Advertisement

ಕೂಡಲಸಂಗಮದಲ್ಲಿ ಇಂದು ಬಿಜೆಪಿ ಸಭೆ

06:27 AM Jun 09, 2020 | Team Udayavani |

ಬಾಗಲಕೋಟೆ: ಕೇಂದ್ರ ಸರ್ಕಾರದ 2ನೇ ಅವಧಿಯ ಒಂದು ವರ್ಷದ ಸಾಧನೆ ಜನರಿಗೆ ಪರಿಚಯಿಸುವ ಜತೆಗೆ ಪಕ್ಷದ ಸಂಘಟನಾತ್ಮಕ ದೃಷ್ಟಿಯಿಂದ ಜೂ. 9ರಂದು ಜಿಲ್ಲೆಯ ಕೂಡಲಸಂಗಮದಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಯಲಿದೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ತಿಳಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ವಿಭಾಗದ ಸಂಘಟನಾತ್ಮಕ 5 ಜಿಲ್ಲೆಗಳ ವ್ಯಾಪ್ತಿಯ ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರು, ಮಂಡಳ ಅಧ್ಯಕ್ಷರು ಸೇರಿದಂತೆ ಆಹ್ವಾನಿತ ಒಟ್ಟು 200 ಜನರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸಾಧನೆ ಪರಿಚಯ ಅಭಿಯಾನ: ಕೇಂದ್ರ ಸರ್ಕಾರದ 2ನೇ ಅವಧಿಯ ಒಂದು ವರ್ಷದ ಸಾಧನೆಯನ್ನು ಇಡೀ ಜಿಲ್ಲೆಯ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಸಾಧನೆ-ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಐದು ವಿಭಾಗದಲ್ಲಿ ವಿವಿಧ ಹಂತದ ಪ್ರಚಾರ ನಡೆಯಲಿದ್ದು, ಮನೆ ಮನೆ ಸಂಪರ್ಕ ಅಭಿಯಾನ, ಆತ್ಮನಿರ್ಭರ ಭಾರತದ ಸಂಕಲ್ಪ-ವಿಚಾರ, ಆತ್ಮನಿರ್ಭರ ಭಾರದ ಸಂಕಲ್ಪ-ಕಾರ್ಯ ಯೋಜನೆ, ವಿವಿಧ ಮೋರ್ಚಾಗಳಿಂದ ಡಿಜಿಟಲ್‌ ರ್ಯಾಲಿಗಳು, ವಿವಿಧೆಡೆ ಪತ್ರಿಕಾಗೋಷ್ಠಿ ಮೂಲಕ ಜನರಿಗೆ ಸರ್ಕಾರದ ಸಾಧನೆ ತಿಳಿಸಲಾಗುವುದು ಎಂದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರದ 2ನೇ ಅವಧಿಗೆ ಬಂದ ಬಳಿಕ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ತ್ರಿವಳಿ ತಲಾಖ್‌ ರದ್ದು, ರಾಮ ಮಂದಿರ ನಿರ್ಮಾಣ, ಜಮ್ಮು-ಕಾಶ್ಮೀರದ 370 ವಿಧಿ ರದ್ದು ಹೀಗೆ ಹಲವು ಮಹತ್ವದ ಕಾರ್ಯ ಮಾಡಲಾಗಿದೆ. ಅಲ್ಲದೇ ಇಡೀ ವಿಶ್ವವೇ ಕೋವಿಡ್ ದಿಂದ ಸಂಕಷ್ಟಕ್ಕೆ ಸಿಲುಕಿರುವ ಸಮಯದಲ್ಲಿ, ಭಾರತವನ್ನು ಸಮರ್ಥವಾಗಿ ನಿಭಾಯಿಸುವ ಜತೆಗೆ ಜನರಿಗೆ 20 ಲಕ್ಷ ಕೋಟಿ ಮೊತ್ತದ ವಿಶೇಷ ಪ್ಯಾಕೇಜ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ರಾಜ್ಯ ಸರ್ಕಾರವೂ 21 ಸಾವಿರ ಕೋಟಿಯ ಹಲವು ಪ್ಯಾಕೇಜ್‌ ನೀಡಿದೆ ಎಂದು ತಿಳಿಸಿದರು.

ಸೂಕ್ತರಿಗೆ ಬೆಂಬಲ: ಡಿಸಿಸಿ ಬ್ಯಾಂಕ್‌ ಚುನಾವಣೆ ಘೋಷಣೆಯಾದ ಬಳಿಕ ಪಕ್ಷದಲ್ಲಿರುವ ಸಹಕಾರಿ ಧುರೀಣರನ್ನು ಚುನಾವಣೆಗೆ ನಿಲ್ಲಿಸುವ ಕುರಿತು ಜಿಲ್ಲಾ ಕೋರ್‌ ಕಮೀಟಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಡಿಸಿಸಿ ಬ್ಯಾಂಕ್‌, ಸಹಕಾರಿ ವಲಯದ ಚುನಾವಣೆಯಾಗಿದ್ದು, ಉತ್ತಮ ಅಭ್ಯರ್ಥಿಗಳಿಗೆ ಪಕ್ಷದಿಂದ ಬೆಂಬಲ ನೀಡುವ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

Advertisement

ಬಿಜೆಪಿ ಬೆಳಗಾವಿ ವಿಭಾಗ ಸಹ ಪ್ರಭಾರಿ ಬಸವರಾಜ ಯಂಕಂಚಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ನಗರ ಘಟಕದ ಅಧ್ಯಕ್ಷ ಬಸವರಾಜ ಅವರಾದಿ, ಯುವ ಮುಖಂಡ ರಾಜು ರೇವಣಕರ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next