Advertisement

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಸಾಕ್ಷಿಯಾದ ಕಡಲ ನಗರಿ

10:17 PM Nov 05, 2020 | mahesh |

ಮಹಾನಗರ: ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ರಾಜ್ಯ ಕಾರ್ಯ ಕಾರಿಣಿಯನ್ನು ನಡೆಸುವ ಮೂಲಕ ಪಕ್ಷ ಸಂಘಟನೆ, ಬಲವರ್ಧನೆ ಜತೆಗೆ ಕಾರ್ಯ ಕರ್ತರು ಸಕ್ರಿಯವಾಗಿ ಪಕ್ಷದ ಕಾರ್ಯ – ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂಬ ಪರಿಕಲ್ಪನೆಯೊಂದಿಗೆ ಮೊದಲ ಬಾರಿಗೆ ಕಡಲನಗರಿ ಮಂಗಳೂರಿನಲ್ಲಿ ಗುರುವಾರ ಇಡೀ ದಿನ ನಡೆದ ಸಭೆಯು ಯಶಸ್ವಿಯಾಗಿ ಸಂಪನ್ನಗೊಂಡಿದೆ.

Advertisement

ಒಂದೆಡೆ ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನು ಬಲ ಗೊಳಿಸುವುದು, ಅಭಿವೃದ್ಧಿ ಪರ ಯೋಜನೆಗಳ ಕುರಿತ ವಿಚಾರಗಳನ್ನು ಚರ್ಚಿಸುವುದಕ್ಕೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದರೆ, ಇನ್ನೊಂದೆಡೆ, ಈಗಷ್ಟೇ ಮುಗಿದ ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಬಗೆಗಿನ ವಿಚಾರ ಮಂಥನ, ಮುಂಬರುವ ಕೆಲವೊಂದು ಮಹತ್ವದ ಚುನಾವಣೆಗಳನ್ನು ಎದುರಿಸುವುದು – ಅಭ್ಯರ್ಥಿಗಳ ಆಯ್ಕೆ ಸಹಿತ ಪ್ರಸ್ತಕ ವಿದ್ಯಮಾನಗಳಿಗೆ ಪೂರಕ ವಾಗಿ ಸರಕಾರ ತೆಗೆದುಕೊಳ್ಳಬೇಕಾದ ತೀರ್ಮಾನಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಒಳಗೊಂಡಂತೆ ಪ್ರಮುಖ ನಾಯಕರ ಮಹತ್ವದ ಕೋರ್‌ ಸಮಿತಿ ಸಭೆ ನಡೆಯುತ್ತಿತ್ತು. ಈ ಎರಡೂ ಕಡೆಗಳ ಸಭೆಯಲ್ಲಿ ಪಕ್ಷದ ನೆಲೆಗಟ್ಟಿನಲ್ಲಿ ಹಾಗೂ ರಾಜ್ಯದ ಹತ್ತಾರು ವಿಚಾರಗಳ ಬಗ್ಗೆ ಪಕ್ಷದ ಪ್ರಮುಖರಿಂದ ವಿಚಾರ ಮಂಡನೆ, ಚರ್ಚೆಗಳು ನಡೆದವು.

ಕಾರ್ಯಕಾರಿಣಿ ಸಭೆಯ ಉದ್ಘಾಟನ ಸಮಾರಂಭ ಬೆಳಗ್ಗೆ 10.30ಕ್ಕೆ ಕೊಡಿಯಾಲಬೈಲ್‌ ಟಿ.ವಿ. ರಮಣ್‌ ಪೈ ಸಭಾಂಗಣದಲ್ಲಿ ಆರಂಭವಾಗಿತ್ತು. ಬುಧ ವಾರವೇ ನಗರಕ್ಕೆ ಆಗಮಿಸಿದ್ದ ಸಿಎಂ ಬಿ.ಎಸ್‌. ಯಡಿಯೂರಪ್ಪನವರು ಖಾಸಗಿ ಹೊಟೇಲ್‌ನಲ್ಲಿ ತಂಗಿದ್ದು, ಗುರುವಾರ ಹೊಟೇಲ್‌ನಿಂದ ಕಾರ್ಯಕಾರಿಣಿ ಉದ್ಘಾ ಟನ ಕಾರ್ಯಕ್ರಮವಿದ್ದ ಟಿ.ವಿ. ರಮಣ್‌ ಪೈ ಸಭಾಂಗಣಕ್ಕೆ ಕಾಲ್ನಡಿಗೆಯ ಮೂಲಕವೇ ತೆರಳಿದ್ದರು. ಸಭಾಂಗಣದ ಮುಖ್ಯದ್ವಾರ ದಲ್ಲಿ ಮುಖ್ಯಮಂತ್ರಿಯವರಿಗೆ ಆರತಿ ಬೆಳಗಿ ತಿಲಕ ಇಟ್ಟು ಸ್ವಾಗತಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಕೆ.ಎಸ್‌. ಈಶ್ವರಪ್ಪ, ಜಗದೀಶ್‌ ಶೆಟ್ಟರ್‌, ಅರವಿಂದ ಲಿಂಬಾವಳಿ, ಆರ್‌. ಅಶೋಕ್‌, ಕೋಟ ಶ್ರೀನಿವಾಸ ಪೂಜಾರಿ, ಸಿ.ಟಿ. ರವಿ, ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಪ್ರಹ್ಲಾದ್‌ ಜೋಶಿ ಮೊದಲಾದ ಗಣ್ಯರು ವೇದಿಕೆಗೆ ಆಗಮಿಸುತ್ತಿದ್ದಂತೆ ಚೆಂಡೆವಾದನದೊಂದಿಗೆ ಸ್ವಾಗತಿಸಲಾಯಿತು.

