ಬಾಗೇಪಲ್ಲಿ: ಕ್ಷೇತ್ರದ ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷದ ಮುಖಂಡರು, ಕಾರ್ಯಕರ್ತರು ಬಿಜೆಪಿ ಸಿದ್ಧಾಂತವನ್ನು ಅಪ್ಪಿಕೊಂಡು ಪಕ್ಷಕ್ಕೆ ಶಕ್ತಿ ತುಂಬುತ್ತಿದ್ದಾರೆ. ಇದರ ಪರಿಣಾಮ ವಿಧಾನ ಸಭಾ ಚುನಾವಣೆಯಲ್ಲಿ ಬಾಗೇಪಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂದು ಜಿಪಂ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಸಿ.ಮುನಿರಾಜು ಹೇಳಿದರು.
ತಾಲೂಕಿನ ವಂಗ್ಯಾರ‌್ಲಪಲ್ಲಿ ಗ್ರಾಮದಲ್ಲಿ ನಡೆದ ಬಿಳ್ಳೂರು ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷ ತೊರೆದ ಮುಖಂಡರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಡಳಿತದ ನಡೆಸುತ್ತಿದ್ದು, ರಾಜ್ಯದ ರೈತರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಒಂದಲ್ಲ ಒಂದು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಶಕ್ತಿ ಸಾಮರ್ಥ್ಯಗಳನ್ನು ಪ್ರದರ್ಶನ ಮಾಡಿ, ಇಡೀ ವಿಶ್ವವೇ ಭಾರತದತ್ತ ನೋಡುವಂತೆ ದೇಶದ ಪ್ರಧಾನಿ ನರೇಂದ್ರ ಮೋದಿ ನವ ಭಾರತ ನಿರ್ಮಿಸಿದ್ದಾರೆ ಎಂದು ಹೇಳಿದರು.
ಪ್ರಧಾನಿ ವಿಶ್ವ ಮಾನವ: ಪ್ರಪಂಚದಲ್ಲಿ ದೇಶದ ಪ್ರಧಾನಿ ಹೆಚ್ಚು ಜನಪ್ರಿಯುತೆ ಗಳಿಸಿ ವಿಶ್ವ ಮಾನವರಾಗಿದ್ದಾರೆ. ಅಂತಹ ವಿಶ್ವ ಮಾನವವನ್ನು ಪಡೆದುಕೊಂಡಿರುವ ಬಿಜೆಪಿ ಪಕ್ಷದಿಂದ ಮಾತ್ರ ಬಲಿಷ್ಠ ಭಾರತ ಕಟ್ಟಲು ಸಾಧ್ಯವಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರದ ಸಾಧನೆಗಳನ್ನು ಬಾಗೇಪಲ್ಲಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮನೆ ಮನೆಗೂ ತಲುಪಿಸುವ ಕೆಲಸ ಮಾಡಬೇಕಾಗಿದೆ. ರಾಜ್ಯ ಬಿಜೆಪಿ ಸರ್ಕಾರ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಿಸಿ, ಕೊಟ್ಟ ಭರವಸೆ ಈಡೇರಿಸಿದೆ. ಸುಳ್ಳು ಹೇಳಿ ಹಿಂದುಳಿದವರ ಮತಗಳನ್ನು ಬಳಿಸಿಕೊಂಡು ಅಧಿಕಾರಕ್ಕೆ ಬಂದು 65 ವರ್ಷಗಳು ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರದ ಧೋರಣೆ ವಿರುದ್ಧ ಇಂದು ಹಿಂದುಳಿದವರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಮುಖಂಡ ಗಂಗಾಧರಪ್ಪ, ಚಂದ್ರ ನೇತೃತ್ವದಲ್ಲಿ ತಾಲೂಕಿನ ಬಿಳ್ಳೂರು ಗ್ರಾಪಂನ ವಂಗಾರ‌್ಲಪಲ್ಲಿ, ಗೋರ ವಾಂಡ್ಲಪಲ್ಲಿ, ಬಂಡಕಿಂದಪಲ್ಲಿ, ಉಗ್ರಾಣಂಪಲ್ಲಿ, ಬೋಯಿ ಪಲ್ಲಿ, ಎಗವಮಿದ್ದಿಲು, ಯರ್ರಗಾನಪಲ್ಲಿ ಗ್ರಾಮದ ನೂರಾರು ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು. ಬಿ
ಜೆಪಿ ಮಂಡಲಾಧ್ಯಕ್ಷ ಆರ್.ಪ್ರತಾಪ್, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್, ಶಿವಾರೆಡ್ಡಿ, ಜೆ.ಆರ್.ನರಸಿಂಹಪ್ಪ, ಉಗ್ರಪ್ಪ, ರಾಮಪ್ಪ, ಗಂಗುಲಪ್ಪ, ಮದ್ದಿರೆಡದಡಿ, ನಾರಾಯಣ, ಕೋಟಪ್ಪ, ಸಿ.ವಿ.ರೆಡ್ಡಿ, ರಾಮಾಂಜಿ ಹಾಜರಿದ್ದರು.