Advertisement

ಸಾಮಾನ್ಯ ಕಾರ್ಯಕರ್ತನಿಗೂ ಅವಕಾಶ ನೀಡುವ ಏಕೈಕ ಪಕ್ಷ ಬಿಜೆಪಿ: ಸಂಸದ ಗೋಪಾಲ ಶೆಟ್ಟಿ

03:43 PM May 06, 2023 | Team Udayavani |

ಪುತ್ತೂರು : 2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಅಭಿವೃದ್ಧಿಗೆ ಪೂರಕವಾಗಿ ಈ ಬಾರಿಯ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿ ಸರಕಾರ ಸ್ಪಷ್ಟ ಬಹುಮತದೊಂದಿಗೆ ಆಡಳಿತಕ್ಕೆ ಬರಲಿದೆ. ಡಬಲ್‌ ಎಂಜಿನ್‌ ಸರಕಾರದಿಂದ ಅಭಿವೃದ್ಧಿ ಕಾರ್ಯ ನಡೆಯಲು ಸಾಧ್ಯವಿದ್ದು ಹಾಗಾಗಿ ಪುತ್ತೂರಿನಲ್ಲಿಯು ಬಿಜೆಪಿ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಮುಂಬೈ ಉತ್ತರದ ಸಂಸದ ಗೋಪಾಲ್‌ ಶೆಟ್ಟಿ ಹೇಳಿದರು.

Advertisement

ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪುತ್ತೂರಿನಲ್ಲಿ ಬಿಜೆಪಿಯು ಆಶಾ ತಿಮ್ಮಪ್ಪ ಗೌಡ ಎಂಬ ಸಾಮಾನ್ಯ ಕಾರ್ಯಕರ್ತೆಯನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ತನ್ಮೂಲಕ ಮಹಿಳೆಗೆ ಅವಕಾಶ ನೀಡಿದೆ. ಇದೇ ರೀತಿ ಸಾಮಾನ್ಯ ಕಾರ್ಯಕರ್ತರಾಗಿದ್ದ ನಳಿನ್‌ ಕುಮಾರ್‌ ಕಟೀಲು ಅವರನ್ನು ಸಂಸದರಾಗಿ, ಆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. 1992 ಪ್ರಥಮವಾಗಿ ಪಾರ್ಟಿ ನನಗೆ ಸಮಾಜ ಸೇವೆ ಮಾಡಲು ಅವಕಾಶ ನೀಡಿತ್ತು. ಎರಡು ಬಾರಿ ಕಾರ್ಪೊರೇಟರ್‌, ತಲಾ ಎರಡು ಬಾರಿ ಶಾಸಕ, ಸಂಸದನಾಗುವ ಅವಕಾಶ ನೀಡಿದೆ. ಸಾಮಾನ್ಯ ಕಾರ್ಯಕರ್ತನಿಗೂ ಅವಕಾಶ ನೀಡುವ ಏಕೈಕ ಪಕ್ಷ ಬಿಜೆಪಿ ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಉತ್ತಮ ಆಡಳಿತ ನೀಡಿದೆ. ಅಭಿವೃದ್ಧಿಯ ವಿಚಾರದಲ್ಲಿ ಕರ್ನಾಟಕ ಮುಂದಿದೆ. ಹೀಗಾಗಿ ಧನಾತ್ಮಕ ಚಿಂತನೆಯಲ್ಲಿ ಬಿಜೆಪಿಗೆ ಮತ ಚಲಾವಣೆ ಮಾಡೋಣ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್‌, ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್‌ ರಾಧಾಕೃಷ್ಣ ರೈ, ಚುನಾವಣಾ ನಿರ್ವಹಣಾ ಸಂಚಾಲಕ ಅಪ್ಪಯ್ಯ ಮಣಿಯಾಣಿ, ಮಾಧ್ಯಮ ಪ್ರಮುಖ್‌ ಚಂದ್ರಶೇಖರ್‌ ರಾವ್‌ ಬಪ್ಪಳಿಗೆ ಉಪಸ್ಥಿತರಿದ್ದರು.

220 ಬೂತ್‌ಗಳಲ್ಲಿ ಮನೆ ಮನೆ ಸಂಪರ್ಕ
ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಎರಡನೇ ಸುತ್ತಿನ ಮತ ಪ್ರಚಾರ ಕಾರ್ಯವು ಶುಕ್ರವಾರ ಬಿರುಸಿನಿಂದ ನಡೆಯಿತು. ಏಕಕಾಲದಲ್ಲಿ 220 ಬೂತ್‌ಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಕಾರ್ಯ ನಡೆಸಲಾಯಿತು. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಇರ್ದೆ ಗ್ರಾಮದ ಗೋಳಿ ಪದವಿನಲ್ಲಿ ಮನೆ-ಮನೆ ಭೇಟಿ ನೀಡಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next