮೊದಲಾದವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಅನಂತರ ಹಸುರು-ಕೇಸರಿ ಬಲೂನ್‌ನೊಂದಿಗೆ ಬಿಜೆಪಿ ಲಾಂಛನವನ್ನು ಆಕಾಶಕ್ಕೆ ಹಾರಿಸುವ ಮೂಲಕ ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಅಲ್ಲಿಂದ ಕಿದಿಯೂರು ಹೊಟೇಲ್‌ ವರೆಗೂ ಶೋಭಾಯಾತ್ರೆಯ ಮೂಲಕ ಸಾಗಿಬಂದು ಸಭಾ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.

ಇದೇ ಮೊದಲ ಬಾರಿ ಉಡುಪಿಯಲ್ಲಿ ನಡೆದ ರಾಜ್ಯ ಪದಾಧಿಕಾರಿಗಳ ಸಭೆಗೆ ಜಿಲ್ಲಾ ಹಾಗೂ ನಗರ ಬಿಜೆಪಿಯಿಂದ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇಡೀ ನಗರವನ್ನು ಕೇಸರಿ ಬಾವುಟದಿಂದ ಅಲಂಕರಿಸಿರುವ ಜತೆಗೆ ಅಲ್ಲಲ್ಲಿ ಗಣ್ಯರಿಗೆ ಶುಭ ಕೋರುವ ಫ್ಲೆಕ್‌ಗಳನ್ನು ಅಳವಡಿಸಲಾಗಿತ್ತು. ಸಭಾಂಣಗದ ಒಳಗೆ ಪದಾಧಿಕಾರಿಗಳಿಗೆ ಕುಳಿತುಕೊಳ್ಳಲು ಉತ್ತಮ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಟೇಬಲ್‌ನಲ್ಲಿ ಇಬ್ಬರಂತೆ ಸುಮಾರು 40ಕ್ಕೂ ಅಧಿಕ ಟೇಬಲ್‌ ಇರಿಸಲಾಗಿತ್ತು.

ಪದಾಧಿಕಾರಿಗಳು
ಬಿ.ವೈ.ವಿಜಯೇಂದ್ರ, ಎನ್‌.ರವಿಕುಮಾರ್‌, ಛಲವಾದಿ ನಾರಾಯಣಸ್ವಾಮಿ, ನೆ.ಲ.ನರೇಂದ್ರಬಾಬು, ಸತೀಶ್‌ ರೆಡ್ಡಿ, ಪ್ರತಾಪ್‌ ಸಿಂಹ, ಸುಬ್ಬ ನರಸಿಂಹ, ತುಳಸಿ ಮುನಿರಾಜುಗೌಡ, ವಿನಯ ಬಿದರೆ ಹೀಗೆ 70ಕ್ಕೂ ಅಧಿಕ ಮಂದಿ ಉಪಸ್ಥಿತರಿದ್ದರು.

Advertisement

ಉದ್ಘಾಟನೆಯ ಅನಂತರ ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌ ಅವರು ಸಂಘಟನಾತ್ಮಕವಾಗಿ ಪಕ್ಷವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬೆಳೆಸುವ ಕುರಿತು ಮಾಹಿತಿ ನೀಡಿದರು. ಪದಾಧಿಕಾರಿಗಳು ತಮ್ಮ ವ್ಯಾಪ್ತಿಯ ವರದಿಯನ್ನು ನೀಡಿದರು.

