ಬೆಂಗಳೂರು: ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ಹಿರಿಯ ನಾಯಕ ಬಿಬಿ ಶಿವಪ್ಪ (89ವರ್ಷ) ಅವರು ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ವಿಧಿವಶರಾಗಿದ್ದಾರೆ. ನಾಳೆ ಸಕಲೇಶಪುರದ ಕುಮ್ರಳ್ಳಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಶಿವಪ್ಪ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಸಕಲೇಶಪುರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಶಿವಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಬಿಎಸ್ ವೈ ಸಿಎಂ ಆಗಿದ್ದಾಗ ಅವರ ಕಾರ್ಯವೈಖರಿಯನ್ನು ವಿರೋಧಿಸಿದ್ದರು. ಅಷ್ಟೇ ಅಲ್ಲ ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಲು ಶ್ರಮಿಸಿದ್ದ ತನ್ನನ್ನು ಬಿಎಸ್ ಯಡಿಯೂರಪ್ಪ ಮೂಲೆಗುಂಪು ಮಾಡಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಒಮ್ಮೆ ಬಿಬಿ ಶಿವಪ್ಪ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.
1981ರಲ್ಲಿ ಶಿವಪ್ಪ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 1983ರಿಂದ 1988ರವರೆಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2 ಬಾರಿ ಸಕಲೇಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಎಂಎಲ್ಸಿಯಾಗಿಯೂ ಶಿವಪ್ಪ ಅವರು ಕಾರ್ಯನಿರ್ವಹಿಸಿದ್ದರು.
ಕೊನೆಗೂ ಈಡೇರಲಿಲ್ಲ ಶಿವಪ್ಪ ಕೊನೆ ಆಸೆ..
ಹುಟ್ಟೂರಿನಲ್ಲಿ ಪ್ರಾಣ ಬಿಡಬೇಕೆಂದು ಬಿಬಿ ಶಿವಪ್ಪ ಅವರು ಕುಟುಂಬ ಸದಸ್ಯರಲ್ಲಿ ಕೊನೆ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆದರೆ ಹುಟ್ಟೂರಿಗೆ ಹೊರಡುವ ಮುನ್ನವೇ ಶಿವಪ್ಪ ಅವರು ಕೊನೆಯುಸಿರೆಳೆದಿದ್ದರು.