Advertisement

ಬಿಜೆಪಿಗೆ ದೇಶದ ಹಿತವೇ ಮುಖ್ಯ: ಬಿಎಸ್‌ವೈ

02:00 PM Jan 06, 2018 | Team Udayavani |

ಬಳ್ಳಾರಿ: ದೇಶದ ಹಿತವೇ ಮುಖ್ಯವಾಗಿರುವ ಬಿಜೆಪಿಗೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಂಬ ಬೇಧವಿಲ್ಲ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ನಮ್ಮ ಪಕ್ಷದ ಮಂತ್ರವಾಗಿದೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಬಿಜೆಪಿ ಪರಿವರ್ತನಾ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಅಭಿವೃದ್ಧಿಯ ಅರ್ಥವೇ ಅರಿಯದ ಸಿಎಂ ಸಿದ್ದರಾಮಯ್ಯ 2 ಲಕ್ಷ ಕೋಟಿ ರೂ. ಗಳ ಸಾಲ ಪಡೆದ ಸಾಧನೆ ಮಾಡಿದ್ದಾರೆ.
1,86,000 ಕೋಟಿ ರೂ.ಗಳ ರಾಜ್ಯ ಬಜೆಟ್‌ನ ಶೇ. 60ರಷ್ಟನ್ನೂ ಅವರ ಬಳಕೆ ಮಾಡಿಕೊಂಡಿಲ್ಲ. ಯೋಜನೆಗಳ ಅಂದಾಜು ವೆಚ್ಚಗಳಿಗೆ ಶೇ. 30 ರಿಂದ 40ರಷ್ಟು ಹೆಚ್ಚಳ ಮಾಡಿ, ಗುತ್ತಿಗೆದಾರರ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ಕಮಿಷನ್‌ ಗಳಿಸುತ್ತಿದ್ದಾರೆ ಎಂದು ಅವರು
ಆರೋಪಿಸಿದರು. 

ಅನ್ನಭಾಗ್ಯ ಯೋಜನೆ ತಮ್ಮದೆನ್ನುವ ಸಿಎಂ ಸಿದ್ದರಾಮಯ್ಯನವರ ಮಾತು ಸುಳ್ಳು. ಈ ಯೋಜನೆ ಕೇಂದ್ರ ಸರ್ಕಾರದ್ದಾಗಿದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರು ಫಲಾನುಭವಿಗಳ ಮನೆ ಮನೆಗೆ ಹೋಗಿ ಪ್ರಚಾರ ಮಾಡಬೇಕು. ಬಿಜೆಪಿಯ ಸಂಸದರು ಹಾಗೂ ಶಾಸಕರು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಕಿಸಬೇಕು ಎಂದರು.

ರಾಜ್ಯದಲ್ಲಿ ಕಳೆದ ಎಂಟು ತಿಂಗಳಿನಿಂದ ಗೋಧಿ ಸರಬರಾಜಾಗುತ್ತಿಲ್ಲ. ಪಡಿತರ ಗೋಧಿ ಅಕ್ರಮ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ಹೇಳಿದರು.  ಬಳ್ಳಾರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಸೋನಿಯಾ ಗಾಂಧಿ ಇಲ್ಲಿನ  ಜನರಿಗೆ ಟೋಪಿ ಹಾಕಿದ್ದಾರೆ. ಕಾಂಗ್ರೆಸ್‌ ನಾಯಕರು ಈಗ ರಾಹುಲ್‌ ಗಾಂಧಿಯನ್ನು ಕರೆಸಿ ಮತ್ತೂಂದು ಟೋಪಿ ಹಾಕಿಸುತ್ತಿದ್ದಾರೆ. ಇನ್ನು ನಾಲ್ಕು ತಿಂಗಳ ಕಾಲ ಜಿಲ್ಲೆಯ ಮತದಾರರು ಕಾಂಗ್ರೆಸ್ಸಿಗರ ನಡೆಗಳ, ತಂತ್ರಗಳ ಕುರಿತು ಎಚ್ಚರದಿಂದ ಇರಬೇಕು ಎಂದು ಅವರು ಸಲಹೆ ನೀಡಿದರು.

ನಾನು ರೈತರಿಗಾಗಿ ಡಿನೋಟಿಫೈ ಮಾಡಿದ್ದು. ಆದರೆ, ಸಿಎಂ ಸಿದ್ದರಾಮಯ್ಯ ತಮ್ಮ ಗಳಿಕೆಗಾಗಿ ಡಿನೋಟಿಫೈ ಮಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ಅಧಿಕಾರಿಗಳಿಂದ ಸಾಧನಾ ಸಮಾವೇಶಗಳನ್ನು ರಾಜ್ಯದ ತೆರಿಗೆದಾರರ ವೆಚ್ಚದಲ್ಲಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. 

