Advertisement
ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ ಬಹಿರಂಗ ಸಭೆ ನಡೆದ ಬಿಜೆಪಿ ಮುಖಂಡರು ಬಳಿಕ ಮಂಗಳೂರಿಗೆ ಬೈಕ್ ರ್ಯಾಲಿ ಹೊರಡಬೇಕಿತ್ತು. ನಿಷೇದಾಜ್ಞೆ ನಡುವೆಯೂ ಪೊಲೀಸರು ಬಹಿರಂಗ ಸಭೆಗೆ ಅನುಮತಿ ನೀಡಿದ್ದರಾದರೂ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಅನುಮತಿ ನಿರಾಕರಿಸಿದ್ದರು.
Related Articles
Advertisement
ಕೆಲವರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಫ್ರೀಡಂ ಪಾರ್ಕ್ಗೆ ಬಂದು ಸೇರಿದರೆ, ಇನ್ನು ಕೆಲವರನ್ನು ಮಾರ್ಗಮಧ್ಯೆಯೇ ಪೊಲೀಸರು ತಡೆದು ವಾಪಸ್ ಕಳುಹಿಸಿದ್ದರು. ಇದರ ನಡುವೆಯೇ ಶಾಸಕರಾದ ಆರ್.ಅಶೋಕ್, ವೈ.ಎ.ನಾರಾಯಣಸ್ವಾಮಿ, ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯನಾಯ್ಡು , ವಿ.ಸೋಮಣ್ಣ , ವಿಧಾನಪರಿಷತ್ ಸದಸ್ಯ ಪುಟ್ಟಸ್ವಾಮಿ ಮತ್ತಿತರರು ತಮ್ಮ ಕ್ಷೇತ್ರವ್ಯಾಪ್ತಿಯ ಕಾರ್ಯಕರ್ತರೊಂದಿಗೆ ಫ್ರೀಡಂ ಪಾರ್ಕ್ನತ್ತ ಬರಲಾರಂಭಿಸಿದರು.
ಆದರೆ, ಬಸವನಗುಡಿ ಕ್ಷೇತ್ರದಿಂದ ರವಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಆಗಮಿಸುತ್ತಿದ್ದ 60 ಮಂದಿ ಕಾರ್ಯಕರ್ತರನ್ನು ಟೌನ್‌ಹಾಲ್ ಬಳಿ ಪೊಲೀಸರು ವಶಕ್ಕೆ ಪಡೆದರೆ, ಹೆಬ್ಟಾಳ , ಮಲ್ಲೇಶ್ವರ ಕಡೆಯಿಂದ ಬರುತ್ತಿದ್ದ ಶೋಭಾ ಕರಂದ್ಲಾಜೆ, ಆರ್. ಅಶೋಕ್ ಅವರನ್ನು ಮೌರ್ಯ ಹೋಟೆಲ್ ಬಳಿ ತಡೆಯಲಾಯಿತು. ಸತೀಶ್ ರೆಡ್ಡಿ , ಸೋಮಣ್ಣ , ಬಿಬಿಎಂಪಿ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಸೇರಿದಂತೆ ಹಲವರನ್ನೂ ಇದೇ ರೀತಿ ಮಾರ್ಗಮಧ್ಯೆ ತಡೆಯಲಾಯಿತು.
ಅದರ ನಡುವೆಯೂ ನಾಯಕರು ಫ್ರೀಡಂ ಪಾರ್ಕ್ ಸೇರಿದರು. ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬಹಿರಂಗಸಭೆಯಲ್ಲಿ ಮುಖಂಡರು ಮಾತು ಮುಗಿಸುತ್ತಿದ್ದಂತೆ ವಿವಿಧೆಡೆಯಿಂದ ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ್ದ ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿ ಮುಂದುವರಿಸಲು ನಿರ್ಧರಿಸಿದರು. ಆದರೆ, ಅವರಿಗೆ ಬೈಕ್ ತೆಗೆಯಲು ಪೊಲೀಸರು ಅವಕಾಶ ನೀಡದೆ ರ್ಯಾಲಿ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ ಏರ್ಪಟ್ಟಿತು. ಕಾರ್ಯಕರ್ತರ ದಾಂಧಲೆ ಹೆಚ್ಚಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು. ಬೈಕ್ ರ್ಯಾಲಿ ನಡೆಸುವ ಬಗ್ಗೆ 15 ದಿನಗಳ ಮುನ್ನವೇ ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ.
