Advertisement

2 ದಿನದಲ್ಲಿ ಬಿಜೆಪಿ ಪಟ್ಟಿ ಬಿಡುಗಡೆ

01:09 AM Mar 10, 2019 | |

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಎರಡು ಹಂತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮೊದಲಿಗೆ ಹಾಲಿ ಸಂಸದರ ಟಿಕೆಟ್‌ ಘೋಷಣೆಯಾಗಲಿದ್ದು, ಒಂದೆರೆಡು ದಿನಗಳಲ್ಲಿ ಪಟ್ಟಿ ಬಿಡುಗಡೆಯಾಗಲಿದೆ ಎಂದು ವಿಧಾನಪರಿಷತ್‌ ಸದಸ್ಯ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದ್ದಾರೆ.

Advertisement

ಮೊದಲ ಹಂತದಲ್ಲಿ ಹಾಲಿ ಸಂಸದರಿಗೆ ಟಿಕೆಟ್‌ ಘೋಷಣೆ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ರಾಜ್ಯಾಧ್ಯಕ್ಷರಾದ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದ್ದಾರೆ. ಕಾಂಗ್ರೆಸ್‌ನ ಹಾಲಿ ಸಂಸದರು ಇರುವ ಕ್ಷೇತ್ರಗಳಲ್ಲಿ ಪ್ರಭಾವಿ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಬೇಕೆಂದು ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ. ಬಳಿಕ ಉಳಿದ ಕ್ಷೇತ್ರಗಳ ಅಭ್ಯರ್ಥಿ ಹೆಸರುಗಳನ್ನು ಪ್ರಕಟಿಸಲಾಗುತ್ತದೆ ಎಂದರು. ಮೋದಿ ಅಲೆ ಗಮನಿಸಿದರೆ ರಾಜ್ಯದಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ಜಯಗಳಿಸಿದರೂ ಅಚ್ಚರಿಯೇನಿಲ್ಲ.

ಮೋದಿಯವರನ್ನು ಸುಳ್ಳುಗಾರ ಎನ್ನುವ ಮುಖ್ಯಮಂತ್ರಿ ಗಿಂತ ದೊಡ್ಡ ಸುಳ್ಳುಗಾರರಿಲ್ಲ. ಮಾಜಿ ಪ್ರಧಾನಿ ಎಚ್‌ .ಡಿ.ದೇವೇಗೌಡರ ಕುಟುಂಬದವರೇ ಸುಳ್ಳುಗಾರರು ಇದಕ್ಕೆ ಪ್ರಮಾಣ ಪತ್ರ ಬೇಕಿಲ್ಲ ಎಂದರು. ಸುಮಲತಾ ಅಂಬರೀಶ್‌ ಅವರು ಸ್ಪರ್ಧೆ ಮಾಡುವುದು ಖಚಿತವಾಗಲಿ. ನಂತರ ಅವರನ್ನು ಬೆಂಬಲಿಸಬೇಕೋ ಅಥವಾ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೋ ಎಂಬುದನ್ನು ಬಿಜೆಪಿ ರಾಜ್ಯಾಧ್ಯಕ್ಷರು ನಿರ್ಧರಿಸಲಿದ್ದಾರೆ. ಅವರು ಬಿಜೆಪಿಗೆ ಬರುವಸಂಬಂಧ ತಾವು ಚರ್ಚೆ  ನಡೆಸಿಲ್ಲ ಎಂದು ಹೇಳಿದರು.

