ಕೊಪ್ಪಳ: ಸಿಎಂ ಸಿದ್ದರಾಮಯ್ಯ ಅವರ ಹೆಸರು ಕೆಡಿಸಲು ಬಿಜೆಪಿ ಪಾದಯಾತ್ರೆ ಮಾಡುತ್ತಿದೆ. ರಾಜಕೀಯವಾಗಿ ಸಿದ್ದು ಹೆಸರು ಕೆಡಿಸಲು ಪಾದಯಾತ್ರೆ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಅವರಿಗೆ ತೊಂದರೆ ಮಾಡಬೇಕು ಎಂದು ಪ್ರಧಾನಿ, ಶಾ ಯೋಚನೆ ಮಾಡಿರಬಹುದು. ವಾಲ್ಮೀಕಿ ನಿಗಮದ ಹಗರಣದಲ್ಲಿ ಅಧಿಕಾರಿಗಳ ತಪ್ಪಿದೆ ಎಂದು ಅವರಿಗೆ ಗೊತ್ತಿದೆ. ಈಗ ಸುಮ್ಮನೆ ಮುಡಾ ವಿಚಾರದಲ್ಲಿ ಬಿಜೆಪಿ ಪಾದಯಾತ್ರೆ ಮಾಡುತ್ತಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.
ಕೊಪ್ಪಳದಲ್ಲಿ ಶನಿವಾರ (ಆ 03) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಅಭಿವೃದ್ಧಿ ಬದ್ದತೆಯ ನಾಯಕ. ಅವರ ಹೆಸರು ಕೆಡಿಸಲು ಬಿಜೆಪಿಗೆ ದುರುದ್ದೇಶ ಹೊಂದಿದೆ. ಅಬ್ರಾಹಂ ಒಬ್ಬ ಬ್ಲಾಕ್ ಮೇಲರ್. ಆತನು ಯಡಿಯೂರಪ್ಪ ಸೇರಿ ಹಲವರ ಮೇಲೆ ಆರೋಪ ಮಾಡಿದ್ದಾನೆ.ಸಿಎಂ ಮೇಲೆ ಕೇಸ್ ಹಾಕಲು ಅಬ್ರಹಂ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾನೆ. ರಾಜ್ಯಪಾಲರು ರಾಜಕೀಯ ಒತ್ತಡಕ್ಕೆ ಮಣಿದು ಸಿಎಂಗೆ ನೋಟಿಸ್ ಕೊಟ್ಟಿದ್ದಾರೆ. ರಾಜ್ಯಪಾಲರಿಗೆ ಪ್ರಧಾನಿ ಹೇಳಿದ್ದಾರೋ ಅಥವಾ ಗೃಹ ಮಂತ್ರಿ ಹೇಳಿದ್ದಾರೋ ಗೊತ್ತಿಲ್ಲ. ಈಗಾಗಲೇ ನಮ್ಮ ಸಚಿವ ಸಂಪುಟ ನಿರ್ಣಯ ಮಾಡಿದೆ. ರಾಜ್ಯಪಾಲರು ಅನುಮತಿ ಕೊಡಲು ಬರುವುದಿಲ್ಲ. ಸಿಎಂ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ.ಸಿದ್ದರಾಮಯ್ಯ ಅವರು 3 ವರ್ಷ 10 ತಿಂಗಳು ಸಿಎಂ ಆಗಿ ಇರುತ್ತಾರೆ ಎಂದರು.
