Advertisement

BJP ವಿಶ್ವ ನಾಯಕತ್ವವಿರುವ ಪಕ್ಷ, ಕಾಂಗ್ರೆಸ್ ಟೀಕೆ ಹಾಸ್ಯಾಸ್ಪದ : ಕಾರಜೋಳ

07:10 PM Sep 03, 2023 | Team Udayavani |

ವಿಜಯಪುರ : ‘ಇಡೀ ವಿಶ್ವವೇ ಮೆಚ್ಚಿರುವ ಮಹಾನ್ ನಾಯಕರಿರುವ ಬಿಜೆಪಿಯನ್ನು ನಾಯಕತ್ವ ಇಲ್ಲದ ಪಕ್ಷ ಎಂದು ಕಾಂಗ್ರೆಸ್ ನಾಯಕರು ಟೀಕಿಸುತ್ತಿರುವುದು ಹಾಸ್ಯಾಸ್ಪದ’ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.

Advertisement

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಪಕ್ಷದಿಂದ ಕಾಂಗ್ರೆಸ್ ಸೇರಿದವರಿಂದ ಆರೋಪ ಮಾಡಿಸುವ ಸ್ಥಿತಿ ಬಂದಿದೆ.ಬಿಜೆಪಿ ಪಕ್ಷಕ್ಕೆ ಆಪರೇಷನ್ ಕಮಲ ಮಾಡುವ ಅಗತ್ಯವಿಲ್ಲ, ಬಿಜೆಪಿ ಪಕ್ಷವನ್ನೂ ತೊರೆದು ಯಾರೂ ಕಾಂಗ್ರೆಸ್ ಸೇರುವುದಿಲ್ಲ ಎಂದರು.

ಹಾಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಹೇಳುತ್ತಿರುವ ಸಚಿವ ಎಂ.ಬಿ.ಪಾಟೀಲ್ ಅವರು ಯಾವಾಗ ನಮ್ಮ ಪಕ್ಷದ ವಕ್ತಾರರಾದರು ಎಂದು ಛೇಡಿಸಿ, ವಿಜಯಪುರ, ಬಾಲಕೋಟೆ ಕ್ಷೇತ್ರಗಳಲ್ಲಿ ನಮ್ಮ ಪಕ್ಷದವರೇ ಹಾಲಿ ಸಂಸದರಿದ್ದು, ಎರಡೂ ಕ್ಷೇತ್ರಗಳು ಖಾಲಿ ಇಲ್ಲ ಎನ್ನುವ ಮೂಲಕ ತಾವು ಲೋಕಸಭೆ ಚುನಾವಣೆ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.

ಸಮೀಕ್ಷೆಗಳು ಏನೇ ಹೇಳಲಿ ರಾಜ್ಯದಲ್ಲಿ ಬಿಜೆಪಿ ತನ್ನ ಸ್ಥಾನಗಳನ್ನು ಉಳಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಂದು ದೇಶ ಒಂದೇ ಚುನಾವಣೆ ನೀತಿ ಜಾರಿಯಿಂದ ದೇಶಕ್ಕೆ ಆರ್ಥಿಕ ಹಾಗೂ ಆಭಿವೃದ್ಧಿಗೆ ಸಮಯ ಉಳಿತಾಯವಾಗಲಿದೆ. ಪದೇ ಪದೇ ಚುನಾವಣೆ ನಡೆಸುವುದರಿಂದ ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ. ಚುನಾವಣೆ ನಡೆಯುವ ಸಂದರ್ಭದಲ್ಲಿ ಕನಿಷ್ಟ 3 ತಿಂಗಳು ಅಭಿವೃದ್ಧಿ ಕೆಲಸಗಳು ಸಂಪೂರ್ಣ ಸ್ಥಗಿತಗೊಳ್ಳುತ್ತವೆ. ಒಂದು ದೇಶ ಒಂದು ಚುನಾವಣೆ ನಡೆಸುವ ಚಿಂತನೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರದೇ ಪರವಾಗಿದೆ ಎಂದರು.

