ಉತ್ತರಾಖಂಡ್: ಬಿಜೆಪಿ ಮುಖಂಡರೊಬ್ಬರ ಪುತ್ರಿಯ ವಿವಾಹ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದಕ್ಕೆ ಕಾರಣ ಉತ್ತರಾಖಂಡ್ ನ ಪೌರಿ ಪ್ರದೇಶದ ಬಿಜೆಪಿ ಮುಖಂಡ ಯಶ್ ಪಾಲ್ ಬೇನಾಮ್ ಪುತ್ರಿ ಮುಸ್ಲಿಂ ಯುವಕನ ಜೊತೆ ಹಸೆಮಣೆ ಏರಲು ಸಜ್ಜಾಗಿರುವುದು!
ಇದನ್ನೂ ಓದಿ:Virat Kohli ಜೆರ್ಸಿ ಸಂಖ್ಯೆ 18 ಯಾಕೆ? ಅದರ ಹಿಂದಿನ ಕಥೆ ಹೇಳಿದ ಆರ್ ಸಿಬಿ ಬ್ಯಾಟರ್
ಬೇನಾಮ್ ಪುತ್ರಿಯ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದು, ಬಿಜೆಪಿ ಬೆಂಬಲಿಗರು ಹಾಗೂ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಿಂದುತ್ವವಾದಿಗಳು ಮಾಜಿ ಶಾಸಕ ಬೇನಾಮ್ ಅವರ ಇಬ್ಬಗೆ ನೀತಿಯ ಕುರಿತು ಟ್ರೋಲ್ ಮಾಡಿದ್ದಾರೆ. ಬೇರೆಯವರು ಮುಸ್ಲಿಂ ಯುವಕನನ್ನು ವಿವಾಹವಾದರೆ ಲವ್ ಜಿಹಾದ್ ಎಂದು ಆರೋಪಿಸುತ್ತಿರುವ ಬಗ್ಗೆ ಜಾಲತಾಣದಲ್ಲಿ ಟೀಕೆಯನ್ನು ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
“ದ ಕೇರಳ ಸ್ಟೋರಿ” ಸಿನಿಮಾಕ್ಕೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿ ನೀಡಲಾಗಿದ್ದು, ಇಲ್ಲಿ ಬಿಜೆಪಿ ಮುಖಂಡರೊಬ್ಬರ ಮಗಳು ಮುಸ್ಲಿಂ ಯುವಕನ ಜೊತೆ ವಿವಾಹವಾಗುತ್ತಿದ್ದಾರೆ. ಬಿಜೆಪಿಯ ಇಂತಹ ಇಬ್ಬಗೆಯ ನೀತಿಗಳು ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಗ್ಗಿಸಲಿದೆ ಎಂದು ಫೇಸ್ ಬುಕ್ ಬಳಕೆದಾರರೊಬ್ಬರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ಯುವಕರು ಹಿಂದೂ ಯುವತಿಯನ್ನು ವಿವಾಹವಾಗುವ ಮೂಲಕ ಮತಾಂತರಗೊಳಿಸುತ್ತಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಹಾಗೂ ಬಲ ಪಂಥೀಯ ಸಂಘಟನೆಯ ಕಾರ್ಯಕರ್ತರು ಇದೊಂದು ಲವ್ ಜಿಹಾದ್ ಎಂದು ಕರೆದಿದ್ದರು.
ಭಾರತದಲ್ಲಿ ಮತಾಂತರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ ಬಿಜೆಪಿಯ ಮುಖಂಡರು ತಮ್ಮ ಮಗಳನ್ನು ಮುಸ್ಲಿಂ ಯುವಕನಿಗೆ ಧಾರೆ ಎರೆಯುತ್ತಿದ್ದಾರೆ. ಈ ಬಗ್ಗೆ ವಿಶ್ವ ಹಿಂದೂ ಪರಿಷತ್ , ಬಜರಂಗ ದಳ ವಿರೋಧಿಸಬೇಕಾಗಿದೆ ಎಂದು ಪೌರಿ ದೇವಾಲಯ ಆಡಳಿತ ಮಂಡಳಿಯ ಸದಸ್ಯರೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಮೇ 28ರಂದು ಬೇನಾಮಿ ಪುತ್ರಿಯ ವಿವಾಹ ನಡೆಯಲಿದೆ. ಈ ಮದುವೆ ಕಾರ್ಯಕ್ರಮಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರನ್ನು ಆಹ್ವಾನಿಸಲಾಗಿದೆ ಎಂದು ವರದಿ ತಿಳಿಸಿದೆ.