Advertisement

ಅನಿಲ ಗೆಲುವಿಗಾಗಿ ಬಿಜೆಪಿ ಮ್ಯಾರಥಾನ್‌

05:20 PM May 04, 2018 | Team Udayavani |

ಗದಗ: ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ‘ರನ್‌ ಫಾರ್‌ ಡೆವಲಪ್‌ ಮೆಂಟ್‌-ರನ್‌ ಫಾರ್‌ ಗದಗ ಚೇಂಜ್‌ ಮ್ಯಾರಥಾನ್‌’ ಓಟದ ಮೂಲಕ ವಿನೂತನವಾಗಿ ಮತಯಾಚಿಸಲಾಯಿತು. ಕಳಸಾಪುರ ರಸ್ತೆಯಲ್ಲಿರುವ ಸಿದ್ದಲಿಂಗ ನಗರದ ಬಯಲು ಆಂಜನೇಯ ದೇವಸ್ಥಾನದಿಂದ ಆರಂಭಗೊಂಡ ಮ್ಯಾರಾಥಾನ್‌ ಓಟ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಓಟದಲ್ಲಿ ಪಾಲ್ಗೊಂಡಿದ್ದ ನೂರಕ್ಕೂ ಹೆಚ್ಚು ಯುವಕರೊಂದಿಗೆ ಬಿಜೆಪಿ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ ಓಟ ಮುಂದುವರಿಸಿದರು.

Advertisement

ಈ ನಡುವೆ ಜೋಡಮಾರುತಿ ದೇವಸ್ಥಾನದ ಬಳಿ ಸ್ಥಳೀಯ ಯುವಕರು ಹೂವಿನ ಮಳೆಗರೆದರೆ, ಮುತೈದೆಯರು ಬಿಜೆಪಿ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ ಅವರ ಹಣೆಗೆ ವಿಜಯ ತಿಲಕವಿಟ್ಟು ಆರತಿ ಬೆಳಗಿ ಶುಭ ಕೋರಿದರು.

ಅಲ್ಲಲ್ಲಿ ಅಂಗಡಿ, ಇಡ್ಲಿ ಬಂಡಿ ಮಾಲೀಕರ, ಪಂಚರ ಹೊಂಡ ಬಳಿ ಬೀದಿ ಬದಿ ವ್ಯಾಪಾರಿಗಳ ಕುಶಲೋಪರಿ ವಿಚಾರಿಸಿ, ಈ ಬಾರಿ ಗದಗ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡುವಂತೆ ಕೈಮುಗಿದು ಕೇಳಿಕೊಂಡರು.

ನಳದ ನೀರಿಗಾಗಿ ಸರದಿ ನಿಂತಿದ್ದ ಮಹಿಳೆಯರಿಂದ ಸ್ಥಳೀಯ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಾತನಾಡಿದ ಅನಿಲ್‌ ಮೆಣಸಿನಕಾಯಿ, ಬಿ. ಶ್ರೀರಾಮುಲು ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ನಗರದಲ್ಲಿ ನೀರಿನ ಸಮಸ್ಯೆ ತಕ್ಕಮಟ್ಟಿಗೆ ನಿವಾರಣೆಯಾಗಿತ್ತು. ಶ್ರೀಶೈಲಪ್ಪ ಬಿದರೂರ ಅವರು ಶಾಸಕರಾಗಿದ್ದ ನಗರದ 2ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಅಂದಿನ ಬಿಜೆಪಿ ಸರ್ಕಾರ ಅನುದಾನ ಒದಗಿಸಿತ್ತು. ಅದೇ ಹಣದಲ್ಲಿ ಗದಗ-ಬೆಟಗೇರಿ 24*7 ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದಾರೆ. ಆದರೆ, ಐದು ವರ್ಷ ಅಧಿಕಾರವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಸ್ಥಳೀಯ ಶಾಸಕ ಎಚ್‌.ಕೆ. ಪಾಟೀಲ
ವಿಫಲರಾಗಿದ್ದಾರೆ. ಈ ಬಾರಿ ಗದುಗಿನಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದ್ದು, ಕೆಲವೇ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

ಇದಕ್ಕೂ ಮುನ್ನ ಮ್ಯಾರಾಥಾನ್‌ಗೆ ಚಾಲನೆ ನೀಡಿದ ಬಿಜೆಪಿ ಚುನಾವಣಾ ಉಸ್ತುವಾರಿ ಎಂ.ಎಸ್‌. ಕರಿಗೌಡ್ರ ಮಾತನಾಡಿ, ಭ್ರಷ್ಟಾಚಾರ ಮುಕ್ತ ದೇಶ ನಿರ್ಮಿಸಲು ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು. ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ಜನಪರ, ಅಭಿವೃದ್ಧಿ ಪರ ಕ್ರಮಗಳಿಂದಾಗಿ ವಿಶ್ವವೇ ಹಾಡಿ ಹೊಗಳುತ್ತಿದೆ ಎಂದರು.

Advertisement

ಕಳಸಾಪುರ ರಸ್ತೆಯಲ್ಲಿರುವ ಸಿದ್ದಲಿಂಗ ನಗರದ ಬಯಲು ಆಂಜನೇಯ ದೇವಸ್ಥಾನದಿಂದ ಆರಂಭಗೊಂಡ ಮ್ಯಾರಾಥಾನ್‌ ಓಟ ಸಿಂಹದ ಕೆರೆ, ತ್ರಿಕುಟೇಶ್ವರ ದೇವಸ್ಥಾನ, ಜೋಡ ಹನುಮಾನ ದೇವರ ಗುಡಿ, ಜುಮ್ಮಾ ಮಸೀದಿ, ಪಂಚರ ಹೊಂಡ, ಗ್ರೇನ್‌ ಮಾರ್ಕೆಟ್‌, ಕೆ.ಎಚ್‌. ಪಾಟೀಲ ಸರ್ಕಲ್‌, ಪುಟ್ಟರಾಜ ಕವಿಗವಾಯಿಗಳ ಸರ್ಕಲ್‌, ಸ್ಟೇಡಿಯಂ ಮಾರ್ಗವಾಗಿ ಜೆ.ಟಿ. ಕಾಲೇಜುವರೆಗೆ ಮ್ಯಾರಾಥಾನ್‌ ನಡೆಯಿತು.

ಮ್ಯಾರಾಥಾನ್‌ ಓಟದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವಿ‌ನಿ ಜಗತಾಪ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಕುರಡಗಿ, ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಕಾಂತಿಲಾಲ ಬನ್ಸಾಲಿ, ನಗರಸಭಾ ಸದಸ್ಯರಾದ ಸಂತೋಷ ಮೇಲಗಿರಿ, ಅನಿಲ ಅಬ್ಬಿಗೇರಿ, ವಿನಾಯಕ ಮಾನ್ವಿ, ಬಿಜೆಪಿ ಮುಖಂಡರಾದ ಸಿದ್ದಲಿಂಗೇಶ ಮೆಣಸಿನಕಾಯಿ, ಬಸವಣ್ಣಯ್ಯ ಹಿರೇಮಠ, ರಾಘವೇಂದ್ರ ಹಳ್ಳದ, ಎಂ.ಎಂ. ಹಿರೇಮಠ, ರಮೇಶ ಮುಳಗುಂದ, ಅರವಿಂದ ಹುಲ್ಲೂರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next