Advertisement

ಮೇ 22ರಂದು BJP ಶಾಸಕಾಂಗ ಪಕ್ಷದ ಸಭೆ ಸಾಧ್ಯತೆ

09:48 PM May 19, 2023 | Team Udayavani |

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಸೋಮವಾರ ನಡೆಯುವ ಸಾಧ್ಯತೆ ಇದ್ದು, ಭವಿಷ್ಯದಲ್ಲಿ ಪಕ್ಷ ಸಂಘಟನೆಗಾಗಿ ಜಾತಿ ಸಮೀಕರಣದ ಲೆಕ್ಕಾಚಾರಗಳು ಪ್ರಾರಂಭವಾಗಿದೆ.

Advertisement

ವಿಪಕ್ಷ ನಾಯಕ ಹಾಗೂ ಉಪನಾಯಕ ಸ್ಥಾನ ಸದನದಲ್ಲಿ ತೀರಾ ಮಹತ್ವದ್ದಾಗಿದೆ. ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಬದಲಾವಣೆಯಾಗಲಿದೆ. ಕುರುಬ – ಒಕ್ಕಲಿಗ ಕಾಂಬಿನೇಷನ್‌ ಕಾಂಗ್ರೆಸ್‌ನಲ್ಲಿ ಮುನ್ನೆಲೆಗೆ ಬಂದಿರುವುದರಿಂದ ಇದಕ್ಕೆ ಪರ್ಯಾಯವಾದ ರೀತಿಯಲ್ಲಿ ಜಾತಿ ಸಮೀಕರಣ ನಡೆಸಬೇಕೆಂಬ ಚರ್ಚೆ ಬಿಜೆಪಿಯಲ್ಲಿ ನಡೆಯುತ್ತಿದೆ. ಹೀಗಾಗಿ ಲಿಂಗಾಯತ, ಹಿಂದುಳಿದ ವರ್ಗ ಹಾಗೂ ಒಕ್ಕಲಿಗ ಸೂತ್ರ ಹೆಣೆಯುವುದಕ್ಕೆ ಬಿಜೆಪಿ ನಿರ್ಧರಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾವ ಸಮುದಾಯದವರನ್ನು ನೇಮಿಸಬೇಕೆಂಬ ಗೊಂದಲ ಬಿಜೆಪಿ ವರಿಷ್ಠರನ್ನು ಕಾಡುತ್ತಿದೆ. ಹಳೆ ಮೈಸೂರು ಭಾಗದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕ ಭಾಗದ ಲಿಂಗಾಯತರಿಗೆ ನೀಡುವುದು ಉತ್ತಮ ಎಂಬ ಚರ್ಚೆ ಪಕ್ಷದ ವಲಯದಲ್ಲಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಸ್‌ ಲೀಡರ್‌ ವರ್ಚಸ್ಸು ಬೇಕೆಂಬ ವಾದವೂ ಇದೆ. ಈ ಎಲ್ಲ ಕಾರಣಗಳಿಂದ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌ ಹೆಸರು ಹೆಚ್ಚು ಚಾಲ್ತಿಯಲ್ಲಿದೆ.

ಯಡಿಯೂರಪ್ಪ ನೇಪಥ್ಯಕ್ಕೆ ಸರಿದಿದ್ದಾರೆ. ಹೀಗಾಗಿ ಪಕ್ಷಕ್ಕೆ ಸಮುದಾಯವನ್ನು ಸೆಳೆದಿಟ್ಟುಕೊಳ್ಳಬಲ್ಲ ಪ್ರಬಲ ವಾಗ್ಮಿ ಹಾಗೂ ಸಂಘಟಕನ ಅಗತ್ಯ ಇದೆ. ಯತ್ನಾಳ್‌ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದು, ಜನಾಕರ್ಷಣೆಯ ವ್ಯಕ್ತಿತ್ವ ಹೊಂದಿದ್ದಾರೆ. ಹೀಗಾಗಿ ಅವರ ಹೆಸರು ಪಕ್ಷದ ಉನ್ನತ ವಲಯದಲ್ಲಿ ಹೆಚ್ಚು ಮಹತ್ವ ಪಡೆದಿದೆ. ಒಂದೊಮ್ಮೆ ಶಾಸಕಾಂಗ ಪಕ್ಷದ ನಾಯಕನಾಗಿ ಬಸವರಾಜ ಬೊಮ್ಮಾಯಿ ಅಥವಾ ಅರವಿಂದ ಬೆಲ್ಲದ್‌ ಅವರನ್ನು ನೇಮಿಸಿದರೆ, ಯತ್ನಾಳ್‌ ಬದಲು ಬೇರೆ ಸಮುದಾಯದವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕಾದೀತು.

ಬಾಕ್ಸ್‌
ಹೊಸ ಮುಖದ ಪ್ರಯೋಗ
ಬೊಮ್ಮಾಯಿ ವಿಪಕ್ಷ ನಾಯಕರಾಗುವುದು ಸೂಕ್ತ ಎಂದು ಕೆಲವರ ವಾದ. ಆದರೆ ಕಾರ್ಯಕರ್ತರು ಹಾಗೂ ಶಾಸಕರು ಈ ಬಗ್ಗೆ ಅಪಸ್ವರ ಎತ್ತುವ ಸಾಧ್ಯತೆ ಇದೆ. ಹೀಗಾಗಿ ಹೊಸ ಮುಖದ ಪ್ರಯೋಗ ಎಂಬ ನೆಲೆಯಲ್ಲಿ ಸುನಿಲ್‌ ಕುಮಾರ್‌ ಹಾಗೂ ಅರವಿಂದ ಬೆಲ್ಲದ್‌ ಹೆಸರು ಹೆಚ್ಚು ಚರ್ಚೆಯಲ್ಲಿದೆ. ಒಂದೊಮ್ಮೆ ಲಿಂಗಾಯತರು ರಾಜ್ಯಾಧ್ಯಕ್ಷರಾದರೆ ಹಿಂದುಳಿದ ವರ್ಗ ಅಥವಾ ಒಕ್ಕಲಿಗ ಸಮುದಾಯಕ್ಕೆ ಸೇರಿದವರಿಗೆ ವಿಪಕ್ಷ ನಾಯಕ ಹಾಗೂ ಉಪನಾಯಕನ ಸ್ಥಾನ ನೀಡಬಹುದು ಎನ್ನಲಾಗುತ್ತಿದೆ. ಜತೆಗೆ ವಿಪಕ್ಷ ಸಚೇತಕ ಸ್ಥಾನದ ಬಗ್ಗೆಯೂ ಸೋಮವಾರ ನಡೆಯುವ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next