Advertisement

BJP ಹೈಕಮಾಂಡ್ ಗೆ ಯಾರ ಬಾಲ ಎಷ್ಟು ಕತ್ತರಿಸಬೇಕೆಂದು ಗೊತ್ತಿದೆ: ಈಶ್ವರಪ್ಪ

02:33 PM Jun 26, 2023 | Team Udayavani |

ಹುಬ್ಬಳ್ಳಿ: ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು ಪಕ್ಷದ ಸೃಷ್ಟಿಗೆ ಎಲ್ಲರೂ ಒಳಪಡಲೇ ಬೇಕಾಗಿದೆ ಪಕ್ಷದ ಹೈಕಮಾಂಡ್ ಖಂಡಿತವಾಗಿಯೂ ದುರ್ಬಲವಾಗಿಲ್ಲ. ಸಮಯ ಬಂದಾಗ ಯಾರ ಬಾಲವನ್ನು ಎಷ್ಟು ಕತ್ತರಿಸಬೇಕೆಂಬ ಸಾಮರ್ಥ್ಯ ಹೈಕಮಾಂಡ್ ಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಬಿಜೆಪಿಯ ಕೆಲ ನಾಯಕರು ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ನಮ್ಮದೇ ಪಕ್ಷದ ಕೆಲವರ ಹೇಳಿಕೆ ದುರ್ದೈವದ ಸಂಗತಿ ಇಂತಹ ವರ್ತನೆಗೆ ನಮ್ಮ ಪಕ್ಷದಲ್ಲಿ ಅವಕಾಶವಿಲ್ಲ. ಪಕ್ಷದ ವಿಚಾರದಲ್ಲಿ ಏನಾದರೂ ಹೇಳುವುದಿದ್ದರೆ ನಾಲ್ಕು ಗೋಡೆಗಳ ಮಧ್ಯೆ ಹೇಳಬೇಕೆ ವಿನಹ ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡುವುದು ಸರಿಯಲ್ಲ ಈ ಬಗ್ಗೆ ಹೇಳಿಕೆ ನೀಡಿದವರನ್ನು ಕರೆಸಿ ಚರ್ಚಿಸುವಂತೆ ಪಕ್ಷದ ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದ್ದೇನೆ ಎಂದರು.

ಕಾಂಗ್ರೆಸ್ ಸರಕಾರ ಘೋಷಣೆ ಮಾಡಿದ ಐದು ಗ್ಯಾರಂಟಿಗಳಿಗೆ ಎಷ್ಟು ಹಣ ವೆಚ್ಚವಾಗಲಿದೆ ಎಲ್ಲಾ ಗ್ಯಾರಂಟಿಗಳನ್ನು ಯಾವಾಗ ಜಾರಿ ಮಾಡಲಾಗುವುದು ಎಂಬುದರ ಬಗ್ಗೆ ಕೂಡಲೇ ಶ್ವೇತಪತ್ರವನ್ನು ಹೊರಡಿಸಬೇಕು ಎಂದು ಒತ್ತಾಯಿಸಿದರು.

ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ ಜಾರಿ ಮಾಡುವುದಾಗಿ ಜನರನ್ನು ನಂಬಿಸಿದ ಅಧಿಕಾರಕ್ಕೆ ಬಂದ ಕಾಂಗ್ರಸ್ ಒಂದೂವರೆ ತಿಂಗಳು ಕಳೆಯುತ್ತಿದ್ದರು ಗ್ಯಾರಂಟಿಗಳ ಜಾರಿಗೆ ಮುಂದಾಗದೆ ದಿನಕ್ಕೊಂದು ಷರತ್ತು ವಿಧಿಸುವ ಮೂಲಕ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ಬಡ ಕುಟುಂಬಗಳಿಗೆ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಜನರಿಗೆ ಟೋಪಿ ಹಾಕಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನವರು ಇದೀಗ ಅಕ್ಕಿ ವಿಚಾರವಾಗಿ ಕೇಂದ್ರ ಸರಕಾರದ ಮೇಲೆ ಗೂಬೆಕೂರಿಸುವ ಕೆಲಸ ಮಾಡುತ್ತಿದ್ದಾರೆ ಇವರ ಬಂಡವಾಳ ಏನೆಂಬುದು ಜನರಿಗೆ ಅರ್ಥವಾಗತೊಡಗಿದೆ ಎಂದರು.

Advertisement

ಪ್ರತಿ ಮನೆಗೆ 200 ಯೂನಿಟ್ ವರೆಗೆ ವಿದ್ಯುತ್ ಉಚಿತ ನೀಡುವುದಾಗಿ ಹೇಳಿ ಅದಕ್ಕೂ ಷರತ್ತು ವಿಧಿಸುವ, ಮತ್ತೊಂದು ಕಡೆ ದರ ಹೆಚ್ಚಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ ಎಂದರು.

ವಿದ್ಯುತ್ ದರ ಹೆಚ್ಚಳ ಬಿಜೆಪಿ ಸರಕಾರದ ಅವಧಿಯಲ್ಲಿ ಆಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ವಾಸ್ತವವೆಂದರೆ ನಮ್ಮ ಸರಕಾರದಲ್ಲಿ ಪ್ರಸ್ತಾವನೆ ಬಂದರು ನಾವು ಅನುಮೋದನೆ ನೀಡಿರಲಿಲ್ಲ ಕಾಂಗ್ರೆಸ್ ಸರಕಾರ ಸಚಿವ ಸಂಪುಟದಲ್ಲಿ ಇದಕ್ಕೆ ಒಪ್ಪಿಗೆ ನೀಡಿ ಇದೀಗ ಬಿಜೆಪಿ ಸರಕಾರ ಮಾಡಿದೆ ಎಂದು ಸುಳ್ಳು ಹೇಳುತ್ತಿದೆ ಎಂದರು.

ಕಾಂಗ್ರೆಸ್ ಸರಕಾರದ ಮೋಸ ಜನವಿರೋಧಿ ನೀತಿಗಳ ವಿರುದ್ಧ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಮತ್ತು ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಂಘಟಿಸುವ ದೃಷ್ಟಿಯಿಂದ ಬಿಜೆಪಿ ರಾಜ್ಯದಲ್ಲಿ 7 ತಂಡಗಳಾಗಿ ಪ್ರವಾಸ ಆರಂಭಿಸಿದೆ ಅದರ ಭಾಗವಾಗಿಯೇ ಹುಬ್ಬಳ್ಳಿಯಲ್ಲಿ ಸೋಮವಾರ ಸಮಾವೇಶ ನಡೆಸುತ್ತಿದ್ದೇವೆ ಎಂದರು.

ಕೆಪಿಸಿಸಿ ರಾಜ್ಯಾಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲೇಬಾರದು ಎಂದು 15 ಅಂಶಗಳ ಪತ್ರ ಬರೆದಿದ್ದನ್ನು ಕಾಂಗ್ರೆಸ್ ಬಹಿರಂಗಪಡಿಸಲಿ ಇಲ್ಲವೇ ಸ್ಪಷ್ಟೀಕರಣವಾದರೂ ನೀಡಲಿ ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next