ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಹಿಂದೆ ಕೇಂದ್ರ ಸರ್ಕಾರದ ನೇರ ಕೈವಾಡವಿದ್ದು, ಬಿಜೆಪಿ ಪ್ರಜಾಪ್ರಭುತ್ವವನ್ನು ಮುಗಿಸುವ ಯತ್ನದಲ್ಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಿಡಿ ಕಾರಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಬಿಜೆಪಿ ಎಲ್ಲಾ ಕಡೆ ಪಕ್ಷಾಂತರಗಳನ್ನು ಮಾಡುತ್ತಿದೆ, ಹಿಂದೆಯೂ ಮಾಡಿದೆ. ಕರ್ನಾಟಕದಲ್ಲಿ ಮೈತ್ರಿ ಸರ್ಕಾರವಿರುವುದು ಅವರಿಗೆ ಸಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಅಧಿಕಾರ ಹಿಡಿದಾಗಿನಿಂದ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿತ್ತು. ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯ ಸಂಪೂರ್ಣ ಸಹಕಾರ ಇದೆ. ಶಾಸಕರಿಗೆ ವಿಶೇಷ ವಿಮಾನಗಳನ್ನು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಆಂಧ್ರ ಪ್ರದೇಶ, ತೆಲಂಗಾಣ, ಮಣಿಪುರ, ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳಲ್ಲಿ ಬಿಜೆಪಿ ಪಕ್ಷಾಂತರ ಮಾಡಿಸುತ್ತಿದೆ. ಪ್ರಜಾಪ್ರಭುತ್ವವನ್ನು ಮುಗಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ. ನಾವು ಇದರ ವಿರುದ್ಧ ಹೋರಾಟ ಮಾಡುತ್ತಲೆ ಬಂದಿದ್ದೇವೆ ಎಂದರು.
ರಾಜೀನಾಮೆ ಸಲ್ಲಿಸಿರುವ ಶಾಸಕರು ಮುಂಬಯಿಯಿಂದ ದೆಹಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದರು.
ರಾಜೀನಾಮೆ ನೀಡಿರುವ ಶಾಸಕರ ಪೈಕಿ ಹಲವರು ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಪಕ್ಷಪಾತವಾಗಿ ದುಡಿದವರು ಎಂದರು.