Advertisement

“ಹೋಲ್‌ಸೇಲ್‌ ಡೀಲೋ, ರೀಟೆಲ್‌ ಡೀಲೋ ಹೇಳಿ’

01:00 AM Jan 17, 2019 | |

ಬೆಂಗಳೂರು: ಪ್ರಸ್ತುತ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ ಕಾಂಗ್ರೆಸ್‌ ನಡವಳಿಕೆ ಬಗ್ಗೆಯೇ ಅನುಮಾನ ಹುಟ್ಟುತ್ತದೆ. ಕಾಂಗ್ರೆಸ್‌ ನಾಯಕರೇ ತೊಟ್ಟಿಲು ತೂಗುತ್ತಾ, ಮಗು ಚಿವುಟುವ ಕೆಲಸ ಮಾಡುತ್ತಿದ್ದು, ವಿನಾಕಾರಣ ಬಿಜೆಪಿಯನ್ನು ದೂರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ.

Advertisement

ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸದ್ಯದ ಬೆಳವಣಿಗೆ ಹಿಂದೆ ರಾಜ್ಯದ ಜನರ ದಿಕ್ಕು ತಪ್ಪಿಸುವ ಉದ್ದೇಶ ಬಿಟ್ಟರೆ ಬೇರಾವ ಸದುದ್ದೇಶವೂ ಇಲ್ಲ. ಕಾಂಗ್ರೆಸ್‌ ನಾಯಕರು ಯಾವುದೇ ಶಾಸಕರು ರಾಜೀನಾಮೆ ನೀಡುವುದಿಲ್ಲ ಎನ್ನುತ್ತಲೇ ಬಿಜೆಪಿಯಿಂದ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ದೂರುತ್ತಿದ್ದಾರೆ. ಕಾಂಗ್ರೆಸ್‌ ನಾಯಕರ ಹೇಳಿಕೆಯಲ್ಲೇ ವಿರೋಧಾಭಾಸವಿದೆ. ಈಗಿನ ಬೆಳವಣಿಗೆಗೆ ಬಿಜೆಪಿ ಕಾರಣವಲ್ಲ ಎಂದು ತಿಳಿಸಿದ್ದಾರೆ. ಈ ಹಿಂದೆ ಜೆಡಿಎಸ್‌ ಶಾಸಕರಾಗಿದ್ದ ಎನ್‌.ಚೆಲುವರಾಯ ಸ್ವಾಮಿ, ಎಚ್‌.ಸಿ.ಬಾಲಕೃಷ್ಣ, ರಮೇಶ್‌ ಬಂಡಿಸಿದ್ದೇಗೌಡ, ಜಮೀರ್‌ ಅಹಮ್ಮದ್‌ ಖಾನ್‌, ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಯಾವ ಆಪರೇಷನ್‌ ಮಾಡಿ ಕಾಂಗ್ರೆಸ್‌ಗೆ ತೆಗೆದುಕೊಳ್ಳಲಾಯಿತು. ಸಿದ್ದರಾಮಯ್ಯ ಅವರು ಬಂಡೆದ್ದು, ಜೆಡಿಎಸ್‌ಗೆ ರಾಜೀನಾಮೆ ನೀಡಿದಾಗ ಅವರಿಗೆ ಎಷ್ಟು ನೀಡಲಾಗಿತ್ತು? ಎಚ್‌.ಡಿ. ದೇವೇಗೌಡರು ಮುಖ್ಯಮಂತ್ರಿ ಯಾಗಿದ್ದಾಗ ಕೆಸಿಪಿ ಸದಸ್ಯರನ್ನು ಸೇರಿಸಿಕೊಂಡಿದ್ದು ಹೋಲ್‌ಸೇಲ್‌ ಡೀಲೋ, ರೀಟೆಲ್‌ ಡೀಲೋ ಹೇಳಬೇಕು. ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಜೆಡಿಎಸ್‌ನವರು ಪಕ್ಷ ಸೇರಿದ್ದು ಯಾವ ಡೀಲ್‌ ಎಂಬುದನ್ನು ಕಾಂಗ್ರೆಸ್‌ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ಏಳು ತಿಂಗಳಿನಿಂದ ಮೈತ್ರಿ ಸರ್ಕಾರದಲ್ಲಿ ಸೃಷ್ಟಿಯಾದ ಸಮಸ್ಯೆಗಳಿಗೆಲ್ಲಾ ಬಿಜೆಪಿಯನ್ನು ದೂರುವ ಏಕೈಕ ಕಾರ್ಯಸೂಚಿ ಕಾಂಗ್ರೆಸ್‌, ಜೆಡಿಎಸ್‌ನದ್ದಾಗಿದ್ದು, ಅದು ಪುನರಾವರ್ತನೆ ಯಾಗುತ್ತಿದೆ. ಉತ್ತಮ ಆಡಳಿತ ನೀಡುವುದಾಗಿ ಭರವಸೆ ನೀಡಿ ಅಪವಿತ್ರ ಮೈತ್ರಿ ಮಾಡಿಕೊಂಡ ಕಾಂಗ್ರೆಸ್‌, ಜೆಡಿಎಸ್‌ ರಾಜ್ಯದ ಜನರಿಗೆ ದ್ರೋಹ ಬಗೆಯುತ್ತಿವೆ ಎಂದು ಹೇಳಿದ್ದಾರೆ.

