Advertisement

ಮೈತ್ರಿ ಹೇಳಿಕೆ ಲಾಭದ ಲೆಕ್ಕಾಚಾರದಲ್ಲಿ ಬಿಜೆಪಿ

11:09 PM Dec 02, 2019 | mahesh |

ಬೆಂಗಳೂರು: ಉಪಚುನಾವಣೆ ಫ‌ಲಿತಾಂಶದ ಬಳಿಕ ಸರ್ಕಾರ ರಚನೆ ಸಾಧ್ಯತೆ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿಯವರು ನೀಡುತ್ತಿರುವ ಹೇಳಿಕೆಗಳು ಜನರಲ್ಲಿ ಒಂದಿಷ್ಟು ಗೊಂದಲ ಮೂಡಿಸಿದರೂ ಅಂತಿಮವಾಗಿ ಬಿಜೆಪಿಗೆ ವರದಾನವಾಗಲಿದೆ ಎಂಬುದು ಕಮಲ ಪಕ್ಷದ ನಾಯಕರ ಲೆಕ್ಕಾಚಾರ. ಈ ನಡುವೆ ಗೋಕಾಕ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್‌
ಜಾರಕಿಹೊಳಿಯವರು ಮಹಿಳೆಯೊಬ್ಬರೊಂದಿಗೆ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವುದು ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ರ ಕೆಲ ಹೇಳಿಕೆಯಿಂದ ತುಸು ಹಿನ್ನಡೆಯಾಗುವ ಆತಂಕ ಬಿಜೆಪಿ ನಾಯಕರನ್ನು ಕಾಡುತ್ತಿದೆ. ಗೊಂದಲ ಇಲ್ಲವೇ ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಪರೋಕ್ಷವಾಗಿ ಸೂಚನೆ ನೀಡಲಾಗಿದೆ. ಈವರೆಗೆ ಗೊಂದಲವಿಲ್ಲದಂತೆ ಸಾಮೂಹಿಕವಾಗಿ ಪ್ರಚಾರ ನಡೆಸಿದ ಮಾದರಿಯಲ್ಲೇ ಮನೆ ಮನೆ ಪ್ರಚಾರ ನಡೆಸಿ ವಿಶ್ವಾಸ ಗಳಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.

Advertisement

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಕೈತಪ್ಪಿದ ಬೆಳವಣಿಗೆ ಬೆನ್ನಲ್ಲೇ ಸಿದ್ದರಾಮಯ್ಯ ಹಾಗೂ ಎಚ್‌.ಡಿ. ಕುಮಾರಸ್ವಾಮಿಯವರು ಫ‌ಲಿತಾಂಶದ ಬಳಿಕ ರಾಜಕೀಯ ಧ್ರುವೀಕರಣವಾಗಲಿದೆ ಎಂದು
ಹೇಳಿಕೆ ನೀಡಲಾರಂಭಿಸಿದ್ದಾರೆ. ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಸರ್ಕಾರ ಪ‌ತನವಾಗಿ ಹೊಸ ಸರ್ಕಾರ
ರಚನೆಯಾಗಲಿದೆ ಎಂದು ಹೇಳುತ್ತಿದ್ದು, ಮತದಾರರಲ್ಲಿ ಸ್ವಲ್ಪಗೊಂದಲ ಸೃಷ್ಟಿಯಾಗುವ ಲಕ್ಷಣ  ಕಾಣುತ್ತಿದೆ. ಕಾಂಗ್ರೆಸ್‌, ಜೆಡಿಎಸ್‌ನಾಯಕರು ತಮ್ಮ ಕಾರ್ಯಕರ್ತರನ್ನು ಹುರಿದುಂಬಿಸಿ ಸಕ್ರಿಯಗೊಳಿಸಲು ಹಾಗೂ ಮತದಾರರಲ್ಲೇ ಗೊಂದಲ ಮೂಡಿಸಿ ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರದಲ್ಲೇ ಉಭಯ ಪಕ್ಷಗಳ ನಾಯಕರು ಮಾತುಗಳನ್ನು ಹರಿಬಿಡುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿಗೆ ವರದಾನ!: ಕಾಂಗ್ರೆಸ್‌, ಜೆಡಿಎಸ್‌  ನಾಯಕರ ಹೇಳಿಕೆಗಳೇ ಬಿಜೆಪಿ ಅಭ್ಯರ್ಥಿಗಳ
ಗೆಲುವಿಗೆ ವರದಾನವಾಗಲಿದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ. ನಾಲ್ಕು ತಿಂಗಳ ಹಿಂದಷ್ಟೇ
ವಿಶ್ವಾಸಮತ ಕಳೆದುಕೊಂಡ ಮೈತ್ರಿ ಸರ್ಕಾರ ಪತನವಾದ ಬಳಿಕ ಕಾಂಗ್ರೆಸ್‌, ಜೆಡಿಎಸ್‌ ನಾಯಕರು
ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದರು. ಅಲ್ಲದೇ ಉಪಚುನಾವಣೆಯನ್ನೂ ಪ್ರತ್ಯೇಕವಾಗಿ
ಎದುರಿಸಲು ನಿರ್ಧರಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಇದೀಗ ಮತದಾನಕ್ಕೆ ಕೆಲವೇ ದಿನ ಬಾಕಿಯಿರುವಾಗ ಮತ್ತೆ ಮೈತ್ರಿ ಮಾತುಗಳನ್ನಾಡುತ್ತಿರುವುದರಿಂದ ಜನರಿಗೆ ಆ ಪಕ್ಷಗಳ ಬದಟಛಿತೆ
ಅರ್ಥವಾಗಲಿದ್ದು, ಅದರ ಲಾಭ ಬಿಜೆಪಿಗೆ ಸಿಗಲಿದೆ ಎಂದು ಬಿಜೆಪಿ ಹಿರಿಯ ನಾಯಕರು ಹೇಳುತ್ತಾರೆ.

