Advertisement

ಸದಸ್ಯತ್ವ ಅಭಿಯಾನಕ್ಕೆ ಬಿಜೆಪಿ ಭರ್ಜರಿ ತಯಾರಿ

02:31 AM Jul 05, 2019 | Sriram |

ಬೆಂಗಳೂರು: ದೇಶಾದ್ಯಂತ ನಾಳೆ (ಜು.6)ಯಿಂದ ಆ.11ರವರೆಗೆ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯಲಿದ್ದು, ರಾಜ್ಯ ಬಿಜೆಪಿಯು ಅಭಿಯಾನದ ಅವಧಿಯಲ್ಲಿ 50 ಲಕ್ಷ ಸದಸ್ಯತ್ವ ನೋಂದಣಿ ಜತೆಗೆ ಎರಡು ಲಕ್ಷ ಮಂದಿ ಸಕ್ರಿಯ ಸದಸ್ಯರನ್ನು ರೂಪಿಸುವ ಗುರಿ ಹೊಂದಿದೆ. ಸದಸ್ಯತ್ವದ ಜತೆಗೆ ದಾಖಲೀಕರಣಕ್ಕೂ ಹೆಚ್ಚಿನ ಒತ್ತು ನೀಡಲಿದೆ.

Advertisement

ಸದಸ್ಯತ್ವ ಅಭಿಯಾನ ಕುರಿತು ರಾಜ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಸದಸ್ಯತ್ವ ಅಭಿಯಾನ ಪ್ರಮುಖ್‌ ಎನ್‌.ರವಿಕುಮಾರ್‌, ಅಭಿಯಾನದ ಅವಧಿಯಲ್ಲಿ ರಾಜ್ಯದಲ್ಲಿ 50 ಲಕ್ಷ ಸದಸ್ಯತ್ವ ನೋಂದಣಿ ಗುರಿ ಹೊಂದಲಾಗಿದ್ದು, 5 ಲಕ್ಷ ಕಾರ್ಯಕರ್ತರು ತೊಡಗಿಸಿಕೊಳ್ಳಲಿದ್ದಾರೆ. ಪಕ್ಷದ ವಿಚಾರ ಒಪ್ಪುವ ಯಾರಾದರೂ ಸದಸ್ಯರಾಗಬಹುದು. ಸದಸ್ಯರಾಗ ಬಯಸುವವರು ಅಪರಾಧ, ಭಯೋತ್ಪಾದಕ ಚಟುವಟಿಕೆ, ಐಎಂಎ ನಂತಹ ಪ್ರಕರಣಗಳಲ್ಲಿ ಜನರಿಗೆ ವಂಚನೆ ಸೇರಿ ಇತರೆ ಕೃತ್ಯಗಳಲ್ಲಿ ತೊಡಗಿದವರಾಗಿರಬಾರದು ಎಂದು ಹೇಳಿದರು.

ಈ ರೀತಿಯ ಪರಿಶೀಲನೆಗೆಂದೇ ಪರಿಶೀಲನಾ ಸಮಿತಿ ರಚಿಸಲಾಗಿದೆ. ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಪಡೆದರೂ ಬಳಿಕ ಕಾರ್ಯಕರ್ತರು ಅವರ ಮಾಹಿತಿಯನ್ನು ಅರ್ಜಿಯಲ್ಲಿ ನಮೂದಿಸಿಕೊಂಡು ದಾಖಲಿಸಲಿದ್ದಾರೆ. ಸಕ್ರಿಯ ಸದಸ್ಯರಾದ ವರಿಗೆ ಮಾತ್ರ ಪಕ್ಷದಲ್ಲಿ ಜವಾಬ್ದಾರಿ, ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.

ರಾಜ್ಯ ಸದಸ್ಯತ್ವ ಅಭಿಯಾನದ ಸದಸ್ಯರಾದ ಶಾಸಕ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ಶನಿವಾರ ಸಂಜೆ 4 ಗಂಟೆಗೆ ವಿದೇಶಾಂಗ ರಾಜ್ಯ ಸಚಿವ ವಿ.ಮುರಳೀಧರನ್‌, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್‌. ಯಡಿಯೂರಪ್ಪ ಅವರು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಮಂಡಲ, ವಾರ್ಡ್‌, ಬೂತ್‌ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ನಡೆಯಲಿದೆ ಎಂದು ಹೇಳಿದರು.

ಮಿಸ್ಡ್ ಕಾಲ್ ನೀಡಬಹುದು
ಮಿಸ್ಡ್ ಕಾಲ್ ನೀಡಿಯೂ ಬಿಜೆಪಿ ಸದಸ್ಯರಾಗಲು ಅವಕಾಶವಿದೆ. ಮಿಸ್ಡ್ ಕಾಲ್ ನೀಡಿ ಸದಸ್ಯರಾಗಲು ಮೊಬೈಲ್ ಸಂಖ್ಯೆ- 8980808080. ಸದಸ್ಯತ್ವಕ್ಕೆ ಯಾವುದೇ ಶುಲ್ಕವಿಲ್ಲ.

ವಾರಣಾಸಿಯಲ್ಲಿ ಉದ್ಘಾಟನೆ

ಶನಿವಾರ ಬೆಳಗ್ಗೆ 11 ಗಂಟೆಗೆ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಭಿಯಾನ ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್‌ ಶಾ ತೆಲಂಗಾಣದಲ್ಲಿ ಚಾಲನೆ ನೀಡಲಿದ್ದಾರೆ. ರಾಜ್ಯದೆಲ್ಲೆಡೆ ಶನಿವಾರ ಮಧ್ಯಾಹ್ನ 3 ಗಂಟೆ ಬಳಿಕ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ರವಿಕುಮಾರ್‌ ಹೇಳಿದರು..
Advertisement
Advertisement

Udayavani is now on Telegram. Click here to join our channel and stay updated with the latest news.

Next