Advertisement

ರಾಜಕೀಯ ಪುರ್ನಜನ್ಮ ನೀಡಿದ ಜನರಿಗೆ ಸಿದ್ದು ಅನ್ಯಾಯ
ರಾಜಕೀಯವಾಗಿ ಸೋತು ಮಾಜಿ ಮುಖ್ಯಮಂತ್ರಿ ಎಂದು ಎಲ್ಲೋ ಕಳೆದುಹೋಗುತ್ತಿದ್ದ ಸಿದ್ಧರಾಮಯ್ಯ ಅವರಿಗೆ ರಾಜಕೀಯ ಪುರ್ನಜನ್ಮ ನೀಡಿರುವುದೇ ಅಖಂಡ ವಿಜಯಪುರ ಜಿಲ್ಲೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ಕೃಷ್ಣೆಯ ಮಕ್ಕಳಿಗೆ ಸುಳ್ಳು ಹೇಳಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವಿಜಯಪುರ-ಬಾಲಕೋಟೆ ಅವಳಿ ಜಿಲ್ಲೆಗಳ ಜನರಿಗೆ ಮೋಸ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.

ಒಂದೊಮ್ಮೆ 2018 ರಲ್ಲಿ ಬಾದಾಮಿ ಕ್ಷೇತ್ರದಲ್ಲಿ ಸೋತಿದ್ದರೆ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಮಖ್ಯಮಂತಿ ಆಗುವ ಯೋಗವೇ ಬರುತ್ತಿರಲಿಲ್ಲ. ಆದರೆ ಅವಿಭಜಿತ ಜಿಲ್ಲೆಯ ಜನರ ಋಣ ತೀರಿಸುವ ಬದಲು ಕೃಷ್ಣಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ಮೋಸ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೃಷ್ಣೆಯ ನೀರಿನ ಬಳಕೆ ವಿಷಯದಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿರುವುದು ಅಡ್ಡಿಯಾಗಿದೆ. ಹೀಗಿದ್ದು ಸರ್ವ ಪಕ್ಷಗಳ ಸಭೆ, ನಿಯೋಗ ಏನೂ ಆಡಲಾಗದು. ಇಂಥ ಹೇಳಿಕೆಯೇ ಸರಿಯಾದ ಕ್ರಮವಲ್ಲ ಎಂದು ಆಕ್ಷೇಪಿಸಿದರು.

ಕೇಂದ್ರ ಸರ್ಕಾರ ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನ ಅಧಿಸೂಚನೆ ಹೊರಡಿಸುವ ಪರವಾಗಿದ್ದು, ಸರ್ಕಾರ ಸುಳ್ಳು ಹೇಳುವ ಬದಲು ಸುಪ್ರೀಂ ಕೋರ್ಟ್‍ನಲ್ಲಿ ಬಲಿಷ್ಠ ಹಾಗೂ ಸಮರ್ಥ ಕಾನೂನು ಹೋರಾಟ ನಡೆಸಬೇಕು ಎಂದು ಆಗ್ರಹಿಸಿದರು.

ರಾಜಕೀಯವಾಗಿ ತಮಿಳುನಾಡು ಸರ್ಕಾರವನ್ನು ತೃಪ್ತಿಪಡಿಸಲು ರಾಜ್ಯದಲ್ಲಿ ನೀರಿನ ಸಂಕಷ್ಟ ಇದ್ದರೂ ರಾಜಕೀಯ ಮೈತ್ರಿಯ ಸ್ನೇಹಕ್ಕೆ ರಾಜ್ಯದ ಜನರ ಹಿತವನ್ನು ಬಲಿಕೊಟ್ಟು, ಸರ್ವಪಕ್ಷಗಳ ಸಭೆಯನ್ನೂ ಕರೆದು ಕಾವೇರಿ ನೀರನ್ನು ಹರಿಸಿ ವಂಚಿಸಿದರು ಎಂದು ಟೀಕಿಸಿದರು.

