Advertisement

ಬಿಜೆಪಿ ನಾಯಕರದು ಎರಡು ನಾಲಿಗೆ

09:41 AM Oct 25, 2017 | |

ಬೆಂಗಳೂರು: “ಈ ಹಿಂದೆ ಟಿಪ್ಪು ವೇಷ ಹಾಕಿ ಫೋಟೊ ತೆಗೆಸಿಕೊಂಡು ಟಿಪ್ಪುನನ್ನು ಹೊಗಳಿರುವ ಬಿಜೆಪಿ ನಾಯಕರಾದ  ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಅಶೋಕ್‌ ಅವರು ಈಗ ಟಿಪ್ಪು ದೇಶದ್ರೋಹಿ ಎನ್ನುತ್ತಿರುವುದೇಕೆ’ ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಬಿಜೆಪಿಯವರಿಗೆ ಎರಡು ನಾಲಿಗೆ ಇದೆ’ ಎಂದು ಹೇಳಿದ್ದಾರೆ.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, “ವಿಧಾನಸಭೆಗೆ ಚುನಾವಣೆ ಬರುತ್ತಿದೆ ಎಂಬ ಕಾರಣಕ್ಕೆ ಬಿಜೆಪಿಯವರು ಟಿಪ್ಪು ಜಯಂತಿಗೆ ವಿರೋಧ ಮಾಡುತ್ತಿದ್ದಾರೆ. ರಾಜ್ಯದ ಜನತೆ ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ವೇಷ ಹಾಕಿಕೊಂಡು, ಖಡ್ಗ ಹಿಡಿದು, ಅಲ್ಲಾನ ಮೇಲಾಣೆ ನಾನು ಮತ್ತೆ ಬಿಜೆಪಿಗೆ ಹೋಗುವುದಿಲ್ಲ ಎಂದು  ಕೂಗಿದ್ದೇ ಕೂಗಿದ್ದು. ಇಂತಹ ರಾಜಕೀಯ ಇಬ್ಬಂದಿತನ ಜನರಿಗೂ ಗೊತ್ತಾಗುತ್ತದೆ.
ಆಗೊಂದು, ಈಗೊಂದು ನಾಟಕವಾಡುವ ಯಡಿಯೂರಪ್ಪ ಅವರ ಮಾತಿಗೆ ಕಿಮ್ಮತ್ತಿಲ್ಲ ಎಂದು ಹೇಳಿದರು.

ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿ ಅಶೋಕ್‌ ಉಪ ಮುಖ್ಯಮಂತ್ರಿಯಾಗಿ ಟಿಪ್ಪು ವೇಷ ಧರಿಸಿ ಹಾಡಿ ಹೊಗಳಿದ್ದರು. ಅಷ್ಟೇ ಅಲ್ಲ ಶೆಟ್ಟರ್‌, ಟಿಪ್ಪು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರು. ಈಗ ಟಿಪ್ಪುವನ್ನು ವಿರೋಧಿ ಸುತ್ತಿರುವುದು ರಾಜಕೀಯ ಪ್ರೇರಿತ ಎಂದರು. ರಾಜಕೀಯ ಕಾರಣಕ್ಕೆ ಟಿಪ್ಪು ಜಯಂತಿ ವಿರೋಧಿಸುವ ಬಿಜೆಪಿಯವರು ಹಿಂದು ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ಈ ನಡವಳಿಕೆ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನವಾಗಿದ್ದು, ಕಾನೂನು ಕೈಗೆ ತೆಗೆದು
ಕೊಳ್ಳಲು ನಾವು ಬಿಡುವುದಿಲ್ಲ ಎಂದರು.

ಟಿಪ್ಪು ಜಯಂತಿ ಆಚರಣೆ ಸರ್ಕಾರದ ತೀರ್ಮಾನ. ಅದನ್ನು ವಿರೋಧಿಸುವವರಿಗೆ ಸಂವಿಧಾನ ಗೊತ್ತಿಲ್ಲ. ಜನಪ್ರತಿನಿಧಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ಸಂವಿಧಾನಕ್ಕೆ ಗೌರವ ನೀಡುವುದಾಗಿ ಹೇಳುತ್ತಾರೆ. ಈಗ ಈ ರೀತಿ ಅಗೌರವ ತೋರುತ್ತಾರೆ ಎಂದು ಹೇಳಿದರು. 

