ಬೆಂಗಳೂರು: ಬಿಜೆಪಿ ಜತೆಗೆ ನಾವು ಮೈತ್ರಿ ಮಾಡಿಕೊಂಡದ್ದು ಕಾಂಗ್ರೆಸ್‌ನ ನಿದ್ದೆಗೆಡಿಸಿದೆ. ಈ ಮೈತ್ರಿಯನ್ನು ಮುಂದುವರಿಸಬೇಕೆಂಬುದು ನನ್ನ ಉದ್ದೇಶ. ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ತೆಗೆದುಕೊಳ್ಳುವ ತೀರ್ಮಾನ ಅವರ ಇಷ್ಟ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಹಾಸನ ಪ್ರಕರಣದಲ್ಲಿ ನನ್ನ ಹೆಸರನ್ನಾಗಲಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರನ್ನಾಗಲಿ ತರಬೇಡಿ ಎಂದರೆ ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಅವರ ಹೆಸರು ಎಳೆದು ತರಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜ್ವಲ್ ಬಗ್ಗೆ ಮೃದು ಧೋರಣೆ ಇಲ್ಲ ಎಂದು ಪ್ರಧಾನಿ ಮೋದಿ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ. ತಪ್ಪು ಮಾಡಿದ ಎಲ್ಲರಿಗೂ ಶಿಕ್ಷೆ ಆಗಬೇಕು ಎಂಬುದು ನಮ್ಮ ಆಗ್ರಹ. ಈ ರೀತಿಯ ಪ್ರಕರಣ ಇದೆ ಎಂಬುದು ಇವರು ವೀಡಿಯೋ ಬಿಡುಗಡೆ ಮಾಡಿದ ಅನಂತರವೇ ನಮಗೂ ತಿಳಿದದ್ದು. ಹಿರಿಯರಿಗೆ ಪ್ರಜ್ವಲ್ ಮರ್ಯಾದೆ ಕೊಡುವುದಿಲ್ಲ ಎಂಬಿತ್ಯಾದಿ ದೂರುಗಳು ಬಂದಿದ್ದವು. ಹೀಗಾಗಿ ಅಭ್ಯರ್ಥಿಯನ್ನು ಬದಲಾಯಿಸಲು ಮುಂದಾ ಗಿದ್ದೆವು. ತಪ್ಪು ಸರಿಪಡಿಸುವ ಉದ್ದೇಶ ನನಗಿತ್ತು. ರೇವಣ್ಣ ಕುಟುಂಬವನ್ನು ಮುಗಿಸಲು ನಾನು ಮಾಡಿರುವ ಪಿತೂರಿ, ಕೌಟುಂಬಿಕ ಕಲಹ ಎಂದೆಲ್ಲ ಡಿ.ಕೆ. ಶಿವಕುಮಾರ್ ಅಪಪ್ರಚಾರ ಮಾಡಿದರು ಎಂದು ಎಚ್‌ಡಿಕೆ ಹೇಳಿದರು.
ಬಾಲ ಸುಟ್ಟ ಬೆಕ್ಕಿನಂತಾದ ಡಿಕೆಶಿ
ಮೊನ್ನೆ ಮೊನ್ನೆಯ ವರೆಗೆ ಎಗರಾಡುತ್ತಿದ್ದ ಡಿ.ಕೆ. ಶಿವಕುಮಾರ್ ನಿನ್ನೆ ಸ್ವಲ್ಪ ಏಕೋ ಬಾಲ ಸುಟ್ಟ ಬೆಕ್ಕಿನಂತಾಗಿದ್ದಾರೆ. ಬೆಳಗಾವಿ ಸಾಹುಕಾರ್ ಮೇಲೂ ಇವರೇ ದೂರು ಮಾಡಿಸಿದವರು.
ಕೊನೆಗೆ ಏನಾಯಿತು? ಬೆಳಗಾವಿ ಸಾಹುಕಾರರನ್ನು ಈ ಮಹಾನಾಯಕ ಹೇಗೆ ಸಿಲುಕಿಸಲು ಪ್ರಯತ್ನಿಸಿದ್ದರು ಎನ್ನುವ ದಾಖಲೆಗಳೂ ಇವೆ. ಎಸ್‌ಐಟಿ ಅಧಿಕಾರಿಗಳು ಕಾನೂನುಬಾಹಿರವಾಗಿ ಏನೇನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಯಾವುದೇ ಒತ್ತಡಕ್ಕೆ ಮಣಿಯದೆ, ಪಾರದರ್ಶಕ ತನಿಖೆ ಮಾಡಬೇಕು. ಕಾಲಚಕ್ರ ಉರುಳುತ್ತ ಇರುತ್ತದೆ. ಕಾಲ ಹೀಗೇ ಇರುವುದಿಲ್ಲ ಎಂದು ಎಚ್ಚರಿಸಿದರು.