ಮುಡಾ ಜಮೀನಿನಲ್ಲಿ ಸಿಎಂ, ಸರ್ಕಾರದ ಪಾತ್ರ ಏನೂ ಇಲ್ಲ. ಸಿಎಂ ಇದರಲ್ಲಿ ಪಾರದರ್ಶಕವಾಗಿದ್ದಾರೆ. 1935 ರಲ್ಲಿ ಶ್ರೀ ನಿಂಗ ಎನ್ನುವವರು ಮೈಸೂರು ಮಹಾರಾಜರ ಸರ್ಕಾರದಲ್ಲಿ 3.16 ಎಕರೆ ಜಮೀನು ಹರಾಜಿನಲ್ಲಿ ಪಡೆದಿದ್ದಾರೆ. ನಂತರ ಈ ಜಮೀನು ವಾರಸುದಾರರಿಗೆ ಬಂದಿದೆ. ಆ ವಾರಸುದಾರರು ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಮಾರಾಟ ಮಾಡಿದ್ದಾರೆ. 1992 ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಜಮೀನು ಖರೀದಿ ಮಾಡಿದ್ದಾರೆ. ಮಲ್ಲಿಕಾರ್ಜುನ ಸ್ವಾಮಿ ಸಿಎಂ ಪತ್ನಿ ಸಂಬಂಧಿ. ಮುಡಾದವರು ಈ ಜಮೀನು ನಿವೇಶನ ಮಾಡಲು ಅಧಿಸೂಚನೆ ಹೊರಡಿಸುತ್ತಾರೆ. 1997 ರಲ್ಲಿ ಈ ಜಮೀನು ಅಧಿಸೂಚನೆ ಕೈ ಬಿಟ್ಟಿದ್ದಾರೆ. ಆಗ ಮಲ್ಲಿಕಾರ್ಜುನ ಸ್ವಾಮಿ ಅವರು ತಮ್ಮತಂಗಿ ಪಾರ್ವತಿ ಅವರಿಗೆ ಗಿಪ್ಟ್ ಡೀಡ್ ಮಾಡಿದ್ದಾರೆ. ಅಷ್ಟರೊಳಗೆ ಮುಡಾ ಇದನ್ನು ಕಾನೂನು ಬಾಹಿರವಾಗಿ ನಿವೇಶನ ಮಾಡಿದ್ದಾರೆ. ನಿವೇಶನ ಮಾಡಿದ ಬಳಿಕ ಸಿಎಂ ಪತ್ನಿಗೆ ಜಮೀನಿನ ಪರ್ಯಾಯ ನಿವೇಶನ ಅಥವಾ ಪರಿಹಾರ ಕೊಡಬೇಕಲ್ವಾ? ಅದರ ಬದಲಿ 2021 ರಲ್ಲಿ ಬೊಮ್ಮಾಯಿ ಸರ್ಕಾರ 50:50 ಅಡಿ ನಿವೇಶನ ಕೊಡಲು ಆದೇಶ ಮಾಡಿದೆ. ಸಿಎಂ ಅಧಿಕಾರಕ್ಕೆ ಬಂದ ಬಳಿಕ 2023 ರಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ಕಾನೂನು ಬಾಹಿರ ಮಾಡಿದ ಆದೇಶ ರದ್ದು ಮಾಡಿದ್ದಾರೆ. ಮುಡಾ ಹಂಚಿಕೆ ಮಾಡಿದ ನಿವೇಶನದ ಆದೇಶ ರದ್ದಾಗಿದೆ. ಆದೇಶ ರದ್ದಾದ ಬಳಿಕ ಆ ಜಮೀನು ಸಿಎಂ ಪತ್ನಿ ಹೆಸರಿನಲ್ಲೇ ಉಳಿಯುತ್ತದೆ ಎಂದರು.