ಬಿಜೆಪಿಯವರ ಆಪರೇಷನ್‌ ಕಮಲ ಸಂಪೂರ್ಣ ವಿಫ‌ಲವಾಗಿದೆ. ಕಾಂಗ್ರೆಸ್‌ನ ಎಲ್ಲ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ನಿಜ ಬಣ್ಣ ಬಯಲಾಗಿದೆ. ಬಿಜೆಪಿ ಶಾಸಕರು ಯಾವ ಮುಖ ಇಟ್ಟುಕೊಂಡು ಕ್ಷೇತ್ರಗಳಿಗೆ ಬರುತ್ತಾರೆ.
● ಎಚ್‌.ಕೆ. ಪಾಟೀಲ್‌,
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

ಪ್ರವಾಸಕ್ಕೆಂದು ಗೋವಾಕ್ಕೆ ತೆರಳಿದ್ದೆ. ಫೋನ್‌ ಸ್ವಿಚ್‌ ಆಫ್ ಆಗಿತ್ತು. ಸಚಿವ ಜಮೀರ್‌ ಅಹಮದ್‌ ಅವ ರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ನಾನು ಕಾಂಗ್ರೆಸ್‌ನಲ್ಲಿಯೇ ಇದ್ದೇನೆ. ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ. ಯಾವುದೇ ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಬೇರೆಯವರಿಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಬೇಸರವಿಲ್ಲ. ನನಗಿ ರುವ ಬೇಸರವನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇನೆ. ಕಂಪ್ಲಿ ಶಾಸಕ ಗಣೇಶ್‌ ಕೂಡ ಎಲ್ಲಿಯೂ ಹೋಗುವುದಿಲ್ಲ.
● ಭೀಮಾನಾಯ್ಕ, ಹಗರಿಬೊಮ್ಮನಹಳ್ಳಿ ಶಾಸಕ

Advertisement

ನಾಗೇಶ್‌, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ. ಅವರು ಎಲ್ಲಿಯೇ ಹೋಗಿದ್ದರೂ ವಾಪಸ್‌ ಬರಬೇಕು. ಅವರನ್ನು ಮಂತ್ರಿ ಮಾಡಲು ಆಗದಿದ್ದರೂ, ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಅವರು ಪಕ್ಷೇತರ ಅಭ್ಯರ್ಥಿಯಲ್ಲ, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ.
● ಕೆ.ಎಚ್‌. ಮುನಿಯಪ್ಪ, ಸಂಸದ

ನಾನು ಕ್ಷೇತ್ರದಲ್ಲಿಯೇ ಇದ್ದೆ.  ಎಲ್ಲಿಯೂ ಹೋಗಿಲ್ಲ. ನನ್ನ ಫೋನ್‌ ಇಪ್ಪತ್ನಾಲ್ಕು ಗಂಟೆಯೂ ಚಾಲೂ ಇದೆ. ನಮ್ಮನ್ನು ವಾಪಸ್‌ ಕರೆ ತಂದರು ಎನ್ನಲು ನಾವೇನು ಹಾಲು ಕುಡಿಯುವ ಮಕ್ಕಳಾ?. ಯಾವುದೇ ಬಿಜೆಪಿ ನಾಯಕರು ನಮ್ಮನ್ನು ಸಂಪರ್ಕ ಮಾಡಿಲ್ಲ. ಎರಡು ಲಕ್ಷ ಮತದಾರರಿಗೆ ನಾವು ಉತ್ತರ ಕೊಡಬೇಕಾಗುತ್ತದೆ. ನಮ್ಮ ಮರ್ಯಾದೆ ತೆಗೆಯುವ ಕೆಲಸ ಮಾಡಬೇಡಿ.
● ಬಸನಗೌಡ ದದ್ಧಲ್‌, ರಾಯಚೂರು ಗ್ರಾಮೀಣ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next