Advertisement

ಸಿಎಂ ಬದಲಾವಣೆ ವದಂತಿ: ಊಹಾಪೋಹಗಳ ಮೇಲೆ ಕಾಂಗ್ರೆಸ್ ರಾಜಕಾರಣ; ಸಚಿವ ಸುನಿಲ್‌ ಕುಮಾರ್‌

09:43 PM Aug 09, 2022 | Team Udayavani |

ಬೆಂಗಳೂರು:ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯಾಗುತ್ತದೆ ಎಂದು ಕಾಂಗ್ರೆಸ್‌ ನಾಯಕರು ಮಾಡುತ್ತಿರುವ ಆರೋಪಕ್ಕೆ ಸಚಿವರು ತಿರುಗೇಟು ನೀಡಿದ್ದು, ಸಚಿವರಾದ ಆರ್‌.ಅಶೋಕ್‌, ಸುನಿಲ್‌ ಕುಮಾರ್‌, ಸಿ.ಸಿ. ಪಾಟೀಲ್‌, ಡಾ.ಕೆ.ಸುಧಾಕರ್‌, ಎಸ್‌.ಟಿ. ಸೋಮಶೇಖರ್‌ ಮತ್ತಿತರರು ಸಿಎಂ ಬೊಮ್ಮಾಯಿ ಬೆಂಬಲಕ್ಕೆ ನಿಂತಿದ್ದಾರೆ.

Advertisement

ಕಾಂಗ್ರೆಸ್‌ ಮಾಡುತ್ತಿರುವ ಆರೋಪಗಳನ್ನು ತಳ್ಳಿ ಹಾಕಿರುವ ಸಚಿವರು, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಮನೆ ಕೆಡಿಸುವ ಕೆಲಸ:
ಕಾಂಗ್ರೆಸ್‌ ಮನೆಯೇ ಕೆಟ್ಟು ಹೋಗಿದೆ. ಹೀಗಿರುವಾಗಲೂ ಕಾಂಗ್ರೆಸ್‌ಗೆ ಉಳಿದವರ ಮನೆ ಕೆಡಿಸುವುದು ಹೇಗೆ ಎಂಬ ಚಿಂತೆ ಶುರುವಾಗಿದೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ವಾಗ್ಧಾಳಿ ನಡೆಸಿದ್ದಾರೆ. ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಕಾಂಗ್ರೆಸ್‌ಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆ ಹೋಗುತ್ತೇವೆ ಎಂದು ಪಕ್ಷದ ಹೈಕಮಾಂಡ್‌ ಹೇಳಿದೆ. ನಿಮಗೆ ತಾಕತ್ತಿದ್ದರೆ ಯಾರ ನೇತೃತ್ವದಲ್ಲಿ ಚುನಾವಣೆ ಹೋಗುತ್ತೀರಿ ಎನ್ನುವುದನ್ನು ಹೇಳಿ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದ್ದಾರೆ.

ಚುನಾವಣೆ ನಂತರವೂ ಬೊಮ್ಮಾಯಿ ಸಿಎಂ:
“ಮೂರನೇ ಸಿಎಂ ಪ್ರಶ್ನೆಯೇ ಇಲ್ಲ. ಈಗಲೂ, ಮುಂದೆಯೂ ಮತ್ತು ಚುನಾವಣೆ ನಂತರವೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿರಲಿದ್ದಾರೆ. ಇದರಲ್ಲಿ ಅನುಮಾನವೇ ಬೇಡ’ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಮಿತ್‌ ಶಾರಿಂದ ಕಾಂಗ್ರೆಸ್‌ಗೆ ಮೂಲೆಗುಂಪಾಗುವ ಭೀತಿ ಕಾಡುತ್ತಿದೆ. ಇದರಿಂದ ಭ್ರಮನಿರಸನಗೊಂಡು ಹೀಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಅಮಿತ್‌ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದಾಗಲೂ, ಸರಳ ಮುಖ್ಯಮಂತ್ರಿ ಬೊಮ್ಮಾಯಿ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಹೀಗಿರುವಾಗ, ಯಾರಾದರೂ ಬದಲಾವಣೆಗೆ ಪ್ರಯತ್ನಪಟ್ಟರೆ ಅಂತಹವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕಾಗುತ್ತದೆ ಎಂದೂ ಸಚಿವ ಅಶೋಕ ಹೇಳಿದ್ದಾರೆ.

