ವಾಡಿ: ಚಿತ್ತಾಪುರ ವಿಧಾನಸಭೆ ಮೀಸಲು ಮತಕ್ಷೇತ್ರದ 2023ರ ಚುನಾವಣೆಯಲ್ಲಿ ಭಾರತೀಯ ಜತಾ ಪಕ್ಷದ ಅಧಿಕೃತ ಅಭ್ಯರ್ಥಿಯಾರಾಗುತ್ತಾರೆ ಎನ್ನುವ ಚರ್ಚೆ ನಿಗೂಢತೆ ಮಕಾಯ್ದುಕೊಂಡಿದ್ದು, ಶಾಸಕನಾಗಲು ಬಯಸಿ ಪರಸ್ಪರ ಆಂತರಿಕ ಗುದ್ದಾಟದಲ್ಲಿ ತೊಡಗಿರುವ ಟಿಕೆಟ್ ಆಕಾಂಕ್ಷಿಗಳು ತಮ್ಮದೇಯಾದ ಬೆಂಬಲಿಗರ ಪಡೆ ಸೃಷ್ಟಿಸಿಕೊಂಡು ರಾಜ್ಯ ನಾಯಕರ ಮನೆಬಾಗಿಲು ತಟ್ಟುತ್ತಿರುವುದು ಮತಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಚಿತ್ತಾಪುರ ಮತಕ್ಷೇತ್ರದ ಬಿಜೆಪಿ ಹಿರಿಯ ಮುಖಂಡ, ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರ ಅಕಾಲಿಕ ನಿಧನದ ನಂತರ ಕ್ಷೇತ್ರವನ್ನು ಪ್ರತಿನಿಧಿಸುವ ಸೂಕ್ತ ನಾಯಕನಿಲ್ಲದೆ ಕಾರ್ಯಕರ್ತರು ಬಣಗಳಾಗಿ ವಿಂಗಡಣೆಯಾಗುತ್ತಿದ್ದಾರೆ ಎನ್ನುವ ಅತೃಪ್ತಿ ನಡುವೆ ಕ್ಷೇತ್ರದ ಬಿಜೆಪಿ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಎರಡು ವರ್ಷದ ನಂತರ ಎದುರಾಗಲಿರುವ ವಿಧಾನಸಭೆ ಚುನಾವಣೆಗೆ ಈಗಲೇ ಸಿದ್ಧತೆ ಮತ್ತು ಕಸರತ್ತುಗಳು ತೆರೆಮರೆಯಲ್ಲಿ ನಡೆಯುತ್ತಿರುವುದು ಬಹಿರಂಗ ಸತ್ಯವಾಗಿದೆ.
ಇದನ್ನೂ ಓದಿ: ಸಾರಿಗೆ ವಜಾ ನೌಕರರ ಮರು ನೇಮಕ: ಶ್ರೀರಾಮುಲು ಭರವಸೆ
ಚಿತ್ತಾಪುರ ಮೀಸಲು ಮತಕ್ಷೇತ್ರದ ಭಾವಿ ಶಾಸಕನಾಗಲು ಐದಾರು ಹೆಸರುಗಳು ಚರ್ಚೆಯಲ್ಲಿದ್ದು, ಮಾಜಿ ಶಾಸಕ ದಿ.ವಾಲ್ಮೀಕಿ ನಾಯಕ ಪುತ್ರ ವಿಠ್ಠಲ ನಾಯಕ ಮತ್ತು ಜಿಪಂ ಮಾಜಿ ಸದಸ್ಯ ಅರವಿಂದ ಚವ್ಹಾಣ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಈ ನಡುವೆ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸುನೀಲ ವಲ್ಯಾಪುರೆ ಅವರ ಹೆಸರು ಥಳಕು ಹಾಕಿಕೊಂಡಿದೆ. ಚಿತ್ತಾಪುರದ ಹಾಲಿ ಶಾಸಕ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಅವರನ್ನು ಹೇಗಾದರೂ ಮಾಡಿ ಸೋಲಿಸುವ ಮೂಲಕ ಅಭಿವೃದ್ಧಿ ನಾಗಾಲೋಟಕ್ಕೆ ಬ್ರೇಕ್ ಹಾಕಬೇಕು ಎನ್ನುವ ಗುರಿಯೊಂದಿಗೆ ಭಾಜಪ ಪದಾಧಿಕಾರಿಗಳು ಸಾಗಿದರೆ, ಇತ್ತ ವಿಧಾನಸಭೆ ಟಿಕೇಟ್ ಗಿಟ್ಟಿಸಿಕೊಳ್ಳಲು ಪಕ್ಷದೊಳಗೆ ನಾಯಕರು ಜಿದ್ದಿಗೆ ಬಿದ್ದಿದ್ದಾರೆ.
ಪ್ರತ್ಯೇಕವಾಗಿ ಬೆಂಗಳೂರಿನತ್ತ ನಿರಂತರ ಪಯಣ ಬೆಳೆಸುತ್ತಿರುವ ಯುವ ನಾಯಕರಾದ ವಿಠ್ಠಲ ನಾಯಕ ಹಾಗೂ ಅರವಿಂದ ಚವ್ಹಾಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಟಿಕೇಟ್ ಪ್ರಸ್ತಾವನೆ ಮುಂದಿಟ್ಟಿದ್ದಾರೆ ಎಂದು ಭಾಜಪ ಮೂಲಗಳಿಂದ ತಿಳಿದುಬಂದಿದೆ. ವಿಠ್ಠಲ ನಾಯಕ ಹಾಗೂ ಅರವಿಂದ ಚವ್ಹಾಣ ನಡುವೆ ಟಿಕೇಟ್ ಪಡೆಯಲು ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿ ಹೈಕಮಾಂಡ್ ಜತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಬಹಿರಂಗವಾಗಿ ಯಾರ ಪರವೂ ಒಲವು ವ್ಯಕ್ತಪಡಿಸದ ಭಾಜಪ ಹೈಕಮಾಂಡ್, ನಾಯಕನ ಆಯ್ಕೆಯಲ್ಲಿ ಗೌಪ್ಯತೆ ಕಾಪಾಡಿಕೊಂಡಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ಮಡಿವಾಳಪ್ಪ ಹೇರೂರ