ಬಿಜೆಪಿ ಟೋಪಿ, ಶಲ್ಯ
ಎಲ್ಲ ಪದಾಧಿಕಾರಿಗಳಿಗೆ ಜಿಲ್ಲಾ ಬಿಜೆಪಿಯಿಂದ ಕೇಸರಿ ಬಣ್ಣದ ಟೋಪಿಯನ್ನು ನೀಡಲಾಗಿತ್ತು ಮತ್ತು ಸಭೆ ಮುಗಿಯುವರೆಗೂ ಅದನ್ನು ಧರಿಸಿದ್ದರು. ಇದರ ಜತೆಗೆ ಹಸುರು-ಕೇಸರಿ ಬಣ್ಣದ ಶಲ್ಯವನ್ನು ಎಲ್ಲರಿಗೂ ನೀಡಲಾಗುತ್ತು. ಸಭಾಂಗಣದ ಒಳಗೆ ಬೃಹತ್‌ ಘಾತ್ರದ ಎಲ್‌ಇಡಿ ಸ್ಕ್ರೀನ್‌ ವ್ಯವಸ್ಥೆಯನ್ನು ಮಾಡಲಾಗಿತ್ತು.

ಜಿಲ್ಲಾ ಬಿಜೆಪಿಯಲ್ಲೂ ಸಂಚಲನ
ರಾಜ್ಯ ಪದಾಧಿಕಾರಿಗಳ ಸಭೆ ಉಡುಪಿಯಲ್ಲಿ ನಡೆದಿರುವುದರಿಂದ ಜಿಲ್ಲೆಯ ಪದಾಧಿಕಾರಿಗಳು, ಮೋರ್ಚಾ, ಪ್ರಕೋಷ್ಠಗಳ ಪ್ರತಿನಿಧಿಗಳಿಗೂ ಸಂಘಟನೆಗೆ ಇನ್ನಷ್ಟು ಶಕ್ತಿ ಸಿಕ್ಕಂತಾಗಿದೆ. ಮಂಗಳವಾರ ಬೆಳಗ್ಗೆಯಿಂದಲೇ ಜಿಲ್ಲೆಯ ಬಹುತೇಕ ಎಲ್ಲ ನಾಯಕರು ಉದ್ಘಾಟನೆಯ ಸಂದರ್ಭದಲ್ಲಿ ಹಾಜರಿದ್ದರು. ರಾಜ್ಯ ಪದಾಧಿಕಾರಿಗಳ ಸಭೆಗೂ ಮೊದಲು ಜಿಲ್ಲಾ ಮಟ್ಟದ ವಿಶೇಷ ಕಾರ್ಯಕಾರಣಿಯನ್ನು ನಡೆಸಲಾಗಿತ್ತು. ಹೀಗಾಗಿ ರಾಜ್ಯ ಪದಾಧಿಕಾರಿಗಳ ಸಭೆಯು ಜಿಲ್ಲಾ ಬಿಜೆಪಿಯಲ್ಲಿ ಒಂದಿಷ್ಟು ಸಂಚಲನ ಮೂಡಿಸಿದೆ.

ಪ್ರಮೋದ್‌ ಮಧ್ವರಾಜ್‌ ಭಾಗಿ
ಇತ್ತೀಚೆಗಷ್ಟೆ ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಮಂಗಳವಾರ ಬೆಳಗ್ಗೆ ನಡೆದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಯ ಉದ್ಘಾಟನೆಯಲ್ಲಿ ಭಾಗವಹಿಸಿದರು. ಕೇಸರಿ ಶಲ್ಯದ ಜತೆಗೆ ಬಿಜೆಪಿ ಟೋಪಿಯನ್ನು ಧರಿಸಿ ಮೊದಲ ಸಾಲಿನಲ್ಲಿ ಕುಳಿತಿದ್ದರು. ನಳಿನ್‌ ಕುಮಾರ್‌ ಕಟೀಲ್‌ ಅವರು ತಮ್ಮ ಭಾಷಣದಲ್ಲಿ ಪ್ರಮೋದ್‌ ಮಧ್ವರಾಜ್‌ ಅವರ ಹೆಸರನ್ನು ಉಲ್ಲೇಖಿಸಿರುವುದು ವಿಶೇಷವಾಗಿತ್ತು.

ಚಿತ್ರಗಳು: ಆಸ್ಟ್ರೋ ಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next