ಬಾಗಲಕೋಟೆ: ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ಕಳಪೆ ಸಾಧನೆ ಮಾಡಿದ್ದು, 11 ಕಡೆ ಪಕ್ಷೇತರರು ಗೆಲ್ಲುವ ಮೂಲಕ ಎರಡು ಕಡೆ ನಿರ್ಣಾಯಕರಾಗಿದ್ದಾರೆ.
ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರತಿನಿಧಿಸುವ ಮುಧೋಳ ತಾಲೂಕಿನ ರನ್ನಬೆಳಗಲಿ ಪಟ್ಟಣಪಂಚಾಯಿತಿಯ ಪಟ್ಟು 18 ಸ್ಥಾನಗಳ ಪೈಕಿ ಕಾಂಗ್ರೆಸ್ 8 ವಾರ್ಡಗಳಲ್ಲಿ ಗೆಲುವು ಸಾಧಿಸಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಇಲ್ಲಿ ಬಿಜೆಪಿ 5 ಸ್ಥಾನದಲ್ಲಿ ಗೆದ್ದಿದ್ದು, 5 ಸ್ಥಾನಗಳಲ್ಲಿ ಪಕ್ಷೇತರರು ಗೆದ್ದಿದ್ದಾರೆ. ಇಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆದಿಲ್ಲ. ಹೀಗಾಗಿ ಪಕ್ಷೇತರರೇ ಕಿಂಗ್ ಮೇಕರ್ ಆಗಿದ್ದಾರೆ.
ಇನ್ನು ಕರದಂಡು ನಾಡು ಅಮೀನಗಡ ಪಟ್ಟಣಪಂಚಾಯಿತಿ ಕೂಡ ಅತಂತ್ರವಾಗಿದ್ದು, ಇಲ್ಲಿನ 16 ಸ್ಥಾನಗಳಲ್ಲಿ ಬಿಜೆಪಿ 7, ಕಾಂಗ್ರೆಸ್ 4 ಸ್ಥಾನ ಗೆದ್ದರೆ, ಇಲ್ಲಿಯೂ 5 ವಾರ್ಡಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಸ್ಪಷ್ಟ ಬಹುಮತಕ್ಕೆ 9 ಸ್ಥಾನ ಬೇಕಾಗಿದ್ದು, ಶಾಸಕ, ಸಂಸದರ ಮತದೊಂದಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆಯಬೇಕೆಂಬ ತಂತ್ರಗಾರಿಗೆ ಬಿಜೆಪಿಯಲ್ಲಿ ನಡೆಯುತ್ತಿದೆ ಎನ್ನಲಾಗಿದೆ.
ಅಲ್ಲದೇ ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರದ ವ್ಯಾಪ್ತಿಯ ಕಮತಗಿ ಪಟ್ಟಣಪಂಚಾಯಿತಿಯ 16 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ. ಇಲ್ಲಿ ಕಾಂಗ್ರೆಸ್ 10, ಬಿಜೆಪಿ 4 ಹಾಗೂ ಪಕ್ಷೇತರರ ಓರ್ವ ಸದಸ್ಯ ಗೆಲುವು ಸಾಧಿಸಿದ್ದಾರೆ.
ಕಮತಗಿ ಪಟ್ಟಣಪಂಚಾಯಿತಿಯಲ್ಲಿ ದಂಪತಿ ಗೆಲುವು ಸಾಧಿಸಿದ್ದು, ಪತಿ ದೇವಿಪ್ರಸಾದ ನಿಂಬಲಗುಂದಿ ಮತ್ರು ಅವರ ಪತ್ನಿ ನೇತ್ರಾವತಿ ನಿಂನಲಗುಂದಿ ಆಯ್ಕೆಯಾಗಿರುವುದು ವಿಶೇಷ. ಜಿಲ್ಲೆಯ ಮೂರು ಪಟ್ಟಣಪಂಚಾಯಿತಿಗಳ ಒಟ್ಟು 50 ಸದಸ್ಯ ಸ್ಥಾನಗಳಲ್ಲಿ ಬಿಜೆಪಿ 16 ಸ್ಥಾನ ಗೆದ್ದರೆ, ಕಾಂಗ್ರೆಸ್ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 11 ಸ್ಥಾನಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿ, ಎರಡು ಕಡೆ ನಿರ್ಣಾಯಕರಾಗಿದ್ದಾರೆ.