Advertisement

BJP: ಲೋಕ ಚುನಾವಣೆಗೆ ಬಿಜೆಪಿ ಪೂರ್ಣ ತಂಡ

11:01 PM Dec 25, 2023 | Team Udayavani |

ಬೆಂಗಳೂರು: ನಾವಿಕನಿಲ್ಲದ ನೌಕೆ ಎಂಬ ಅಪವಾದಕ್ಕೆ ಗುರಿಯಾಗಿದ್ದ ರಾಜ್ಯ ಬಿಜೆಪಿ ಈಗ ತುಂಬಿದ ಮನೆಯಂತಾಗಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ವಿಪಕ್ಷದಲ್ಲಿ ಖಾಲಿ ಇದ್ದ ಹುದ್ದೆಗಳನ್ನು ಭರ್ತಿ ಮಾಡಿರುವ ಬಿಜೆಪಿ, ಪಕ್ಷ ಸಂಘಟನೆಗಾಗಿ ಹೊಸ ತಂಡ ಕಟ್ಟಿ ಲೋಕಸಭೆ ಚುನಾವಣೆಗೆ ಸನ್ನದ್ಧವಾಗಿದೆ.

Advertisement

ಅದೇ ರೀತಿ ಪದಾಧಿಕಾರಿಗಳೂ ಹೊಸದಾಗಿ ನೇಮಕ ಗೊಂಡಿದ್ದು, ಪಕ್ಷದ ಸಂಘಟನೆ, ತಂತ್ರಗಾರಿಕೆ ಮೂಲಕ ಲೋಕಸಭೆ ಚುನಾವಣೆಯನ್ನೂ ಎದುರಿಸಲು ಸಜ್ಜಾಗುತ್ತಿದೆ. ಹಾಗೆಂದು ಈಗ ಆಗಿರುವ ನೇಮಕಾತಿಗಳ ಬಗ್ಗೆ ಅಪಸ್ವರಗಳಿಲ್ಲ ಎಂದಲ್ಲ. ಚುನಾವಣೆ ಒಳಗಾಗಿ ಎಲ್ಲವನ್ನೂ ಸರಿಪಡಿಸಿಕೊಂಡು ಹೋಗಬೇಕೆಂಬ ಸಂಕಲ್ಪದೊಂದಿಗೆ ಸಜ್ಜಾಗುತ್ತಿರುವ ಪಕ್ಷದ ಕಚೇರಿಯಲ್ಲೂ ರಾಜಕೀಯ ಚಟುವಟಿಕೆಗಳು ನಿಧಾನವಾಗಿ ಗರಿಗೆದರುತ್ತಿವೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ರಚನೆಯಾದ 6 ತಿಂಗಳ ಬಳಿಕ ಪಕ್ಷದ ರಾಜ್ಯಾಧ್ಯಕ್ಷರಾಗಿ ವೀರಶೈವ ಲಿಂಗಾಯತ ಸಮುದಾಯದ ಬಿ.ವೈ.ವಿಜಯೇಂದ್ರರನ್ನು ನೇಮಕ ಮಾಡಿದರು. ಅಲ್ಲಿಯವರೆಗೆ ಇದ್ದ ಜಾತಿ ಲೆಕ್ಕಾಚಾರಕ್ಕಿಂತ ಬಳಿಕದ ಲೆಕ್ಕಾಚಾರಗಳು ಬೇರೆಯಾಗಲು ಆರಂಭವಾದವು. ಪಕ್ಷಾಧ್ಯಕ್ಷ ಪಟ್ಟದ ಮೇಲೆ ನಿಗಾ ಇಟ್ಟಿದ್ದವರ ಮನಸ್ಸು ವಿಧಾನಸಭೆ ವಿಪಕ್ಷ ನಾಯಕ ಸ್ಥಾನದ ಮೇಲೆ ಹೊರಳಿತ್ತು. ಒಕ್ಕಲಿಗ ಸಮುದಾಯದ ಆರ್‌.ಅಶೋಕ್‌ ನೇಮಕ ಆಗುತ್ತಿದ್ದಂತೆ ಉಳಿದ ಹುದ್ದೆಗಳತ್ತ ವಾಲಿದರು.