Advertisement

ಬಳ್ಳಾರಿ ನಗರದ ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಮತ್ತೆ ಸ್ಪರ್ಧಿಸಲಿದ್ದಾರೆ. ಅವರನ್ನು  ಬಳ್ಳಾರಿಯ ಜನರು ಆಶೀರ್ವದಿಸಿ ಗೆಲ್ಲಿಸಬೇಕು ಎಂದರು. ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಮಾತನಾಡಿ, ರಾಜ್ಯದ ಕಾಂಗ್ರೆಸ್‌ ಪಕ್ಷದ ಸರ್ಕಾರದ ದುರಾಡಳಿತಕ್ಕೆ ಅಂತ್ಯ ಕಾಲ ಬಂದಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನೂತನ ತಾಲೂಕುಗಳು ರಚನೆ
ಯಾಗುವುದಿಲ್ಲ.ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಬಳಿಕವೇ ರಾಜ್ಯದಲ್ಲಿ ನೂತನ ತಾಲೂಕುಗಳು ಅಸ್ತಿತ್ವಕ್ಕೆ ಬರಲಿವೆ. ಅವರೇ, ನೂತನ ತಹಶೀಲ್ದಾರರನ್ನು ನೇಮಕ ಮಾಡಲಿದ್ದಾರೆ. ಇದು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆಗದ ಕೆಲಸ. ರಾಜ್ಯ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ವೈಫಲ್ಯ ಕಂಡಿದೆ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯಿಂದ ಯಾವುದೇ ನಿರೀಕ್ಷಿತ ಕೆಲಸಗಳಾಗಿಲ್ಲ ಎಂದು ಅವರು ಕಿಡಿಕಾರಿದರು.

ರಾಜ್ಯದ ಕಾಂಗ್ರೆಸ್‌ ಸರ್ಕಾರ ಹೊಸ ಯೋಜನೆಗಳ ಘೋಷಣೆಗೆ ಸೀಮಿತವಾಗಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡ ರೈತರ ಒಂದು ಲಕ್ಷ ರೂಪಾಯಿವರೆಗಿನ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಲಿ ಎಂದು ಆಗ್ರಹಿಸಿದರು. ಸಂಸದ ಬಿ.ಶ್ರೀರಾಮುಲು ಮಾತನಾಡಿ, ವಾಲ್ಮೀಕಿ ಜಯಂತಿ ಆರಂಭಿಸಲು ಕಾರಣರಾದ ಯಡಿಯೂರಪ್ಪ ಮುಂದಿನ ಸಿಎಂ ಆಗುತ್ತಿದ್ದಂತೆ ವಾಲ್ಮೀಕಿ ಸಮುದಾಯಕ್ಕೆ ಶೇ 7.5 ಮೀಸಲಾತಿ
ಕಲ್ಪಿಸಲಿದ್ದಾರೆ. ಇದು ಖಚಿತ ಎಂದು ಹೇಳಿದರು.  

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬಳ್ಳಾರಿ ನಗರದ ಅಭಿವೃದ್ಧಿಗೆ ಎರಡು ಸಾವಿರ ಕೋಟಿ ರೂ ಅನುದಾನ ನೀಡಿದ್ದರು. ಯಡಿಯೂರಪ್ಪ ನೀಡಿರುವ ಕೊಡುಗೆಗಳಿಗೆ ಪೂಜೆ ನೆರವೇರಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌, ಶಾಸಕರಾದ ಅನಿಲ್‌ ಲಾಡ್‌, ಎನ್‌. ವೈ.ಗೋಪಾಲಕೃಷ್ಣ ಕಾಯಿ ಹೊಡೆದು ಉದ್ಘಾಟನೆ ಮಾಡುವ ಪೂಜಾರಿಯ ಕೆಲಸ ಮಾಡುತ್ತಿದ್ದಾರೆ ಎಂದರು.

ಬೆಂಗಳೂರಿನಿಂದ ಕುಣಿಯುತ್ತಾ ಪಾದಯಾತ್ರೆ ಮೂಲಕ ಬಳ್ಳಾರಿಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದು ಅನೇಕ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದರು. ಆದರೆ, ಅವರು ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ನಗರದ ಜನರಿಗೆ ದೊರೆಯದ ಅನಿಲ್‌ ಲಾಡ್‌ ಸೋಗಲಾಡಿ ಶಾಸಕರಾಗಿದ್ದಾರೆ. ಇದು ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಖರಿ. ಕಾಂಗ್ರೆಸ್‌ ಪಕ್ಷವನ್ನು ರಾಜ್ಯದ ಜನರು ತಿರಸ್ಕರಿಸಲಿದ್ದಾರೆ ಎಂದರು. ಸಮಾವೇಶದಲ್ಲಿ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಏಕ ವಚನದಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ವಾಗ್ಧಾಳಿ ನಡೆಸಿದರು.

 ಸಮಾವೇಶದಲ್ಲಿ ಬಿಜೆಪಿ ಉಸ್ತುವಾರಿ ಮುರಳೀಧರರಾವ್‌, ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿಕುಮಾರ್‌, ಕಂಪ್ಲಿ ಶಾಸಕ ಜಿ.ಸುರೇಶ್‌ ಬಾಬು, ಮಾಜಿ ಸಚಿವರಾದ ರೇಣುಕಾಚಾರ್ಯ, ಹರತಾಳ್‌ ಹಾಲಪ್ಪ, ಮಾಜಿ ಸಂಸದರಾದ ಸಣ್ಣ ಪಕ್ಕೀರಪ್ಪ, ಜೆ.ಶಾಂತಾ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಮಾಜಿ ಮೇಲ್ಮನೆ ಸದಸ್ಯ ಮೃತ್ಯುಂಜಯ ಜಿನಗಾ, ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ ಸೇರಿದಂತೆ ಪಕ್ಷದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next