ತೆಕ್ಕಟ್ಟೆ: ಒಂದು ಕಾಲದಲ್ಲಿ ಹೆಣ್ಣು ಮಕ್ಕಳು ಮನೆಯ ಹೊಸ್ತಿಲು ದಾಟಿ ಹೊರ ಬರುತ್ತಿರಲಿಲ್ಲ. ಬದಲಾದ ಕಾಲದಲ್ಲಿ ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ತನ್ನದೇ ಛಾಪನ್ನು ಮೂಡಿಸಿದ್ದಾರೆ. ಮಹಿಳಾ ಕಾರ್ಯಕರ್ತರ ಯಶಸ್ಸಿನ ಹಿಂದೆ ಪುರುಷ ಕಾರ್ಯಕರ್ತರಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರವನ್ನು ಶಾಶ್ವತವಾಗಿ ಕಿತ್ತೂಗೆಯಬೇಕು ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಶೆಟ್ಟಿ ಹೇಳಿದರು.
ಎ. 4ರಂದು ಕನ್ನುಕೆರೆ ನವಶಕ್ತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕುಂದಾಪುರ ವಿಧಾನಸಭಾ ಕ್ಷೇತ್ರ, ಬೂತ್ ಮಟ್ಟದ ಮಹಿಳಾ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ 53 ಮಹಾ ನಗರಗಳಲ್ಲಿ ಅಪರಾಧ ಪ್ರಕರಣದಲ್ಲಿ ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. 7 ಸಾವಿರಕ್ಕೂ ಅಧಿಕ ಮಹಿಳೆಯರ ಕೊಲೆ ಪ್ರಕರಣ, 4 ಸಾವಿರ ಅತ್ಯಾಚಾರ ಪ್ರಕರಣ ಹಾಗೂ 24 ಸಾವಿರ ಇನ್ನಿತರ ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಸಿದ್ದರಾಮಯ್ಯಮವರ ಕಾಂಗ್ರೆಸ್ ಸರಕಾರ ಜನರಿಗೆ ರಕ್ಷಣೆ ನೀಡದೆ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದೆ ಎಂದು ಅವರು ತಿಳಿಸಿದರು.
ಕುಂದಾಪುರ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಸುಲೋಚನಾ ಭಟ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಜಾನಕಿ ಬಿಲ್ಲವ, ಚೈತ್ರಾ ಕುಂದಾಪುರ, ಕಾರ್ಯದರ್ಶಿ ನಿರ್ಮಲಾ ಶೆಟ್ಟಿ , ಜಿ.ಪಂ.ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ , ಲಕ್ಷ್ಮೀ ಮಂಜು ಬಿಲ್ಲವ, ತಾ.ಪಂ.ನ ಜ್ಯೋತಿ ಪೂಜಾರಿ ಹಾಗೂ ನೂರಾರು ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.ಕಾರ್ಯದರ್ಶಿ ನಿರ್ಮಲಾ ಶೆಟ್ಟಿ ಸ್ವಾಗತಿಸಿ, ಶ್ರೀಲತಾ ಸುರೇಶ್ ಶೆಟ್ಟಿ ನಿರೂಪಿಸಿ, ವಂದಿಸಿದರು.