ಆದರೆ, ಸರ್ಕಾರದ ನಿರ್ದೇಶನವಿದೆ ಎಂಬ ಸಬೂಬು ನೀಡಿ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ ಕಾರ್ಯಕರ್ತರು ಸರ್ಕಾರ ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ರ್ಯಾಲಿ ನಡೆಸದಂತೆ ಕಾರ್ಯಕರ್ತರ ಮನವೊಲಿಸಲು ಪೊಲೀಸರು ಸಾಕಷ್ಟು ಪ್ರಯತ್ನಿಸಿದರಾದರೂ ಅವರ ಮಾತಿಗೆ ಮನ್ನಣೆ ನೀಡದೆ ಕಾರ್ಯಕರ್ತರು ರ್ಯಾಲಿ ನಡೆಸಲು ಮುಂದಾದಾಗ ಪೊಲೀಸರು ತಡೆದು ಶೋಭಾ ಕರಂದ್ಲಾಜೆ ಸೇರಿದಂತೆ ನೂರಾರು ಮಂದಿಯನ್ನು ಬಂಧಿಸಿ ಬಸ್‌ಗಳಲ್ಲಿ ಕರೆದೊಯ್ದರು.
ರಸ್ತೆ ಮಧ್ಯೆ ಧರಣಿ: ಪೊಲೀಸರು ಕಾರ್ಯಕರ್ತರನ್ನು ಬಂಧಿಸಲಾರಂಭಿಸುತ್ತಿದ್ದಂತೆ ಅವರ ಮಧ್ಯೆ ಇದ್ದ ಮಾಜಿ ಡಿಸಿಎಂ ಆರ್.ಅಶೋಕ್, ಮಾಜಿ ಸಚಿವರಾದ ವಿ.ಸೋಮಣ್ಣ, ಕಟ್ಟಾ ಸುಬ್ರಮಣ್ಯ ನಾಯ್ಡು, ಸಂಸದ ಪ್ರತಾಪ್ ಸಿಂಹ ಅವರು ಪೊಲೀಸರನ್ನು ತಳ್ಳಿ ರಸ್ತೆ ಮಧ್ಯೆ ಬಂದು ಧರಣಿ ಕುಳಿತರು.
ಧರಣಿ ಹಿಂಪಡೆಯುವಂತೆ ಮುಖಂಡರನ್ನು ಮನವೊಲಿಸಲು ಪೊಲೀಸರು ಪ್ರಯತ್ನಿಸಿದರಾದರೂ ಮಣಿಯದ ಮುಖಂಡರು ಅಲ್ಲೇ ಕುಳಿತು ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಅವರನ್ನು ಬಂಧಿಸಲು ಪೊಲೀಸರು ಮುಂದಾದರೂ ಕುಳಿತಲ್ಲಿಂದ ಏಳಲು ಒಪ್ಪಲಿಲ್ಲ. ಹೀಗಾಗಿ ಅವರನ್ನು ಎಳೆದುಕೊಂಡು ಬಸ್‌ಗೆ ಹತ್ತಿಸಿ ಮೈಸೂರು ರಸ್ತೆಯ ಕೆಎಸ್‌ಆರ್‌ಪಿ ಮೈದಾನಕ್ಕೆ ಕರೆತಂದು ನಂತರ ಬಿಡುಗಡೆ ಮಾಡಲಾಯಿತು.
ಇನ್ನು ಕೇವಲ 8 ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಗಿ ಬಿ. ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ. ಇದರಿಂದ ಆತಂಕಗೊಂಡಿರುವ ಮುಖ್ಯಮಂತ್ರಿಗಳು ಪೊಲೀಸರನ್ನು ಬಳಸಿಕೊಂಡು ನಮ್ಮ ಶಾಂತಿಯುತ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಮಂಗಳೂರು ಚಲೋ ವಿಫಲವಾಗುವುದಿಲ್ಲ. ನಾವು ಮಂಗಳೂರಿನಲ್ಲಿ ಪ್ರತಿಭಟನೆ ಮಾಡಿಯೇ ತೀರುತ್ತೇವೆ. -ಪ್ರತಾಪ್ ಸಿಂಹ, ಯುವ ಮೋರ್ಚ ಅಧ್ಯಕ್ಷ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಬಂದು ಹೋದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಹೋಗುತ್ತದೆ ಎಂದು ಹೆದರಿ ನಡುಗಲಾರಂಭಿಸಿದ್ದಾರೆ. ಅವರ ಮಾತು ಕೇಳಿ ನೀವು (ಪೊಲೀಸರು) ನಮ್ಮ ಕಾರ್ಯಕರ್ತರನ್ನು ವಿನಾ ಕಾರಣ ಬಂಧಿಸುತ್ತಿದ್ದೀರಿ. ಇನ್ನು ಕೆಲವೇ ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಬರುತ್ತದೆ. ಆಗ ನೀವು (ಪೊಲೀಸರು) ಹೇಗೆ ವರ್ತಿಸುತ್ತೀರಿ ಎಂದು ನೋಡುತ್ತೇವೆ.
-ಆರ್.ಅಶೋಕ್, ವಿಧಾನಸಭೆ ಪ್ರತಿಪಕ್ಷ ಉಪನಾಯಕ