Advertisement

27 ಕ್ಷೇತ್ರಗಳಲ್ಲಿ ಬಿಜೆಪಿಗಿದೆ ಜನಬೆಂಬಲ

05:14 PM Apr 01, 2019 | Team Udayavani |
ಗಂಗಾವತಿ: ರಾಜ್ಯದ 27 ಕ್ಷೇತ್ರಗಳು ಸೇರಿ ದೇಶದ ಜನತೆ ಬೇಡವೆಂದರೂ ಬಿಜೆಪಿಗೆ ಮತ ಚಲಾಯಿಸಿ ಮತ್ತೂಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲಿದ್ದಾರೆ ಎಂದು ಬಿಜೆಪಿ ಶಾಸಕ ಕೆ.ಎಸ್‌. ಈಶ್ವರಪ್ಪ ಹೇಳಿದರು.
ನಗರದ ಚನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ “ನಾನು ಚೌಕಿದಾರ್‌’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 70 ವರ್ಷಗಳಿಂದ ದೇಶದ ಕಾಂಗ್ರೆಸ್‌ ಹಾಗೂ ಇತರೆ ಪಕ್ಷದವರು ನಡೆಸಿದ ಭ್ರಷ್ಟಾಚಾರವನ್ನು ಪ್ರಧಾನಿ ಕಂಡು ಹಿಡಿದಿದ್ದಾರೆ.
ಮುಂದಿನ ಸಲ ಪ್ರಧಾನಿಯಾಗಿ ಎಲ್ಲ ಭ್ರಷ್ಟರನ್ನು ಜೈಲಿಗೆ ಕಳಿಸುವ ಶಪಥ ಮಾಡಿದ್ದಾರೆ. ದೇಶದ ಜನರು ಸ್ವಾಭಿಮಾನಿಗಳಾಗಿ ಜೀವನ ನಡೆಸಲು ನರೇಂದ್ರ ಮೋದಿಯವರು ಆಡಳಿತ ನಡೆಸಿದ್ದಾರೆ. ಪಾಕಿಸ್ತಾನ ಮಣಿಯಲು ಸರ್ಜಿಕಲ್‌ ದಾಳಿ ನಡೆಸಿ ಸೈನಿಕರ ಸಾವಿನ ಸೇಡನ್ನು ತೀರಿಸಿಕೊಂಡಿದ್ದಾರೆ. ಪ್ರಸ್ತುತ ದೇಶದಲ್ಲಿ ನಡೆದಿರುವ ಚುನಾವಣೆಯಲ್ಲಿ ದೇಶದ ಜನರು ಪೂರ್ಣ ಬೆಂಬಲ ನೀಡಲಿದ್ದು, ತಮಿಳುನಾಡಿನಲ್ಲಿ 20 ಓರಿಸ್ಸಾ, ಪಶ್ಚಿಮ ಬಂಗಾಲ ರಾಜ್ಯಗಳಲ್ಲಿಯೂ ಅಧಿಕ ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಇಡೀ ದೇಶದ ಜನರ ಪ್ರೀತಿಗೆ ಪಾತ್ರವಾಗುತ್ತಿದೆ. ಕಳೆದ 70 ವರ್ಷ ದೇಶದ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷ ಕುಟುಂಬವನ್ನು ಅಭಿವೃದ್ಧಿಪಡಿಸಿದ್ದು ಬಿಟ್ಟರೆ ದೇಶದ ಕುರಿತು ಚಿಂತನೆ ಮಾಡಿಲ್ಲ. ವಿಶ್ವದಲ್ಲಿ ಭಾರತಕ್ಕೆ ಅಭಿವೃದ್ಧಿಯಲ್ಲಿ 12 ಸ್ಥಾನ ಇತ್ತು. ಮೋದಿ ಪ್ರಧಾನಿಯಾಗಿ 6ನೇ ಸ್ಥಾನಕ್ಕೇರಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ವ್ಯಾಪಕ ಭ್ರಷ್ಟಾಚಾರ ಮಾಡಿದ್ದಾರೆ. ಬರಿ ಸುಳ್ಳು ಹೇಳುವ
ಮೂಲಕ ಹಣ ಕೊಳ್ಳೆ ಹೊಡೆದಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಮಾತನಾಡಿ, ಕಳೆದ ಐದು ವರ್ಷಗಳ ಹಿಂದೆ ಪ್ರಧಾನಿ ಮೋದಿ ಮೇಲೆ ಭರವಸೆ ಇಟ್ಟು ಅಧಿಕಾರ ನೀಡಿದ ಜನರ ಭರವಸೆಯಂತೆ ಕೆಲಸ ಮಾಡಲಾಗಿದೆ. ಗಂಗಾವತಿಗೆ ಕೇಂದ್ರೀಯ ವಿದ್ಯಾಲಯ, ರೈಲ್ವೆ ಮಾರ್ಗ, ಅಮೃತಸಿಟಿ, ಕೌಶಲ್ಯ ಅಭಿವೃದ್ಧಿ ಕೇಂದ್ರ ಹೀಗೆ ಹತ್ತು ಹಲವು ಕಾರ್ಯ ಮಾಡಲಾಗಿದೆ. ಉಳಿದ ಕೆಲಸ ಮಾಡಲು ಮತ್ತು ಮತ್ತೂಮ್ಮೆ ಮೋದಿ ಪ್ರಧಾನಿಯಾಗಲು ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದರು.
ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಕಳೆದ ಐದು ವರ್ಷದ ಆಡಳಿತ ನೀಡಿದ ಮೋದಿ ಅವರಿಗೆ ಮತ್ತೂಮ್ಮೆ ದೇಶದ ಜನರು ಅಧಿಕಾರ ನೀಡಲು ತುದಿಗಾಲ ಮೇಲೆ ನಿಂತಿದ್ದಾರೆ. ಕೊಪ್ಪಳ ಕ್ಷೇತ್ರದಲ್ಲಿ ಕರಡಿ ಸಂಗಣ್ಣ ಮತ್ತೂಮ್ಮೆ ಗೆದ್ದು ಮೋದಿ ಕೈ ಬಲಪಡಿಸಲಿದ್ದಾರೆ ಎಂದರು.
ಶಾಸಕರಾದ ಸೋಮಲಿಂಗಪ್ಪ, ಹಾಲಪ್ಪ ಆಚಾರ, ದಡೇಸೂಗೂರು ಬಸವರಾಜ, ಮಾಜಿ ಶಾಸಕ ಜಿ.ವೀರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಸಿ.ವಿ.ಚಂದ್ರಶೇಖರ, ಆನೆಗೊಂದಿ ರಾಜವಂಶಸ್ಥ ಶ್ರೀಕೃಷ್ಣದೇವರಾಯ, ಎಚ್‌.ಗಿರೇಗೌಡ, ಅಪ್ಪಣ್ಣ ಪದಕಿ, ವಿರೇಶ ಬಲ್ಕುಂದಿ, ಬಿ.ಜಿ.ಅರಳಿ, ನಾಗರಾಜ ಬಿಲ್ಗಾರ, ಶ್ರೀನಿವಾಸಧೂಳ್‌, ನಾಗರಾಜ ಚಳಗೇರಿ, ನರಸಿಂಹರಾವ್‌ ಕುಲಕರ್ಣಿ ಸೇರಿದಂತೆ ಅನೇಕರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next