Advertisement

Panaji: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನ ಪಡೆಯುವುದು ಖಚಿತ

02:32 PM Feb 11, 2024 | Team Udayavani |

ಪಣಜಿ: ಭಾರತದಲ್ಲಿ 10 ವರ್ಷಗಳ ಕೆಟ್ಟ ಆಡಳಿತದ ನಂತರ ನಮ್ಮ ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿಯರನ್ನು ಅಧಿಕಾರಕ್ಕೆ ತಂದರು. ಅಂದು ಇಡೀ ಜಗತ್ತಿನಲ್ಲಿರುವ ಕನ್ನಡಿಗರು ಭಾರತದಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಪ್ರಚಾರಕ್ಕೆ ಬಂದಿದ್ದರು. 213 ಸ್ಥಾನ ಪಡೆದು ಪೂರ್ಣ ಬಹುಮತದಲ್ಲಿ ಅಂದು ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದರು ಎಂದು ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Advertisement

ಗೋವಾ ರಾಜಧಾನಿ ಪಣಜಿಯ ಮೆನೆಜಿಸ್ ಬ್ರಗಾಂಜಾ ಸಭಾಗೃಹದಲ್ಲಿ ಫೆ.11ರ ಭಾನುವಾರ ಗೋವಾ ಬಿಜೆಪಿ ಕರ್ನಾಟಕ ಘಟಕ ಆಯೋಜಿಸಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಉಪಸ್ಥಿತರಿದ್ದು, ಉಪನ್ಯಾಸ ನೀಡಿದರು.

ಗೋಮಂತಕವನ್ನು ಗಟ್ಟಿಯಾಗಿಸಲು ಗೋವಾದಲ್ಲಿ ಕನ್ನಡಿಗರು ಒಗ್ಗಟ್ಟಾಗಬೇಕು. ಭಾರತದಲ್ಲಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗದಿದ್ದರೆ ಕಳೆದ 10 ವರ್ಷಗಳಲ್ಲಿ ಮೋದಿ ನಮ್ಮ ದೇಶವನ್ನು ಮೇಲೆ ತಂದಿರುವುದನ್ನು ಮುಂದೆ ಬೇರೆ ಸರ್ಕಾರ ಅಧಿಕಾರಕ್ಕೆ ಬಂದರೆ ಆ ಸರ್ಕಾರ ನಮ್ಮ ದೇಶವನ್ನು ಪ್ರಪಾತಕ್ಕೆ ತಳ್ಳುತ್ತದೆ. ಅದಕ್ಕಾಗಿ ಮತ್ತೆ ನರೇಂದ್ರ ಮೋದಿಯವರೇ ಪ್ರಧಾನಿಯಾಗಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಎಂದರು.

ಹೂಡಿಕೆ ಮಾಡಲು ಇಂದು ಜಗತ್ತು ನಮ್ಮ ಮೇಲೆ ವಿಶ್ವಾಸವಿಡುತ್ತಿದೆ. ಹೂಡಿಕೆ ಮಾಡಲು ಚೀನಾ ಮತ್ತು ಭಾರತ ಈ ಎರಡೂ ದೇಶಗಳಲ್ಲಿ ಭಾರತವನ್ನು ಹೂಡಿಕೆದಾರರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಸಕ್ತ ಬಾರಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನ ಪಡೆಯುವುದು ಖಚಿತ. ಆದರೆ ಕಾಂಗ್ರೆಸ್ ಪಕ್ಷವನ್ನು 40 ಸ್ಥಾನಗಳಿಗಿಂತ ಕೆಳಕ್ಕಿಳಿಸುವುದು ಹೇಗೆ ಎಂಬುದು ಮುಖ್ಯವಾಗಿದೆ ಎಂದ ಅವರು ಕರ್ನಾಟಕದಲ್ಲಿ ಕಳೆದ 8 ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಕೂಡ ನಡೆದಿಲ್ಲ. ಕರ್ನಾಟಕದಲ್ಲಿ ಇಎಸ್‍ಐ ಆಸ್ಪತ್ರೆಗಳಲ್ಲಿ ಔಷಧಿ ಪೂರೈಸಲು ಸರ್ಕಾರದ ಬಳಿ ಹಣವಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದರು.

ನಾನು ಬಿಜೆಪಿಯಿಂದ ಅಥವಾ ಯಾರಿಂದಲೂ ಪ್ರಚಾರಕ್ಕಾಗಿ ಒಂದು ರೂಪಾಯಿಯನ್ನೂ ಪಡೆದುಕೊಂಡಿಲ್ಲ. ಯಾವುದೇ ಹಣಕ್ಕಾಗಿ ನಾನು ಪ್ರಚಾರ ಮಾಡುವುದಿಲ್ಲ. ನಾವು ಇಂದು ಯಾವುದೇ ದೇಶದಲ್ಲಿ ಸಿಲುಕಿಕೊಂಡರೆ ನಮ್ಮನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಇದ್ದಾರೆ ಎಂಬ ವಿಶ್ವಾಸ ಇಂದು ನಮಗಿದೆ. ಇಂದು ನರೇಂದ್ರ ಮೋದಿಯವರ ಜಾಗದಲ್ಲಿ ಬೇರೆ ಯಾರೇ ಇದ್ದರೂ ಕೂಡ ರಾಮಮಂದಿರ ನಿರ್ಮಾಣ ಸಾಧ್ಯವಿರಲಿಲ್ಲ ಎಂದು ಹೇಳಿದರು.

Advertisement

ಕಳೆದ ಅನೇಕ ವರ್ಷಗಳ ಭಾರತ ದೇಶದ ಜನತೆಯ ಕಣ್ಣೀರಿನ ಫಲವಾಗಿ ನಮಗೆ ನರೇಂದ್ರ ಮೋದಿಯವರಂತಹ ಪ್ರಧಾನಿಗಳು ಸಿಕ್ಕಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಭಾರತದಲ್ಲಿ 4 ಕೋಟಿ ಜನರಿಗೆ ಶ್ರೀರಾಮ ಮನೆ ಕಟ್ಟಿಸಿಕೊಟ್ಟ ನಂತರವೇ ಶ್ರೀರಾಮಮಂದಿರಲ್ಲಿ ಶ್ರೀರಾಮ ಕುಳಿತು ನೋಡಿದ್ದಾನೆ ಎಂದರು.

ಈ ಸಂದರ್ಣದಲ್ಲಿ ಗೋವಾ ಬಿಜೆಪಿ ಕರ್ನಾಟಕ ಸೆಲ್ ಕನ್ವೀನರ್ ಮುರಳಿ ಮೋಹನ್ ಶೆಟ್ಟಿ, ದಕ್ಷೀಣ ಗೋವಾ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಗಿರಿರಾಜ್ ಭಂಡಾರಕಾರ್, ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ, ಮಡಿವಾಳಯ್ಯ ಗಣಾಚಾರಿ, ಶಿವಾನಂದ ಬಿಂಗಿ, ಮತ್ತಿತರರು ಉಪಸ್ಥಿತರಿದ್ದರು. ಗೋವಾದ ವಿವಿಧ ಕನ್ನಡ ಸಂಘಟನೆಗಳ ವತಿಯಿಂದ ಚಕ್ರವರ್ತಿ ಸೂಲಿಬೆಲೆ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next