ರಾಹುಲ್‌ ಸತ್ವ  ರಹಿತ ಭಾಷಣ
ಬೆಂಗಳೂರು: ರಾಹುಲ್‌ ಗಾಂಧಿಯವರು ಸಾರ-ಸತ್ವ ಇಲ್ಲದ ಹಳಸಲು ಭಾಷಣ ಮಾಡುವ ಮೂಲಕ ಹಾವೇರಿಯಲ್ಲಿ ಸೇರಿದ್ದ ಜನರನ್ನು ಮರುಳು ಮಾಡಲು ವಿಫ‌ಲಯತ್ನ ನಡೆಸಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಟೀಕಿಸಿದ್ದಾರೆ. ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಇದ್ದರೂ ತಮ್ಮ ಪಕ್ಷವನ್ನು ಮಾತ್ರವೇ ಜನ ಸಾಮಾನ್ಯರ ಪಕ್ಷ ಎಂದು ರಾಹುಲ್‌ ಗಾಂಧಿ ಹೇಳಿರುವುದು ಜೆಡಿಎಸ್‌ ಮೈತ್ರಿಯಿಂದ ಹೊರಬರುವ ತಯಾರಿಯೇ ಎಂಬ ಅನುಮಾನ ಹುಟ್ಟುಹಾಕಿದೆ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷ ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದು 44 ಸೀಟು ಮಾತ್ರ. ಯುಪಿಎ ಸರ್ಕಾರ ಇದ್ದಾಗ ರಫೇಲ್‌ ಯುದ್ಧ ವಿಮಾನ ಖರೀದಿಗೆ ಆದೇಶಿಸಲಾಗಿತ್ತು ಎಂದು ರಾಹುಲ್‌ ಗಾಂಧಿ ಸುಳ್ಳು ಹೇಳಿದ್ದಾರೆ.

Advertisement

ಆದೇಶದ ಪ್ರತಿಯನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಜೈಶ್‌ ಸಂಘಟನೆಯ ಮಸೂದ್‌ ಅಜರ್‌ನ್ನು ಕಂದಹಾರ್‌ಗೆ ಬಿಟ್ಟು ಬಂದರೆಂದು ಟೀಕಿಸುವ ರಾಹುಲ್‌ಗಾಂಧಿ, ಮಸೂದ್‌ ಅಜರ್‌, ದಾವೂದ್‌ ಇಬ್ರಾಹಿಂ, ಕಸಬ್‌ ಮುಂತಾದವರನ್ನು ಬೆಳೆಸಿದ್ದೇ ಕಾಂಗ್ರೆಸ್‌ ಎನ್ನುವುದನ್ನು ಮರೆತಿದ್ದಾರೆ ಎಂದು ಟೀಕಿಸಿದರು.

ಚುನಾವಣಾ ನೀತಿಯಿಂದ ಜನಬಲಕ್ಕೆ ಮಾನ್ಯತೆ 

 ಚುನಾವಣಾ ನೀತಿ ಸಂಹಿತೆ ಇಲ್ಲದೇ ಇದ್ದಿದ್ದರೇ ಬಲಾಡ್ಯರು ಮಾತ್ರ ಗೆಲ್ಲುತ್ತಿದ್ದರು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಚುನಾವಣಾ ನೀತಿ ಸಂಹಿತೆ ಹಾಗೂ ಕಾನೂನು ಗಟ್ಟಿಯಾಗಿದ್ದರಿಂದ ಜನಬಲ ಇದ್ದವರು ಮಾತ್ರ ಗೆಲ್ಲುತ್ತಾರೆ. ಕಾನೂನು, ನೀತಿ ಸಂಹಿತೆಯಡಿಯಲ್ಲಿ ಹಣಬಲ, ತೋಳ್ಬಲ ಗೌಣವಾಗುತ್ತಿದೆ ಎಂದು ಎನ್‌. ರವಿಕುಮಾರ್‌ ಹೇಳಿದ್ದಾರೆ. ಮಲ್ಲೇಶ್ವರದಲ್ಲಿ ನಡೆದ ಬೆಂಗಳೂರು ಮಹಾನಗರ ಮಟ್ಟದ ವಕೀಲರ ಕಾರ್ಯಾಗಾರದಲ್ಲಿ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಹಾಗೂ ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ಚುನಾವಣೆ ಎದುರಿಸಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next