ಕೆಳಮನೆಯಲ್ಲಿ ಒಕ್ಕಲಿಗರಿಗೆ ವಿಪಕ್ಷ ನಾಯಕ ಸ್ಥಾನ ಒಲಿದಿದ್ದರಿಂದ ಮೇಲ್ಮನೆಯ ವಿಪಕ್ಷ ನಾಯಕ ಸ್ಥಾನವು ಹಿಂದುಳಿದ ವರ್ಗಕ್ಕೆ ಮೀಸಲಾಗುವ ನಿರೀಕ್ಷೆ ಇತ್ತು. ಕೋಟ ಶ್ರೀನಿವಾಸ ಪೂಜಾರಿ ಅವರ ಬದಲು ಎನ್‌.ರವಿಕುಮಾರ್‌ ಅವರಿಗೆ ಈ ಪಟ್ಟ ಕಟ್ಟಬಹುದು ಎಂಬ ಅಂದಾಜಿತ್ತು. ಆದರೆ ಶ್ರೀನಿವಾಸ ಪೂಜಾರಿ ಅವರನ್ನೇ ಮರುಆಯ್ಕೆ ಮಾಡಿದ್ದು, ರವಿಕುಮಾರ್‌ರನ್ನು ಸಚೇತಕರನ್ನಾಗಿ ಮಾಡಿದೆ.

ಬಿ.ಎಸ್‌.ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗಿನಿಂದಲೂ ಮಂಕಾಗಿದ್ದ ಬಿಜೆಪಿ, ಯಡಿಯೂರಪ್ಪ ಅವರ ನೆರಳಲ್ಲೇ ಬಂದ ಬಸವರಾಜ ಬೊಮ್ಮಾಯಿ ಅವರ ನಾಯಕತ್ವವನ್ನು ಹಾಗೂ ಹೀಗೂ ಒಪ್ಪಿಕೊಂಡಿತ್ತು. ಹಾಗೆಂದು ಅವರ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆ ಎದುರಿಸುವ ಧೈರ್ಯ ಮಾಡಲಿಲ್ಲ. ಚುನಾವಣೆ ವೇಳೆಗೆ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ ಅಧಿಕಾರಾವಧಿ ಅಂತ್ಯಗೊಳ್ಳುತ್ತಾ ಬಂದಿತ್ತಲ್ಲದೆ, ಅವರ ಬದಲಾವಣೆಗೂ ಕೂಗು ಕೇಳಿಬಂದಿತ್ತು. ಹೀಗಾಗಿ ಸಾಮೂಹಿಕ ನಾಯಕತ್ವದ ಜಪ ಮಾಡಿದ ಬಿಜೆಪಿ, 66 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ವಿಪಕ್ಷದಲ್ಲಿ ಕೂರುವಂತಾಯಿತು.

Advertisement

ವರಿಷ್ಠರನ್ನು ತಲುಪಲು ಶ್ರಮ
ಸರಕಾರ ರಚಿಸಿ ಖುಷಿಯಲ್ಲಿದ್ದ ಕಾಂಗ್ರೆಸ್‌ ಒಂದೆಡೆಯಾದರೆ, ಕೊರತೆಗಳ ಸಂತೆಯಂತಾಗಿದ್ದ ಬಿಜೆಪಿ ಉತ್ಸಾಹ ಕಳೆದುಕೊಂಡು ಕುಳಿತಿತ್ತು. ನಾಯಕರ ಸಾಲಿನಲ್ಲಿದ್ದವರೆಲ್ಲ ಹಿಂದೆ ಸರಿದಿದ್ದರಿಂದ ಕಾರ್ಯಕರ್ತರೂ ಮಂಕಾಗಿದ್ದರು. ವಿಪಕ್ಷದ ನಾಯಕರಿಲ್ಲದೆ ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ಸರಕಾರವನ್ನು ಎದುರಿಸುವಂತಾಗಿತ್ತು. ಯಾರ ಬವಣೆ ಯಾರ ಬಳಿ ಹೇಳಿಕೊಳ್ಳಬೇಕು ಎಂಬುದೇ ತೋಚದಂತಾಗಿದ್ದಾಗ ಒಬ್ಬರ ವಿರುದ್ಧ ಒಬ್ಬರು ದೂರು ಹೇಳಲು ವರಿಷ್ಠರನ್ನು ತಲುಪುವ ಪ್ರಯತ್ನ ನಡೆಸಿದ್ದರು. ಜಾತಿ, ಪ್ರಾದೇಶಿಕತೆ ಇತ್ಯಾದಿ ಸಾಮರ್ಥ್ಯಗಳನ್ನು ವರಿಷ್ಠರ ಮುಂದಿಟ್ಟು ಪಕ್ಷಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಸ್ಥಾನಗಳ ಮೇಲೆ ಹಕ್ಕುಸ್ವಾಮ್ಯ ಪ್ರತಿಪಾದಿಸಲು ಮುಂದಾದರು.

 

Advertisement

Udayavani is now on Telegram. Click here to join our channel and stay updated with the latest news.

Next