ಕಾರ್ಯಕರ್ತರ ಉತ್ಸಾಹ
ಎರಡು ದಶಕಗಳ ಬಳಿಕ ಜಿಲ್ಲೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆದ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹ ಎದ್ದು ಕಾಣುತ್ತಿತ್ತು.

ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ನಾಯಕರ ಮಾರ್ಗ ದರ್ಶನದೊಂದಿಗೆ ಬಿಜೆಪಿ ಕಾರ್ಯ ಕರ್ತರು, ಮಹಿಳಾ ಮೋರ್ಚಾ ಸದಸ್ಯರು ಯಶಸ್ವಿಯಾಗಿ ನಿರ್ವಹಿಸಿದ್ದರು. ಪಕ್ಷದ ಪ್ರಮುಖ ನಾಯಕರನ್ನು ವಿಮಾನ ನಿಲ್ದಾಣ ದಿಂದ ಕರೆ ತರುವುದರಿಂದ ಹಿಡಿದು ಕೌಂಟರ್‌ಗಳಲ್ಲಿ ನೋಂದಣಿ ಕಾರ್ಯ, ಆಗಮಿಸಿದ ಅತಿಥಿಗಳಿಗೆ ಉಪಾಹಾರ, ಊಟೋಪಚಾರದಿಂದ ಹಿಡಿದು ಎಲ್ಲ ಕೆಲಸ ಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.

Advertisement

ಸಿಎಂಗೆ ದುರ್ಗಾಂಬೆ, ಮಂಜುನಾಥನ ವಿಗ್ರಹಗಳನ್ನು ಹೋಲುವ ಸ್ಮರಣಿಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿ ಯೂರಪ್ಪ ಅವರಿಗೆ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮ ಮತ್ತು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ವಿಗ್ರಹಗಳನ್ನು ಹೋಲುವ ಸ್ಮರಣಿಕೆಯನ್ನು ನೀಡಲಾಯಿತು.

ಎಲ್‌ಇಡಿ ಪರದೆ
ಉದ್ಘಾಟನ ಕಾರ್ಯಕ್ರಮವನ್ನು ವೀಕ್ಷಿ ಸಲು ಅನುಕೂಲವಾಗುವಂತೆ ಸಭಾಂ ಗಣದ ಹೊರಗೆ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಕಾರ್ಪೊರೇಟರ್‌ಗಳು ಸಹಿತ ಬಿಜೆಪಿ ಕಾರ್ಯಕರ್ತರು ಕಾರ್ಯ ಕ್ರಮ ವೀಕ್ಷಿಸುತ್ತಿದ್ದ ದೃಶ್ಯ ಕಂಡು ಬಂತು.

ಉತ್ತರ-ದಕ್ಷಿಣ ಊಟೋಪಚಾರ
ಕಾರ್ಯಕಾರಿಣಿ ವಿಶೇಷ ಸಭೆಯಲ್ಲಿ ಪ್ರತಿನಿಧಿಗಳು, ಕಾರ್ಯಕರ್ತರ ಸಹಿತ ಆಗಮಿಸಿದವರೆಲ್ಲರಿಗೂ ದಕ್ಷಿಣ, ಉತ್ತರ ಕರ್ನಾಟಕದ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ರಾಗಿ ಮುದ್ದೆ, ಜೋಳ ರೊಟ್ಟಿ, ಅನ್ನ ಸಾಂಬಾರು, ಪಲ್ಯ, ಪೂರಿ, ಮೆಣಸುಕಾಯಿ, ಪಾಯಸ, ಮಜ್ಜಿಗೆ, ಐಸ್‌ಕ್ರೀಂ ಸಹಿತ ವಿವಿಧ ಖಾದ್ಯಗಳನ್ನು ಎಲ್ಲರೂ ಸವಿದರು.

ಪತಾಕೆಗಳಿಂದ ರಾರಾಜಿಸಿದ ನಗರ
ಮಂಗಳೂರಿನ ಪ್ರಮುಖ ಬೀದಿಗಳನ್ನು ಪತಾಕೆಗಳಿಂದ ಶೃಂಗರಿಸಲಾಗಿತ್ತು. ವೃತ್ತಗಳಲ್ಲಿ ಪತಾಕೆಗಳೊಂದಿಗೆ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಿ ಆಕರ್ಷಣೀಯವಾಗಿಸಲಾಗಿತ್ತು.

ವಾಕಿಂಗ್‌ ಮಾಡಿದ ಸಿಎಂ ಯಡಿಯೂರಪ್ಪ
ಸಭೆ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯೇ ಮಂಗಳೂರಿಗೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ ನಗರದ ಖಾಸಗಿ ಹೊಟೇಲ್‌ನಲ್ಲಿ ತಂಗಿದ್ದರು. ಗುರುವಾರ ಬೆಳಗ್ಗೆ ಬೇಗನೇ ಎದ್ದು ತಾವು ತಂಗಿದ್ದ ಹೊಟೇಲ್‌ ಹಿಂಭಾಗದಲ್ಲಿದ್ದ ಖಾಲಿ ಸ್ಥಳದಲ್ಲಿ ವಾಕಿಂಗ್‌ ಮಾಡಿದರು. ಬಳಿಕ ಉಪಾಹಾರ ಸೇವಿಸಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next