ದೊಡ್ಡದು ಮಾಡೋದು ಸಲ್ಲ
ಹೂವಿನಹಡಗಲಿ: “ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಮಧ್ಯೆ ನಡೆಯುತ್ತಿರುವ ವಾಕ್ಸಮರ ಸರಿಯಲ್ಲ. ವಿನಾಕಾರಣ ಈ ವಿಷಯವನ್ನು ದೊಡ್ಡದು ಮಾಡಲಾಗುತ್ತಿದೆ’ ಎಂದು ಮಾಜಿ ಪ್ರಧಾನಿ ಎಚ್‌ .ಡಿ.ದೇವೇಗೌಡ ವಿಷಾದಿಸಿದರು. ಮಂಗಳವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ಈ ಹಿಂದೆ‌ ಕೆಜೆಪಿಯಲ್ಲಿದ್ದಾಗ ಬಿ.ಎಸ್‌. ಯಡಿಯೂರಪ್ಪ ಅವರು ಟಿಪ್ಪು ಜಯಂತಿ ಆಚರಿಸಿದರೆ ತಪ್ಪೇನಿಲ್ಲ ಎಂದು ಹೇಳಿದ್ದರು. ಈಗ ಕಾಂಗ್ರೆಸ್‌ನವರು ಅದನ್ನು ಆಚರಣೆ ಮಾಡುತ್ತಿದ್ದಾರೆ. ಈಗ
ಬಿಜೆಪಿಯವರು ಅದನ್ನೇ ದೊಡ್ಡದು ಮಾಡುತ್ತಿರುವುದು ಸರಿಯಲ್ಲ ಎಂದರು.

Advertisement

ಬಿಜೆಪಿಯಿಂದ ಆಯ್ಕೆಯಾದ ಕೇಂದ್ರದ ಮಂತ್ರಿಯೊಬ್ಬರು ನಾನು ಇಸ್ಲಾಂ ಧರ್ಮದ ಮತ ಕೇಳುವುದಿಲ್ಲ. ನನಗೆ ಅದರ
ಅವಶ್ಯಕತೆಯೂ ಇಲ್ಲ ಎಂದು ಹೇಳಿಕೆ ನೀಡಿರುವುದು ಸಂವಿಧಾನ ವಿರೋಧಿ ಕ್ರಮ. ಯಾರಾದರೂ ಸುಪ್ರೀಂಕೋಟ್‌ನಲ್ಲಿ ಈ ಕುರಿತು ಪ್ರಕರಣ ದಾಖಲಿಸಿದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ವಿರುದ್ಧ ಪರೋಕ್ಷವಾಗಿ ಕುಟುಕಿದರು.

ಟಿಪ್ಪು ಸುಲ್ತಾನ್‌ ಬ್ರಿಟಿಷರ ವಿರುದ್ಧ ಹೋರಾಡಿ, ತನ್ನ ಮಕ್ಕಳನ್ನೇ ಒತ್ತೆ ಇಟ್ಟಿದ್ದ. ಬಿಜೆಪಿಯವರು ಸಮಾಜದಲ್ಲಿ ಜಗಳ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ. 224 ಕ್ಷೇತ್ರಗಳಲ್ಲಿ ಬಿಜೆಪಿ ಒಂದು ಕಡೆಗೂ ಮುಸ್ಲಿಮರಿಗೆ ಟಿಕೆಟ್‌ ಕೊಟ್ಟಿಲ್ಲ. ಹಾಗಾಗಿ, ಅಲ್ಪಸಂಖ್ಯಾತರು ತಮ್ಮನ್ನು ಯಾರು ರಕ್ಷಣೆ ಮಾಡುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
●ರುದ್ರಪ್ಪ ಲಮಾಣಿ, ಜವಳಿ ಹಾಗೂ ಮುಜರಾಯಿ ಸಚಿವ
 

Advertisement

Udayavani is now on Telegram. Click here to join our channel and stay updated with the latest news.

Next