ಬೆಂಗಳೂರು: ಮಹದಾಯಿ ನೀರು ತರುವುದಾಗಿ ರಾಜ್ಯದ ಜನತೆಗೆ ಸುಳ್ಳು ಹೇಳಿ ಕುತಂತ್ರ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಪ್ರಲ್ಹಾದ್ ಜೋಷಿ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಲಿ. ರಾಜ್ಯದ ಜನತೆಗೆ ಮೋಸ ಮಾಡುವ ಕುತಂತ್ರಕ್ಕೆ ಸಹಕರಿಸಿದ್ದಕ್ಕೆ ಜಗದೀಶ್ ಶೆಟ್ಟರ್ ಪ್ರತಿಪಕ್ಷದ ನಾಯಕನ ಸ್ಥಾನ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಮೂವರೂ ನಾಯಕರು ರಾಜ್ಯದ ಜನತೆಗೆ ದ್ರೋಹ ಬಗೆದಿದ್ದು, ಸಾರ್ವಜನಿಕ ಜೀವನದಲ್ಲಿ ಮುಂದುವರೆಯಲು ನೈತಿಕ ಹಕ್ಕಿಲ್ಲ. ಅವರು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ರೈತರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಗೋವಾ ಮುಖ್ಯಮಂತ್ರಿ ಪರಿಕ್ಕರ್ ಯಡಿಯೂರಪ್ಪಗೆ ಪತ್ರ ಬರೆಯಲು ಬೇರೆ ಕಾರಣ ಇದೆ ಎಂದು ಹೇಳಿದ್ದಾರೆ. ಯಾವ ಕಾರಣಕ್ಕಾಗಿ ಅವರು ಪತ್ರ ಬರೆದಿದ್ದರು ಎನ್ನುವುದನ್ನು ರಾಜ್ಯ ಬಿಜೆಪಿ ನಾಯಕರು ಬಹಿರಂಗ ಪಡಿಸಬೇಕು. ಬಿಜೆಪಿಯವರ ನಾಟಕ ಬಟಾ ಬಯಲಾಗಿದೆ.
ರೈತರನ್ನು ಪರಿವರ್ತನಾ ಯಾತ್ರೆಗೆ ಬರುವಂತೆ ಮಾಡಲು ನೀರು ತರುತ್ತೇವೆಂದು ಪತ್ರ ಬರೆಸಿದ ಕುತಂತ್ರ ರಾಜ್ಯದ ಜನತೆಗೆ ಅರ್ಥವಾಗಿದೆ. ಬಿಜೆಪಿಯಂತಹ ರಾಷ್ಟ್ರೀಯ ಪಕ್ಷ ಚುನಾವಣೆಗಾಗಿ ಈ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯುತ್ತದೆ ಎಂದು ಅಂದು ಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗೋವಾ ಮುಖ್ಯಮಂತ್ರಿ ಪರಿಕ್ಕರ್ ಅವರ ಹೇಳಿಕೆಯಿಂದ ರಾಜ್ಯದ ಜನತೆ ಆಕ್ರೋಶಗೊಂಡಿದ್ದಾರೆ. ಪರಿಕ್ಕರ್ ಸಾಮಾನ್ಯ ವ್ಯಕ್ತಿಯಲ್ಲ. ಅವರು ಒಂದು ರಾಜ್ಯದ ಸಂವಿಧಾನ ಬದ್ದವಾಗಿ ಆಯ್ಕೆಯಾಗಿರುವ ಮುಖ್ಯಮಂತ್ರಿ. ಈ ದೇಶದಲ್ಲಿ ರಾಷ್ಟ್ರೀಯ ಜಲ ನೀತಿ ಜಾರಿಗೆ ತರುವಾಗ ಎಲ್ಲ ರಾಜ್ಯಗಳು ಒಪ್ಪಿಕೊಂಡಿದ್ದವು.
ಅದನ್ನು ವಿರೋಧಿಸಿರುವ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಅರ್ಹರಲ್ಲಾ ಎಂದು ಹೇಳಿದರು. ಮಹದಾಯಿಯಿಂದ 200 ಟಿಎಂಸಿ ನೀರು ಸಮುದ್ರ ಸೇರುತ್ತದೆ. ಮಹದಾಯಿಗೆ ನಮ್ಮ ನೆಲದಲ್ಲಿ ಹರಿಯುವ ನೀರು ಸೇರಿರುವುದರಿಂದ ನಮ್ಮ ನೀರು ನಮಗೆ ಸೇರಲೇಬೇಕು.
ಆದರೆ, ಪರಿಕ್ಕರ್ ಕುಡಿಯೋ ನೀರು ಕೊಡುವುದಿಲ್ಲ ಎಂದು ಹೇಳುತ್ತಾರೆ. ಈ ಮೂಲಕ ರಾಷ್ಟ್ರೀಯ ಜಲ ನೀತಿಯನ್ನು ವಿರೋಧಿಸಿದ್ದಾರೆ. ಬಿಜೆಪಿಯವರು ರಾಜ್ಯದಲ್ಲಿ ಕುತಂತ್ರದ ರಾಜಕಾರಣ ಮಾಡುವ ಬದಲು ಪ್ರಧಾನಿ ಬಳಿಗೆ ಹೋಗಿ ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಳ್ಳಲಿ ಎಂದು ಸಲಹೆ ನೀಡಿದರು.