ಕಾರ್ಯಕರ್ತರು ವಿಶ್ವಾಸ ಕಳೆದುಕೊಳ್ಳಲಿದ್ದಾರೆ:
ಪಕ್ಷದ ನಾಯಕರ ಈ ರೀತಿಯ ಹೇಳಿಕೆಗಳು ಜನರಲ್ಲಿ ಮಾತ್ರವಲ್ಲದೆ ಪಕ್ಷದ ಕಾರ್ಯಕರ್ತರಲ್ಲೂ ಗೊಂದಲ ಮೂಡಿಸಲಿದೆ. ಈಚೆಗಷ್ಟೇ ಪರಸ್ಪರ ಕಿತ್ತಾಡಿ ದೂರವಾದ ಪಕ್ಷಗಳ ನಾಯಕರು ಮತ್ತೆ
ಒಂದಾಗುವರೇ, ಸರ್ಕಾರ ರಚಿಸುವುದೇ ಎಂಬ ಗೊಂದಲ ಸೃಷ್ಟಿಯಾಗುತ್ತದೆ. ಜತೆಗೆ ಯಾರನ್ನು
ಬೆಂಬಲಿಸಬೇಕು ಎಂಬ ಗೊಂದಲ ಉಂಟಾಗಿ ಆಯಾ ಪಕ್ಷಗಳ ಬಗ್ಗೆಯೇ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಸಹಜವಾಗಿಯೇ ಬಿಜೆಪಿಗೆ ಅನುಕೂಲವಾಗಲಿದೆ ಎಂದು ತಿಳಿಸುತ್ತಾರೆ.

ಆಕ್ಷೇಪಾರ್ಹ ಹೇಳಿಕೆ, ಆಡಿಯೋ ಆತಂಕ: ಈ ನಡುವೆ, ರಮೇಶ್‌ ಜಾರಕಿಹೊಳಿಯವರು ಮಹಿಳೆಯೊಬ್ಬರೊಂದಿಗೆ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವುದು ಒಂದಿಷ್ಟು ಚರ್ಚೆಗೆ ಗ್ರಾಸವಾಗಿದೆ. ಜತೆಗೆ, ಬಿಜೆಪಿ ಶಾಸಕ ಬಸನಗೌಡ
ಪಾಟೀಲ್‌ ಯತ್ನಾಳ್‌ ಅವರ ಕೆಲ ಆಕ್ಷೇಪಾರ್ಹ ಹೇಳಿಕೆಗಳು ವ್ಯತಿರಿಕ್ತ ಪರಿಣಾಮ ಬೀರುವ ಆತಂಕ
ಮೂಡಿದೆ. ಮತದಾನಕ್ಕೆ ಕೆಲವೇ ದಿನ ಬಾಕಿ ಉಳಿದಿದ್ದು, ಅಲ್ಲಿಯವರೆಗೆ ಆಕ್ಷೇಪಾರ್ಹ ಹೇಳಿಕೆ ನೀಡದಂತೆ
ಯತ್ನಾಳ್‌ ಅವರಿಗೆ ಪರೋಕ್ಷ ಸಂದೇಶ ರವಾನಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