ನಮಗೆ ಪರಿಹಾರ ಕೊಡಿ ಎಂದು ಆಗ ಸಿಎಂ ಪರಿಹಾರ ಕೇಳಿರಬಹುದು. ಇದನ್ನು ಬಿಜೆಪಿ ಸುಮ್ಮನೆ ಮಾತನಾಡುತ್ತಿದೆ. ಬಿಜೆಪಿಯೇ ಕಾನೂನು ಬಾಹಿರ ಕೆಲಸ ಮಾಡಿದೆ. ಸಿಎಂ ವ್ಯಕ್ತಿತ್ವಕ್ಕೆ ಮಸಿ ಬಳಿಯಲು, ಕಪ್ಪು ಚುಕ್ಕೆ ತರಲು ಬಿಜೆಪಿ ಯತ್ನಿಸುತ್ತಿದೆ. ಬಿಜೆಪಿ ಭ್ರಷ್ಟಾಚಾರ ಮುಚ್ಚಲು ಪಾದಯಾತ್ರೆ ಮಾಡುತ್ತಿದೆ. ನಾವು ಸಿಎಂ ಪರ ನಿಲ್ಲುತ್ತೇವೆ ಎಂದರು.
ಅಹಿಂದ ವ್ಯಕ್ತಿ ಮತ್ತೆ ಸಿಎಂ ಆಗಿರುವುದು ಬಿಜೆಪಿ ಸಹಿಸುತ್ತಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಕಮ್ಯುನಲ್ ಪಾರ್ಟಿಗಳು. ಕಾಂಗ್ರೆಸ್ ಎಲ್ಲ ಲಿಂಗಾಯತ ನಾಯಕರು ಸಿಎಂಗೆ ಬೆಂಬಲ ನೀಡಿದ್ದೇವೆ. 50:50 ನಿವೇಶನ ಹಂಚಿಕೆ ಮಾಡಿದ್ದು ಬೊಮ್ಮಾಯಿ ಸರ್ಕಾರ. ಆ ಆದೇಶವನ್ನು 2023 ರಲ್ಲಿ ನಾವು ರದ್ದು ಮಾಡಿದ್ದೇವೆ ಎಂದರು.
ರಾಜ್ಯಪಾಲರು ಸಿಎಂ ವಿರುದ್ದ ಪ್ರಕರಣ ದಾಖಲಿಸಲು ಅನುಮತಿ ಕೊಡಲಾಗದು. ಒಂದು ವೇಳೆ ಕೊಟ್ಟರೆ ನಾವು ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತರುತ್ತೇವೆ. ಬಿಜೆಪಿ ಬೇಕಿದ್ದರೆ ಕೋರ್ಟ್ ಗೆ ಹೋಗಲಿ. ನಾವು ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತರುತ್ತೇವೆ ಎಂದು ರಾಯರೆಡ್ಡಿ ಹೇಳಿದರು.
ರಾಜ್ಯದಲ್ಲಿ ಅಧಿಕಾರಿಗಳ, ನೌಕರರ ವರ್ಗಾವಣೆ ದಂಧೆಯಾಗಿದೆ ಎಂದು ಈ ಹಿಂದೆ ಹೇಳಿದ್ದೆ. 1985 ರಿಂದಲೂ ಈ ಸಂಸ್ಕೃತಿ ಆರಂಭವಾಗಿದೆ. ಎಲ್ಲ ಸರ್ಕಾರಗಳ ಕಾಲದಲ್ಲಿ ವರ್ಗಾವಣೆ ನಡೆದು ಬಂದಿದೆ. ಇದು ಆಗಬಾರದು ಎಂದು ನಾನು ಹೇಳಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದೇನೆ. ಸಿಎಂ ಸಹಿತ ಅಧಿಕಾರಿಗಳ ವರ್ಗಾವಣೆಗೆ ಮಾರ್ಗಸೂಚಿ ತರಲು ಚಿಂತನೆ ನಡೆಸಿದ್ದಾರೆ. ನಮ್ಮ ಸರ್ಕಾರ ವರ್ಗಾವಣೆಗೆ ಮಾರ್ಗಸೂಚಿ ತರಲಿದೆ. ಕೌನ್ಸಲಿಂಗ್ ಮೂಲಕ ವರ್ಗಾವಣೆ ಜಾರಿಗೆ ಮಾಡುವ ಕುರಿತು ಸರ್ಕಾರ ನಿರ್ಧಾರ ಮಾಡಲಿದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.