ಗದಗ: ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದ್ದು, 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಎಲ್ಲೆಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಬಹುಮತದೊಂದಿಗೆ ಸರಕಾರ ರಚನೆ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಜನ ಪಕ್ಷಪಾತ ಹಾಗೂ ಕಾಂಗ್ರೆಸ್ ಆಡಳಿತದಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗಾಗಿ ಮತದಾರರು ಕಾಂಗ್ರೆಸ್ ನ್ನು ತಿರಸ್ಕರಿಸಿದ್ದಾರೆ. ಭಯೋತ್ಪಾದನೆಗೆ ಬೆಂಬಲಿಸಿರುವುದು, ನಿರಂತರವಾಗಿ ನಡೆದ ಗೋಹತ್ಯೆ, ರಾಜ್ಯದ 24 ಹಿಂದು ಕಾರ್ಯಕರ್ತರ ಹತ್ಯೆ ನಡೆಸಿರುವುದನ್ನು ಜನರು ನೋಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ರಾಜ್ಯದ ಹಳೇ ಮೈಸೂರು ಭಾಗದಲ್ಲೂ ಬಿಜೆಪಿಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರ ರಹಿತ ಆಡಳಿತ, ದೇಶದ ಸಮಗ್ರ ಅಭಿವೃದ್ಧಿಯ ಚಿಂತನೆ, ಜನಕಲ್ಯಾಣ ಯೋಜನೆಗಳು ದೇಶ ಹಾಗೂ ರಾಜ್ಯದ ಜನರ ವಿಶ್ವಾಸ ಗಳಿಸಿವೆ. ಕಾಂಗ್ರೆಸ್ ನ ಸೋಲು ಖಚಿತವಾಗಿದ್ದು, ಬಿಜೆಪಿ 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.
ಹಿಂದಿನಿಂದಲೂ ಗದಗ ಕ್ಷೇತ್ರದಲ್ಲಿ ಗೂಂಡಾಗಿರಿ ಪ್ರವೃತ್ತಿ ಮಿತಿಮೀರಿದೆ. ಕಳೆದ ಕೆಲ ದಿನಗಳ ಹಿಂದೆ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಅವರ ಮೇಲೆ ಹಲ್ಲೆಗೆ ಯತ್ನ ನಡೆಸಿರುವುದು ಕಾಂಗ್ರೆಸ್ ನ ಗೂಂಡಾಗಿರಿ ಪ್ರವೃತ್ತಿ ತಿಳಿಯುತ್ತದೆ. ಈ ಬಾರಿ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ವಿಜಯ ದಾಖಲಿಸುತ್ತದೆ ಎಂದು ಹೇಳಿದರು.
ಮೇ 13 ರಂದು ಕಾಂಗ್ರೆಸ್ ನ ಶವ ಪೆಟ್ಟಿಗೆಗೆ ಡಿಕೆಶಿ, ಸಿದ್ದರಾಮಯ್ಯ ಮೊಳೆ ಹೊಡೆಯುತ್ತಾರೆ ಎಂದು ಹೇಳಿದರು.
ಈಗಾಗಲೇ ಬಿಜೆಪಿ ಮೂರ್ನಾಲ್ಕು ಲಿಂಗಾಯತ ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಮುಂದೆಯೂ ಕೂಡ ಬಿಜೆಪಿಯೇ ಲಿಂಗಾಯತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆ ಎಂದು ಹೇಳಿದರು.
ಅಭ್ಯರ್ಥಿ ಅನಿಲ ಮೆಣಸಿನಕಾಯಿ, ವಿಪ ಸದಸ್ಯ ಎಸ್.ವಿ. ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ ಸುದ್ದಿಗೋಷ್ಠಿಯಲ್ಲಿ ಇದ್ದರು.