ಮಾಗಡಿ: ಕಳೆದ ಬಾರಿ ಪುಲ್ವಾಮಾ ದಾಳಿಯಾಗದೇ ಇದ್ದಿದ್ದರೆ ನರೇಂದ್ರ ಮೋದಿ ಅವರನ್ನು ಜನರು ಮನೆಗೆ ಕಳುಹಿಸುತ್ತಿದ್ದರು. ಈ ಬಾರಿ ಅವರು ವಿಶ್ವಮಾನವ ಆಗಲು ಎಲ್ಲೆಡೆ ಟಾಟಾ ಮಾಡುತ್ತಿದ್ದಾರೆ. ಈ ಬಾರಿ ಜನರು ಬೈ ಬೈ ಹೇಳುತ್ತಾರೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ವ್ಯಂಗ್ಯವಾಡಿದರು.
ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿ, ದೇಶದಲ್ಲಿ ಅಮಾಯಕ ಸೈನಿಕರನ್ನು ಬಲಿ ಕೊಟ್ಟಂತಹ ಕೀರ್ತಿ ನರೇಂದ್ರ ಮೋದಿ ಸರಕಾರಕ್ಕೆ ಸಲ್ಲುತ್ತದೆ. ದೇಶ ಆಳುವ ವ್ಯಕ್ತಿಗೆ ನಮ್ಮ ಸೈನಿಕರಿಗೆ ತೊಂದರೆ ಇದೆ ಎಂದು ಅವರ ಸರಕಾರಕ್ಕೇ ಹೇಳಲು ಸಾಧ್ಯವಿಲ್ಲ ಎನ್ನುವುದಾದರೆ ಹೇಗೆ? ಬಲಿದಾನವಾಗಿದ್ದು ಸೈನಿಕರು, ಅಧಿಕಾರ ಬಂದಿದ್ದು ಮೋದಿಗೆ. ಈ ಬಗ್ಗೆ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನಿ ವಿರುದ್ಧ ಲೇವಡಿ ಮಾಡಿದರು.
ನಮ್ಮ ದೇಶದ ಸೈನಿಕರಿಗೆ ತೊಂದರೆಯಾಗಿದೆ. ಬಲಿದಾನವಾಗುತ್ತಿದ್ದಾರೆ ಎಂಬುದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಗೊತ್ತಿಲ್ಲ ಎಂದರೆ ಸರಕಾರ ಎಂದು ನಾವು ಒಪ್ಪಿಕೊಳ್ಳಬೇಕಿದೆ. ಈ ಕುರಿತು ಎಚ್.ಡಿ. ಕುಮಾರಸ್ವಾಮಿ ಅವರೂ ಬಿಜೆಪಿ ವಿರುದ್ಧ ಲೇವಡಿ ಮಾಡಿದ್ದರು. ಈಗ ಅವರೇ ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆ ಎಚ್.ಡಿ.ಕೆ ನಡೆಯನ್ನು ಟೀಕಿಸಿದರು.
ಸೋನಿಯಾ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಲು ಮುಂದಾಗಿದ್ದರು. ಅದರೆ ಆಗ ಜೆಡಿಎಸ್ ನಾಯಕರೇ ತಪ್ಪಿಸಿ ಧರ್ಮಸಿಂಗ್ ಅವರನ್ನು ಸಿಎಂ ಮಾಡಬೇಕು ಎಂದು ಪಟ್ಟು ಹಿಡಿದರು. ನಾನು ಆ ವೇಳೆ ಜೆಡಿಎಸ್ ಶಾಸಕನಾಗಿದ್ದೆ. ಈ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ. ಈಗ ಖರ್ಗೆ ಅವರಿಗೆ ಅನ್ಯಾಯವಾಗಿದೆ ಎನ್ನುತ್ತಾರೆ. ಸಿದ್ದರಾಮಯ್ಯ ಅವರಿಗೆ ಅನ್ಯಾಯ ಮಾಡದಿದ್ದರೆ ಜೆಡಿಎಸ್ ಪಕ್ಷ ಚೆನ್ನಾಗಿರುತ್ತಿತ್ತು.
-ಎಚ್.ಸಿ.ಬಾಲಕೃಷ್ಣ, ಶಾಸಕ