ಚಿಕ್ಕಮಗಳೂರು: “ಬಿಜೆಪಿ ಸಿದ್ಧಾಂತ ಆಧಾರಿತ ಪಕ್ಷವೇ ಹೊರತು ಜಾತಿ ಆಧಾರಿತ ಪಕ್ಷವಲ್ಲ’ ಎನ್ನುವ ಮೂಲಕ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ವೀರಶೈವ ಸಮುದಾಯಕ್ಕೆ ಬಿಜೆಪಿಯಿಂದ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪನವರು ಹೇಳಿದ್ದಾರೆ. ಆದರೆ ಯಾವುದೇ ಜಾತಿಯನ್ನೂ ಕಡೆಗಣಿಸಿಲ್ಲ. ದೇಶಕ್ಕೆ ನ್ಯಾಯ ಕೊಡುವ ಕೆಲಸ ಬಿಜೆಪಿಯದ್ದಾಗಿದೆ ಎಂದರು.
ಬಿಜೆಪಿ ಜಾತಿ ಆಧಾರಿತ ಪಕ್ಷವಲ್ಲ, ನಾಯಕರಲ್ಲಿ ಜಾತಿ ಇದೆ ಆದರೆ, ಪಾರ್ಟಿಯಲ್ಲಿ ಇಲ್ಲ. ನಾವೆಲ್ಲ ಯಾವುದಾದರೂ ಒಂದು ಜಾತಿಗೆ ಸೇರಿರಬಹುದು. ಆದರೆ ಪಕ್ಷ ಯಾವುದೇ ಜಾತಿಗೆ ಸೇರಿಲ್ಲ. ಒಂದು ಜಾತಿಯವರು ಪಕ್ಷವನ್ನು ಹೆಚ್ಚಾಗಿ ಬೆಂಬಲಿಸಿರಬಹುದು. ಆದರೆ ಬಿಜೆಪಿ ಒಂದು ಜಾತಿಗೆ ಸೀಮಿತವಾಗಿಲ್ಲ ಎಂದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಯಾವ ಜಾತಿಯವರನ್ನು ಹೆಚ್ಚಾಗಿ ಕಣಕ್ಕಿಳಿಸಿತ್ತು ಎಂಬುದನ್ನು ಶಿವಶಂಕರಪ್ಪ ಅವರು ಪರಿಶೀಲಿಸಲಿ. ಆಗ ಅವರಿಗೆ ಸತ್ಯ ತಿಳಿಯುತ್ತದೆ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ ಹಿರಿಯ ರಾಜಕಾರಣಿ. ಆದರೆ ಅವರು ಎಂದೂ ಸಹ ಬಿಜೆಪಿಯನ್ನು ಬೆಂಬಲಿಸಿಲ್ಲ. ನಮ್ಮ ಪಕ್ಷವನ್ನು ಬೆಂಬಲಿಸದವರು ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಸರಿಯಲ್ಲ. ಬೇಕಿದ್ದರೆ ಅವರು ಒಮ್ಮೆ ನಮ್ಮ ಪಕ್ಷವನ್ನು ಬೆಂಬಲಿಸಿ ಆ ನಂತರ ಮಾತನಾಡಲಿ ಎಂದು ಸಲಹೆ ನೀಡಿದರು.