ಬೆಂಗಳೂರು: ಸಚಿವರಾದ ಕೆ.ಜೆ.ಜಾರ್ಜ್, ವಿನಯ್ ಕುಲಕರ್ಣಿ ವಿರುದ್ಧ ಆಧಾರ ರಹಿತ ಆರೋಪ ಮಾಡಿ ಪ್ರತಿಭಟಿಸುತ್ತಿರುವ ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್ ಮುಖಂಡರು ನಗರದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆ, ಡಿನೋಟಿಫಿಕೇಷನ್, ಕೆಐಎಡಿಬಿ, ಪ್ರೇರಣಾ ಟ್ರಸ್ಟ್ ಹೀಗೆ ವಿವಿಧ ಹಗರಣದಲ್ಲಿ ಶಾಮೀಲಾಗಿ ಜೈಲು ಸೇರಿದ್ದರು. ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಆಧಾರ ರಹಿತವಾಗಿ ಸಚಿವ ಜಾರ್ಜ್, ವಿನಯ್ ಕುಲಕರ್ಣಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿರುವ ತಾವು ಮೊದಲು ರಾಜೀನಾಮೆ ಕೊಟ್ಟು ನಂತರ ಮತ್ತೂಬ್ಬರ ರಾಜೀನಾಮೆ ಕೇಳಲಿ ಎಂದು ಕವಿಕಾ ಅಧ್ಯಕ್ಷ ಎಸ್. ಮನೋಹರ್ ನೇತೃತ್ವದಲ್ಲಿ ನಡೆಯದ ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಜನಪರವಾಗಿದ್ದು, ಸಾಕಷ್ಟು ಅಭಿವೃದ್ಧಿ ಕಾರ್ಯಗಳು, ವಿವಿಧ ಯೋಜನೆಗಳಿಂದ ಜನತೆಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಜನತೆಗೆ ಮುಂದೆ ಹೋಗಲು ಬಿಜೆಪಿಗೆ ಯಾವುದೇ ಕಾರ್ಯಸೂಚಿ ಇಲ್ಲದ್ದರಿಂದ ಸಚಿವರ ವಿರುದ್ಧ ಆಧಾರ ರಹಿತ ಆರೋಪದಲ್ಲಿ ತೊಡಗಿದ್ದು, ಜನರ ಧಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಪ್ರಕರಣದ ತನಿಖೆ ವರದಿ ಬರುವ ಮುನ್ನವೇ ಬಿಜೆಪಿ ಮುಖಂಡರು ಜಾರ್ಜ್ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಜತೆಗೆ ರಾಜ್ಯದ ಜನರಲ್ಲಿ ಕೋಮುಭಾವನೆ ಕೆರಳಿಸಿ ಲಾಭ ಪಡೆಯಲು ಯತ್ನಿಸುತ್ತಿರುವುದು ಅವರ ವಿಕೃತ ಮನಸ್ಸಿಗೆ ಹಿಡಿದ ಕನ್ನಡಿ ಎಂದು ಪ್ರತಿಭಟನಾಕಾರರು ಟೀಕಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್‌ಗೌಡ ಪ್ರಕರಣ ನ್ಯಾಯಾಂಗದ ತನಿಖೆಯಲ್ಲಿದೆ. ಈ ಪ್ರಕರಣದಲ್ಲಿ ಸಚಿವ ವಿನಯ್ ಕುಲಕರ್ಣಿ ಹೆಸರನ್ನು ಅನಗತ್ಯವಾಗಿ ತರಲಾಗುತ್ತಿದೆ. ಸ್ಥಳೀಯವಾಗಿ ಸಚಿವರು ಅಭಿವೃದ್ಧಿ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸುತ್ತಿರುವುದನ್ನು ಸಹಿಸಲಾಗದೆ ಬಿಜೆಪಿ ಮುಖಂಡರು ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಯೋಜನಾ ಮಂಡಳಿ ಸದಸ್ಯ ಜಿ.ಜನಾರ್ಧನ್, ರಾಮಕೃಷ್ಣ, ಎಂ.ಎ.ಸಲೀಂ, ಆನಂದ್, ಗಿರೀಶ್ ಮತ್ತಿತರರು ಪಾಲ್ಗೊಂಡಿದ್ದರು.