ಗುಂಪು ಚರ್ಚೆಗೆ ಒತ್ತು: ಗೊಂದಲವಿಲ್ಲದಂತೆ
ಅಭ್ಯರ್ಥಿ ಆಯ್ಕೆ ಮಾಡಿದ ಬಿಜೆಪಿ ನಾಯಕರು ಬಳಿಕ ಭಿನ್ನಮತ ತಲೆದೋರದಂತೆ ಎಚ್ಚರ ವಹಿಸಿದರು. ಬಳಿಕ ಬಿ.ಎಸ್‌.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಕೇಂದ್ರ ಸಚಿವರು, ರಾಜ್ಯ ಸಚಿವರು, ಶಾಸಕರು, ಹಿರಿಯ ನಾಯಕರು ಯೋಜಿತ ರೀತಿಯಲ್ಲಿ ಸಂಘಟಿತವಾಗಿ ಪ್ರಚಾರ ನಡೆಸುತ್ತಾ ಬಂದಿದ್ದಾರೆ. ಬಾಕಿಯಿರುವ ಎರಡು ದಿನದಲ್ಲಿ ಸಣ್ಣ ಸಣ್ಣ ಗುಂಪುಗಳಾಗಿ ಸಭೆ ನಡೆಸಿ
ಮತದಾರರ ಮನವೊಲಿಸಿ ಸಂಘಟಿಸುವ ಕಾರ್ಯಕ್ಕೆ ಆದ್ಯತೆ ನೀಡಿದ್ದಾರೆ. ಜತೆಗೆ ಕಾಂಗ್ರೆಸ್‌, ಜೆಡಿಎಸ್‌
ನಾಯಕರ ಹೇಳಿಕೆಗಳನ್ನೇ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಅನುಕೂಲಕರವಾಗಿ ಬಳಸಿಕೊಳ್ಳುವ ಕಾರ್ಯಕ್ಕೂ ಒತ್ತು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಯುದಟಛಿಕ್ಕೂ ಮುನ್ನವೇ ಸ್ತಾಸ್ತ್ರ ಕೆಳಗಿಟ್ಟಿದ್ದಾರೆ. ಉಪಚುನಾವಣೆ ಫ‌ಲಿತಾಂಶದ ನಂತರ ಸರ್ಕಾರ ರಚಿಸುವ ಬಗ್ಗೆ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ನೀಡುತ್ತಿರುವ ಹೇಳಿಕೆಗಳಿಂದ ಬಿಜೆಪಿಗೆ ಅನುಕೂಲವಾಗಲಿದೆ. ದೇವೇಗೌಡ ಹಾಗೂ ಕುಮಾರಸ್ವಾಮಿಯವರು ಭಿನ್ನ ಹೇಳಿಕೆ ನೀಡಿದ್ದಾರೆ. ಉಭಯ ಪಕ್ಷಗಳ ನಾಯಕರ ಹೇಳಿಕೆಗಳಿಂದ ಆ ಪಕ್ಷಗಳ ಕಾರ್ಯಕರ್ತರಿಗೆ ಗೊಂದಲ ಉಂಟಾಗಿ ವಿಶ್ವಾಸ ಕಳೆದುಕೊಳ್ಳಲಿದ್ದಾರೆ.
● ನಳಿನ್‌ ಕುಮಾರ್‌ ಕಟೀಲ್‌, ರಾಜ್ಯ ಬಿಜೆಪಿ ಅಧ್ಯಕ್ಷ

● ಎಂ. ಕೀರ್ತಿಪ್ರಸಾದ್‌ ಸಂದೇಶ

Advertisement

Udayavani is now on Telegram. Click here to join our channel and stay updated with the latest news.

Next