ನವದೆಹಲಿ: 2018ರ ಮಾರ್ಚ್‌ನಿಂದ 2022ರವರೆಗೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ಗಳ ಮೂಲಕ ಹರಿದುಬಂದಿರುವ ದೇಣಿಗೆ 9,208 ಕೋಟಿ ರೂ.! ಇದರಲ್ಲಿ ಶೇ.57ಕ್ಕೂ ಅಧಿಕ ಮೊತ್ತ ಅಂದರೆ 5,270 ಕೋಟಿ ರೂ. ಬಿಜೆಪಿಗೆ ಬಂದಿದೆ.
ಇನ್ನು 2ನೇ ಸ್ಥಾನ ಪಡೆದಿರುವುದು ದೇಶದ ಹಳೆಯ ರಾಷ್ಟ್ರೀಯ ಪಕ್ಷ ಕಾಂಗ್ರೆಸ್. ಅದಕ್ಕೆ ದಕ್ಕಿರುವುದು ಕೇವಲ 964 ಕೋಟಿ ರೂ.
ಪ.ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ 767 ಕೋಟಿ ರೂ. ಬಂದಿದೆ ಎಂದು ಚುನಾವಣಾ ಆಯೋಗದ ದತ್ತಾಂಶಗಳು ಹೇಳಿವೆ.
2017ರಲ್ಲಿ ಈ ರೀತಿಯ ಬಾಂಡ್‌ಗಳನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿತು. ಅದು ಟೀಕೆಗೂ ಕಾರಣವಾಗಿತ್ತು. ಅಧಿಕಾರರೂಢ ಪಕ್ಷಗಳು ಇದನ್ನು ದುರ್ಬಳಕೆ ಮಾಡಿಕೊಂಡು ಹೆಚ್ಚಿನ ಹಣ ಪಡೆದುಕೊಳ್ಳಬಹುದು.
ಹಾಗೆಯೇ ಹೆಸರು ಬಹಿರಂಗಪಡಿಸದೇ ಹಣ ನೀಡಬಹುದಾಗಿರುವುದರಿಂದ ಹಲವು ಅಕ್ರಮಗಳಿಗೂ ಕಾರಣವಾಗುತ್ತದೆ. ಅಕ್ರಮ ಹಣ ಸಾಗಣೆಯಂತಹ ವ್ಯವಹಾರಗಳಿಗೂ ಇದನ್ನು ಬಳಸಿಕೊಳ್ಳಬಹುದು ಎಂದು ಆರೋಪಿಸಲಾಗಿತ್ತು.