ಇದೀಗ ಕೃಷ್ಣೆಯ ವಿಷಯದಲ್ಲಿ ಬಿಜೆಪಿ ವಿರುದ್ಧ ಗೂಬೆ ಕೂಡಿಸಿ ರಾಜಕೀಯ ಮಾಡುವ ಬದಲು ಮೋಸದಾಟ ನಿಲ್ಲಿಸಿ ಜನರಿಗೆ ಸತ್ಯವನ್ನು ಹೇಳಬೇಕು. ಸ್ವಯಂ ವಕೀಲರೂ ಆಗಿರುವ ಸಿದ್ಧರಾಮಯ್ಯ ಅವರು ವಾಸ್ತವಿಕ ಸಂಗತಿ ಬಿಚ್ಚಿಡಲಿ. ಭೂಸ್ವಾಧೀನ, ಪುನರ್ವಸತಿ, ಪುನರನಿರ್ಮಾಣದಂಥ ಕೆಲಸಗಳೂ ಸೇರಿತೆ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕೆಲಸಕ್ಕೆ ಸರ್ಕಾರ ತುರ್ತಾಗಿ 10 ಸಾವಿರ ಕೋಟಿ ರೂ. ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಅಧಿಕಾರಕ್ಕೆ ಬಂದ ಮೇಲೆ ಹೊಸದಾಗಿ ಬಜೆಟ್ ಮಂಡಿಸಿರುವ ನೀವು ಕೃಷ್ಣಾ ಯೋಜನೆಗಳಿಗೆ ಅನುದಾನ ನೀಡದೇ ರಾಜ್ಯದ ಹಿಂದಿನ ಸರ್ಕಾರ, ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಅಗತ್ಯ ಬಿದ್ದರೆ ನಮ್ಮ ಸರ್ಕಾರದ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಹಾಗೂ ಅಧಿಕಾರಕ್ಕೆ ಬಂದ ಮೇಲೆ ಸಿದ್ದರಾಮಯ್ಯ ಮಂಡಿಸಿರುವ ಎರಡೂ ಬಜೆಟ್‍ಗಳನ್ನು ಜನರ ಮುಂದಿಟ್ಟು ಚರ್ಚೆಗೆ ಸಿದ್ಧ ಎಂದರು.

ರಾಜಕೀಯವಾಗಿ ಕೇಂದ್ರದ ವಿರುದ್ಧ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಸುಳ್ಳು ಹೇಳುವ ಕೆಲಸ ಮಾಡಬಾರದು. ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಗೆ ಮಂಜೂರು ಮಾಡಿರುವ 530 ಕೋಟಿ ರೂ. ಅನುದಾನ ಪಡೆಯುವಲ್ಲಿ ಪ್ರಕ್ರಿಯೆ ಆರಂಭಿಸದೇ ಜನರಿಗೆ ರಾಜ್ಯ ಸರಕಾರ ವಂಚಿಸುತ್ತಿದೆ ಎಂದರು.

ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿದೆ. ಮುಂಗಾರು ಕೈಕೊಟ್ಟು, ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಕೂಡಲೇ ಗೋಶಾಲೆ ಆರಂಭಿಸಿವುದು, ಮೇವು ಬ್ಯಾಂಕ್ ತೆರೆಯಬೇಕು. ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಿಸಬೇಕು. ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವಂಥ ತುರ್ತು ಕೆಲಸ ಮಾಡಬೇಕು. ಆದರೆ ಬರದ ವಿಷಯದಲ್ಲೂ ಸರ್ಕಾರ ತಾರತಮ್ಯ, ರಾಜಕೀಯ ಮಾಡುವಂಥ ಸಣ್ಣತನ ಮಾಡುವ ಕ್ರಮ ಸರಿಯಲ್ಲ ಎಂದು ದೂರಿದರು.

500 ಸಾವಿರ ವಿದ್ಯುತ್ ಉತ್ಪಾದಿಸುವ ರಾಯಚೂರು, ಬಳ್ಳಾರಿ, ಉಡುಪಿ ಶಾಖೋತ್ಪನ್ನ ಕೇಂದ್ರಗಳಿದ್ದರೂ ಸರ್ಕಾರ ವಿದ್ಯುತ್ ಉತ್ಪಾದಿಸುವಲ್ಲಿ ವಿಫಲವಾಗಿದೆ. ದ್ಯುತ್ ಕಡಿತ ಮಾಡುತ್ತ ರಾಜ್ಯದ ಜನರನ್ನು ಕತ್ತಲಲ್ಲಿ ಇರಿಸಲಾಗಿದೆ ಎಂದು ದೂರಿದರು.

ಇದಲ್ಲದೇ ಪರಿಶಿಷ್ಟ ಸಮುದಾಯಗಳಿಗೆ ಮೀಸಲಿರುವ 11344 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ಪರಿಶಿಷ್ಟರಿಗೆ ವಂಚಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ, ಡಾ.ಸುರೇಶ ಬಿದಾರದಾರ, ಶಿವರುದ್ರ ಬಾಗಲಕೋಟ, ಚಂದ್ರಶೇಖರ ಕವಟಗಿ, ವಿಜಯ ಜೋಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next