ಗಂಗಾವತಿ: ಮುಡಾ ಹಗರಣದ ಹಿಂದೆ ಬಿಜೆಪಿ ಮತ್ತು ಜೆಡಿಎಸ್‌ನ ಪ್ರಮುಖ ಮುಖಂಡರು ಇದ್ದಾರೆ. ಕಳೆದ 40 ವರ್ಷಗಳಿಂದ ಸ್ವತ್ಛ ರಾಜಕಾರಣ ಮಾಡುತ್ತ ಬಂದಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಮಸಿ ಬಳಿಯುವ ಕಾರ್ಯ ಸಫಲವಾಗುವುದಿಲ್ಲ. ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಸೋಮನಾಳ ಗ್ರಾಮಕ್ಕೆ ತೆರಳುವ ವೇಳೆ ಪತ್ರಕರ್ತರ ಜತೆ ಅವರು ಮಾತನಾಡಿ, ಬಿಜೆಪಿ ಹೈಕಮಾಂಡ್ ಮೆಚ್ಚಿಸಲು ಮುಡಾ ಹಗರಣ ಮುನ್ನೆಲೆಗೆ ತರಲಾಗಿದೆ. ಬಿಜೆಪಿ ಆಡಳಿತದ ಕಾಲಾವ ಧಿಯಲ್ಲಿ ಪಾರ್ವತಮ್ಮನವರ ಭೂಮಿಗೆ ಪರ್ಯಾಯವಾಗಿ 14 ನಿವೇಶನ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಎಲ್ಲಿ ಪ್ರಭಾವ ಬೀರಲು ಸಾಧ್ಯ. ಐದು ಗ್ಯಾರಂಟಿ ಯೋಜನೆ ಮೂಲಕ ಬಡವರು, ದೀನ ದಲಿತರು, ಮಹಿಳೆಯರಿಗೆ ರಾಜ್ಯ ಸರಕಾರ ನೆರವಾಗುತ್ತಿದೆ.
ಬಡವರ ಏಳಿಗೆಯನ್ನು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸಹಿಸುವುದಿಲ್ಲ. ಬಡವರು ಬಡವರಾಗಿ ಇರಬೇಕು ಎನ್ನುವುದು ಅವರ ಲೆಕ್ಕಾಚಾರ. ಶಾಸಕರನ್ನು ಸೆಳೆಯುವ ಯತ್ನ ಫಲಿಸದ ಕಾರಣ ಈಗ ಮುಡಾ ಪ್ರಕರಣ ಮುಂದಿಟ್ಟುಕೊಂಡು ಬೆಂಗಳೂರಿನಿಂದ ಮೈಸೂರು ತನಕ ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆಯಲ್ಲಿ ಬಿಜೆಪಿಯ ಹಿರಿಯ ಮುಖಂಡರು ಪಾಲ್ಗೊಂಡಿಲ್ಲ. ಪಕ್ಷದ ಕಾರ್ಯಕರ್ತರೇ ಇಲ್ಲ. ಪಿಎಸ್‌ಐ ಪರಶುರಾಮ ಸಾವು ಅಪಾರ ನಷ್ಟವುಂಟು ಮಾಡಿದೆ. ಸರಕಾರ ಸಿಐಡಿ ತನಿಖೆಗೆ ನೀಡಿದೆ. ಎಲ್ಲರೂ ಅಗತ್ಯ ಮಾಹಿತಿ, ಸಹಕಾರ ನೀಡಬೇಕು ಎಂದರು.
ವಿಜಯೇಂದ್ರ ಆಪ್ತನಿಗೆ 3 ಲಕ್ಷಕ್ಕೆ ಕಾರ್ನರ್ ಸೈಟ್!
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧಿಕಾರಿಗಳು, ನಗರದ ಪ್ರತಿಷ್ಠಿತ ಹಂಚ್ಯಾ- ಸಾತಗಳ್ಳಿ ಬಡಾವಣೆ ಬಿ-ವಲಯದಲ್ಲಿ ರಿಂಗ್ ರಸ್ತೆಗೆ ಅಭಿಮುಖವಾಗಿರುವ ಕಾರ್ನರ್ ಸೈಟ್ ಪಕ್ಕದ 50×80 ಅಡಿ ನಿವೇಶನವನ್ನು ಬಿಜೆಪಿ ರಾಜ್ಯಾ ಧ್ಯಕ್ಷ ಬಿ. ವೈ.ವಿಜಯೇಂದ್ರ ಆಪ್ತನಿಗೆ ಕೇವಲ 3.03 ಲಕ್ಷ ರೂ.ಗೆ ಹಂಚಿಕೆ ಮಾಡಿರುವುದು ಬೆಳಕಿಗೆ ಬಂದಿದ್ದು, ಇದರೊಂದಿಗೆ ಮುಡಾದ ಮತ್ತೂಂದು ಅಕ್ರಮ ಬಯಲಿಗೆ ಬಂದಿದೆ.
2024ರ ಮೇ 22ರಂದು ಮೈಸೂರಿನ ಸಿದ್ಧಾರ್ಥನಗರದ ಎಂ.ಎನ್. ನಂದೀಶ ಹೆಸರಿಗೆ ಹಂಚ್ಯಾ-ಸಾತಗಳ್ಳಿ ಬಿ ವಲಯ ಬಡಾವಣೆಯಲ್ಲಿರುವ 36ನೇ ಸಂಖ್ಯೆಯ ಮೂಲೆ ನಿವೇಶನ ಪಕ್ಕದ ನಿವೇಶನಕ್ಕೆ ಕ್ರಯಪತ್ರ ನೀಡಲಾಗಿದೆ. ಕೇವಲ 6 ದಿನಗಳಲ್ಲಿ ಅಂದರೆ ಮೇ 22ರಂದೇ ಕ್ರಯಪತ್ರ ನೋಂದಣಿ ಮಾಡಿಕೊಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.