Advertisement

ಬೆಳಗಾವಿಯಲ್ಲಿ ಬಿಜೆಪಿ ನಾಯಕರ ಮಾರಾಮಾರಿ

06:30 AM Mar 12, 2018 | Team Udayavani |

ಬೆಳಗಾವಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಒಳಬೇಗುದಿ ಭುಗಿಲೆದ್ದಿದೆ. ಶನಿವಾರ ಕಲಬುರಗಿಯಲ್ಲಿ ಕಾರ್ಯಕರ್ತರ ಮಾರಾಮಾರಿ ನಡೆದ ಬೆನ್ನಲ್ಲೇ ಭಾನುವಾರ ನಗರದಲ್ಲಿ ನಡೆದ ಬಿಜೆಪಿ ಬೂತ್‌ಮಟ್ಟದ ಸಭೆಯಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಪಿ.ಡಿ. ಧೋತ್ರೆ ಹಾಗೂ ಮುಖಂಡ ಸುನೀಲ ಚೌಗಲೆ ಮೇಲೆ ಮಾಜಿ ಶಾಸಕ ಹಾಗೂ ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ.

Advertisement

ಅನಗೋಳದ ಭಾಗ್ಯನಗರ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ನವಶಕ್ತಿ ಸಮಾವೇಶದಲ್ಲಿ ಬಿಜೆಪಿ ಮುಖಂಡರೇ ಒಬ್ಬರಿಗೊಬ್ಬರೂ ಹೊಡೆದಾಡಿಕೊಂಡು ಬೀದಿಗೆ ಬಂದಿದ್ದು,  ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಬೂತ್‌ಮಟ್ಟದ ಸಭೆಯಲ್ಲಿ ಮಾಜಿ ಶಾಸಕ ಅಭಯ ಪಾಟೀಲ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು. ಸಭೆ ನಡೆಯುತ್ತಿದ್ದಂತೆ ಬಿಜೆಪಿ ಮುಖಂಡ ಹಾಗೂ ಟಿಕೆಟ್‌ ಆಕಾಂಕ್ಷಿ ಪಿ.ಡಿ. ಧೋತ್ರೆ ಸಭೆಗೆ ಬಂದಿದ್ದಾರೆ. ಆಗ ಸಭೆಗೆ ಏಕೆ ಬಂದಿದ್ದೀಯಾ ಎಂದು ಮಾಜಿ ಶಾಸಕರ ಬೆಂಬಲಿಗರು ಪ್ರಶ್ನಿಸಿದ್ದಾರೆ. ಆಗ ಧೋತ್ರೆ ಅವರು ಸಮಾವೇಶಕ್ಕೆ ಬರುವಂತೆ ಸಂದೇಶ ಬಂದಿದೆ. ಹೀಗಾಗಿ  ಬಂದಿರುವುದಾಗಿ ತಿಳಿಸುತ್ತಿದ್ದಂತೆ ಮಾಜಿ ಶಾಸಕ ಅಭಯ ಪಾಟೀಲ್‌ ಹಾಗೂ ಧೋತ್ರೆ ನಡುವೆ ಮಾತಿನ ಚಕಮಕಿ ನಡೆದಿದೆ. ಮಧ್ಯೆ ಪ್ರವೇಶಿಸಿದ ಅಭಯ ಪಾಟೀಲ್‌ ಬೆಂಬಲಿಗರು ಹಾಗೂ ಧೋತ್ರೆ ನಡುವೆ ಗುದ್ದಾಟ ಆರಂಭವಾಗುತ್ತಿದ್ದಂತೆ ಪರಸ್ಪರ  ಹೊಡೆದಾಡಿಕೊಂಡಿದ್ದಾರೆ. ಆಗ ಧೋತ್ರೆ ಅವರಿಗೆ  ಹಿಗ್ಗಾಮುಗ್ಗಾ ಥಳಿಸಲಾಗಿದೆ. ಸುನೀಲ ಚೌಗಲೆ  ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಸಮಾವೇಶದಲ್ಲಿ ಬಿಜೆಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಸಹ ಸಂಘಟನಾ ಕಾರ್ಯದರ್ಶಿ ರವಿ ಹಿರೇಮಠ ಸೇರಿ ಪಕ್ಷದ ಪದಾಧಿಕಾರಿಗಳು ಇದ್ದರು. ಇವರ ಸಮ್ಮುಖದಲ್ಲೇ ಗಲಾಟೆ ನಡೆದಿದ್ದು ತೀವ್ರ ಇರಸುಮುರಸು ಉಂಟು ಮಾಡಿದೆ. ಗಾಯಗೊಂಡ ಪಿ.ಡಿ. ಧೋತ್ರೆ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ನಂತರ  ಬಿಜೆಪಿ ಪದಾಧಿಕಾರಿಗಳು, ಮುಖಂಡರು ಆಗಮಿಸಿ ಆರೋಗ್ಯ ವಿಚಾರಿಸಿದರು. ಆವರಣದ ಸುತ್ತ ಕಾರ್ಯಕರ್ತರು ಜಮಾಯಿಸಿದ್ದರು. ಕೆಲಕಾಲ ಈ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸುದ್ದಿ ಹರಡುತ್ತಿದ್ದಂತೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಹಾಗೂ ನೇಕಾರರ ನಾಯಕ ಎಂ.ಡಿ. ಲಕ್ಷ್ಮೀನಾರಾಯಣ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಧೋತ್ರೆ ಅವರ ಆರೋಗ್ಯ ವಿಚಾರಿಸಿದರು.

ಯಾರ ಮೇಲೂ ನಾವು ಹಲ್ಲೆ ನಡೆಸಿಲ್ಲ. ಸುಳ್ಳು ಆರೋಪ ಹೊರಿಸಿ ಎಂಇಎಸ್‌ನವರಿಗೆ ಬೆಂಬಲ ನೀಡುವ ಕುತಂತ್ರ ಇದಾಗಿದೆ. ರಾಜಕೀಯವಾಗಿ ನಮ್ಮನ್ನು ತುಳಿಯುವ ಪ್ರಯತ್ನ ಇದಾಗಿದೆ. ಎಂಇಎಸ್‌ ಬೆಂಬಲಿಗರ ಹೊಸ ನಾಟಕ ಇದಾಗಿದೆ. ಹಲ್ಲೆ ಮಾಡುವಂಥ ಪ್ರವೃತ್ತಿಗೆ ನಾವು ಇಳಿಯುವುದಿಲ್ಲ.
– ಅಭಯ ಪಾಟೀಲ, ಮಾಜಿ ಶಾಸಕ

Advertisement

ನೇಕಾರರ ಮುಖಂಡ ಧೋತ್ರೆ ಅವರ ಮೇಲೆ ಹಲ್ಲೆ ನಡೆಸಿರುವ ಮಾಜಿ ಶಾಸಕರ ಗೂಂಡಾವರ್ತನೆಯನ್ನು ನಾವು ಖಂಡಿಸುತ್ತೇವೆ. ಈ ಬಗ್ಗೆ ಗೃಹ ಸಚಿವರು ಹಾಗೂ ಐಜಿಪಿ ಗಮನಕ್ಕೆ ತಂದು ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಲಾಗುವುದು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
– ಎಂ.ಡಿ. ಲಕ್ಷ್ಮೀನಾರಾಯಣ, ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ

Advertisement

Udayavani is now on Telegram. Click here to join our channel and stay updated with the latest news.

Next