Advertisement

Belthangady: ಹಲ್ಲೆಗೊಳಗಾದ ಬಿಜೆಪಿ ಮುಖಂಡನ ಮನೆಗೆ ಕ್ಯಾ| ಚೌಟ ಭೇಟಿ

10:59 PM Jun 05, 2024 | Team Udayavani |

ಬೆಳ್ತಂಗಡಿ: ಮಾರಾಕಾಸ್ತ್ರ ದಾಳಿಯಿಂದ ಗಾಯಗೊಂಡು ಉಜಿರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಳ್ತಂಗಡಿ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಕಳೆಂಜ ನಿವಾಸಿ ರಾಜೇಶ್‌ ಎಂ.ಕೆ. ಅವರನ್ನು ಜೂ. 5ರಂದು ನೂತನ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರು ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

Advertisement

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಸರಕಾರ ಚುನಾವಣೆ ಗೆದ್ದಿರುವ ಕಾರಣ ಹತಾಶಭಾವದಲ್ಲಿ ಕಾಂಗ್ರೆಸ್‌ನವರು ಕಳೆಂಜದಲ್ಲಿ ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದಾರೆ. ಸಿದ್ದರಾಮಯ್ಯ ಸರಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು ಕಾಂಗ್ರೆಸ್‌ ಜಿಲ್ಲೆಯಲ್ಲಿ ವಿಚಿತ್ರ ಸನ್ನಿವೇಶಗಳನ್ನು ದ್ವೇಷದ ರಾಜಕಾರಣವನ್ನು ಹುಟ್ಟುಹಾಕುತ್ತಿದೆ. ಇದೆಲ್ಲ ಜಿಲ್ಲೆಗೆ ಹೊಸ ವಿಚಾರಗಳು. ದ್ವೇಷದ ರಾಜಕಾರಣ ತೊಲಗಲು ಮೋದಿಯವರು ಕಾಂಗ್ರೆಸ್‌ ಮುಕ್ತ ದೇಶವಾಗಲಿ ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ದ್ವೇಷದ ರಾಜಕಾರಣದ ಆರಂಭಿಸಿದ್ದು ಕಾಂಗ್ರೆಸ್‌ ರಾಜಕಾರಣಕ್ಕಾಗಿ ತಲವಾರು ದಾಳಿಯಂತಹ ಘಟನೆಗಳು ಜಿಲ್ಲೆಯಲ್ಲಿ ನಡೆದಿರುವುದು ವಿಷಾದನೀಯ ಎಂದರು.

ತನಿಖೆಗೆ ಆಗ್ರಹ
ಕಳೆಂಜದ ಮಂಗಳವಾರದ ಘಟನೆಗೆ ಸಂಬಂಧಪಟ್ಟಂತೆ ಆರೋಪಿಗಳನ್ನು ತತ್‌ಕ್ಷಣ ಬಂಧಿಸಿದ ಪೊಲೀಸ್‌ ಇಲಾಖೆಯನ್ನು ಅಭಿನಂದಿಸುತ್ತಿದ್ದೇವೆ. ಯಾರ ಪ್ರೇರಣೆಯಿಂದ ಇಂತಹ ಘಟನೆಗಳು ನಡೆದಿವೆ ಎಂಬ ಕುರಿತು ಕೂಲಂಕಷ ತನಿಖೆಯಾಗಬೇಕು ಮತ್ತು ಇಂತಹ ಘಟನೆಗಳು ಮರಕಳಿಸಬಾರದು ಎಂದು ಆಗ್ರಹಿಸಿದರು.

ಶಾಸಕ ಹರೀಶ್‌ ಪೂಂಜ ಮಾತನಾಡಿ, ಪ್ರಕರಣ ರಾಜಕೀಯಕ್ಕೋಸ್ಕರ ನಡೆದಿದೆ. ಪೊಲೀಸ್‌ ಇಲಾಖೆ ಸುಳ್ಳು ಕೇಸುಗಳನ್ನು ದಾಖಲಿಸದೆ ನೈಜ ಆರೋಪಿಗಳನ್ನು ಪತ್ತೆಹಚ್ಚಬೇಕು ಹಾಗೂ ಕಾಂಗ್ರೆಸ್‌ನ ಷಡ್ಯಂತ್ರಕ್ಕೆ ಬಲಿಯಾಗಬಾರದು. ಅಮಾಯಕನ ಮೇಲೆ ಕೊಲೆ ಯತ್ನ ಎಂದರೆ ನಾವು ಯಾವ ರಾಜ್ಯದಲ್ಲಿ ಇದ್ದೇವೆ ಎಂದು ಚಿಂತಿಸುವಂತೆ ಮಾಡಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಮಂಡಲ ಅಧ್ಯಕ್ಷ ಶ್ರೀನಿವಾಸರಾವ್‌, ಕಾರ್ಯದರ್ಶಿ ಪ್ರಶಾಂತ್‌ ಪಾರೆಂಕಿ, ಜಯಾನಂದ ಗೌಡ ಹಾಗೂ ಬಿಜೆಪಿ ಕಾರ್ಯಕರ್ತರು ಜತೆಯಲ್ಲಿದ್ದರು.

Advertisement

ಅಭಿವೃದ್ಧಿಗಾಗಿ 9 ಕಾರ್ಯಸೂಚಿ
ಹಿಂದುತ್ವದ ಭದ್ರತೆ ಇಟ್ಟುಕೊಂಡು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಪಣ ತೊಟ್ಟಿದ್ದೇನೆ. ನವಯುಗ-ನವ ಪಥ ಎಂಬ ಯೋಚನೆಯೊಂದಿಗೆ ಅಭಿವೃದ್ಧಿಗಾಗಿ 9 ಕಾರ್ಯಸೂಚಿಗಳನ್ನು ಹಾಕಿಕೊಳ್ಳಲಾಗಿದೆ. ಮೋದಿ ನೇತೃತ್ವದ ಹೊಸ ಸರಕಾರ ರೂಪುಗೊಂಡ ತತ್‌ಕ್ಷಣ ಅವರ ಮಾರ್ಗದರ್ಶನದಲ್ಲಿ ಹಾಗೂ ಶಾಸಕರ ಸಹಕಾರದಲ್ಲಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಹಾಗೂ ಹೊಸ ಕಾಮಗಾರಿಗಳ ಆರಂಭದ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next