Advertisement

ಕಾಂಗ್ರೆಸ್ಸಿಗೆ ಅಜೀರ್ಣ
ಮುಖ್ಯಮಂತ್ರಿಗಳನ್ನು ಪದೇ ಪದೆ ತಮ್ಮಿಷ್ಟಕ್ಕೆ ತಕ್ಕಂತೆ ಬದಲಾಯಿಸುವ ಚಾಳಿ ಇರುವುದು ಕಾಂಗ್ರೆಸ್ಸಿನ ಹೈಕಮಾಂಡಿನಲ್ಲಿ. ಜನಪರ ಆಡಳಿತ ನೀಡುತ್ತಾ ಒಂದು ವರ್ಷದ ಆಡಳಿತವನ್ನು ಬೊಮ್ಮಾಯಿ ಅವರು ಸಮರ್ಥವಾಗಿ ನೀಡಿದ್ದಾರೆ. ಮುಂದೆಯೂ ಸುಭದ್ರ ಸರ್ಕಾರ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಸಲಹೆ ನೀಡಿದ್ದಾರೆ.

ಇದು ಚೀಟಿ ಮಿನಿಸ್ಟರ್‌ ಕಾಲವಲ್ಲ
ಕಾಂಗ್ರೆಸ್‌ ಆಳ್ವಿಕೆ ಕಾಲದಲ್ಲಿ ಸಿಎಂ ಎಂದರೆ ಚೀಫ್ ಮಿನಿಸ್ಟರ್‌ ಬದಲು ಚೀಟಿ ಮಿನಿಸ್ಟರ್‌ ಎಂಬಂತಾಗಿತ್ತು. ದಿಲ್ಲಿ ಪೋಸ್ಟ್‌ಮೆನ್‌ಗಳು ಕಳುಹಿಸಿದ ಚೀಟಿ ಆಧಾರದ ಮೇಲೆ ಕಾಂಗ್ರೆಸ್‌ ಬದಲಾಯಿಸಿದ ಮುಖ್ಯಮಂತ್ರಿಗಳ ಸಂಖ್ಯೆಯ ಲೆಕ್ಕ ಕೊಡಬೇಕೇ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಪ್ರಶ್ನಿಸಿದ್ದಾರೆ.

ಬಿಜೆಪಿಯಲ್ಲಿ ಯಾವುದೇ ರೀತಿಯ ಆಂತರಿಕ ಸಮಸ್ಯೆ ಇಲ್ಲ. ಸಿಎಂ ಬದಲಾವಣೆ ನೂರಕ್ಕೆ ನೂರು ಸುಳ್ಳು ಪ್ರಚಾರ ಮತ್ತು ಕಾಂಗ್ರೆಸ್‌ ಹುನ್ನಾರ. ಅಧಿಕಾರಕ್ಕೆ ಬರಬೇಕು ಎಂಬ ಕಾಂಗ್ರೆಸ್‌ ಕನಸು ಈಡೇರುವುದಿಲ್ಲ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

 

ಇದನ್ನೂ ಓದಿ: ಮೈದಾ, ರವೆ, ಗೋಧಿ ಹಿಟ್ಟು ರಫ್ತಿಗೆ ನಿರ್ಬಂಧ: ಆ.14ರಿಂದ ಜಾರಿ ಎಂದ ಕೇಂದ್ರ ಸರ್ಕಾರ

Advertisement

Udayavani is now on Telegram. Click here to join our channel and stay updated with the latest news.

Next