Advertisement

ಹಿಂದೂ ಧರ್ಮ ರಕ್ಷಣೆ ಬಿಜೆಪಿ ಸಿದ್ಧಾಂತ

02:38 PM Apr 28, 2022 | Team Udayavani |

ನರಗುಂದ: ಹೋರಾಟ ಪ್ರತಿಯೊಬ್ಬ ಪ್ರಜೆಯ ಹಕ್ಕು. ಯಾವುದೇ ಶ್ರೀಗಳ ತೇಜೋವಧೆ ಮಾಡುವ ಉದ್ದೇಶ ನಮ್ಮ ಸರ್ಕಾರಕ್ಕಿಲ್ಲ. ಹಿಂದು ಧರ್ಮದ ರಕ್ಷಣೆ ನಮ್ಮ ಪಕ್ಷದ ಸಿದ್ಧಾಂತವಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

Advertisement

ಬುಧವಾರ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿಗಳು ಗದಗ ನಗರಕ್ಕೆ 1300 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ ಸಂದರ್ಭದಲ್ಲಿ ತೋಂಟದ ಲಿಂಗೈಕ್ಯ ಸಿದ್ಧಲಿಂಗ ಸ್ವಾಮಿಗಳ ಸಮಾದಿ ಉದ್ಘಾಟಿಸುವ ಸಂದರ್ಭದಲ್ಲಿ ಭಕ್ತರ ಕೋರಿಕೆ ಮೇರೆಗೆ ಅವರ ಜನ್ಮದಿನವನ್ನು ಭಾವೈಕ್ಯ ದಿನವಾಗಿ ಘೋಷಣೆ ಮಾಡುವ ಭರವಸೆ ನೀಡಿದ್ದರು. ಈ ಬಗ್ಗೆ ದಿಂಗಾಲೇಶ್ವರ ಶ್ರೀಗಳ ಹೇಳಿಕೆ ಬಗ್ಗೆ ನಾನು ಮಾತನಾಡಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು.

ಸರ್ಕಾರದಿಂದ ಮಠಮಾನ್ಯಗಳಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಕಮೀಶನ್‌ ಬಗ್ಗೆ ಮಾತನಾಡಿದ್ದಾರೆ. ಶ್ರೀಗಳಿಗೆ ಎಲ್ಲೋ ಒಂದು ಕಡೆ ಮಾಹಿತಿ ಕೊರತೆಯಿದೆ. ನಿರ್ಮಿತಿ ಕೇಂದ್ರ ಮತ್ತು ಲ್ಯಾಂಡ್‌ ಆರ್ಮಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಶೇ. 26ರಷ್ಟು ಅಧಿಕೃತವಾಗಿ ಕಟ್‌ ಆಗುತ್ತದೆ ಎಂದು ಸಚಿವ ಸಿ.ಸಿ. ಪಾಟೀಲ ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಮಠಗಳಿಗೂ ಭೇಟಿ ನೀಡುತ್ತಾರೆ. ಹಿಂದು ಧರ್ಮ, ಸನಾತನ ಧರ್ಮ ಕಾಪಾಡಿಕೊಂಡು ಬರುವುದು ನಮ್ಮ ಪಕ್ಷದ ಪರಂಪರೆಯಾಗಿದೆ. ನಾಡಿನ ಇತಿಹಾಸದಲ್ಲಿ ಮಠಮಾನ್ಯಗಳೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡು ಬಂದವರು ಇದ್ದರೆ ಅದು ನಮ್ಮ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಎಂದು ಹೇಳಿದರು.

ನಾವು ಯಾವುದೇ ಪೊಲೀಸರ ಬಲ ಪ್ರಯೋಗದಿಂದ ರಾಜಕಾರಣ ಮಾಡುವ ಪಕ್ಷ ನಮ್ಮದಲ್ಲ. ಮಠ ಇರುವುದು ಭಕ್ತರ ಅಭಿವೃದ್ಧಿಗೆ ಹೊರತು ಸರ್ಕಾರದ ಮೇಲೆ ಆರೋಪ ಮಾಡುವುದಕ್ಕಲ್ಲ. ಧರ್ಮದ ಬಗ್ಗೆ ಸಂಸ್ಕಾರ ಇರುವ ವ್ಯಕ್ತಿ ನಾನು. ಇದನ್ನು ಯಾರೂ ಹೆಚ್ಚು ಬೆಳೆಸುವುದು ಬೇಡ. ರಾಜಕೀಯ ಮತ್ತು ಧರ್ಮ ಎರಡೂ ಕೂಡಿಕೊಂಡು ಹೋಗಬೇಕು ಎಂದು ಸಚಿವರು ಹೇಳಿದರು. ಅನಿಲ ಮೆಣಸಿನಕಾಯಿ ಮುಂತಾದವರು ಪಾಲ್ಗೊಂಡಿದ್ದರು.

Advertisement

ಸಂಭವನೀಯ 4ನೇ ಅಲೆ ಎದುರಿಸಲು ಸಿದ್ಧತೆ:

ನರಗುಂದ: ಕೋವಿಡ್‌ ಸಂಭವನೀಯ ನಾಲ್ಕನೇ ಅಲೆ ಸಮರ್ಥವಾಗಿ ಎದುರಿಸಲು ಜಿಲ್ಲೆಯಲ್ಲಿ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ. ಈ ಬಗ್ಗೆ ಜನರಿಗೆ ಯಾವುದೇ ಆತಂಕ ಬೇಡ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಬುಧವಾರ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಜಿಲ್ಲೆಯಲ್ಲಿ ಸಾಕಷ್ಟು ಆಮ್ಲಜನಕ, ಔಷಧಿ, ಹಾಸಿಗೆ, ಮಕ್ಕಳಿಗಾಗಿ 200 ಹಾಸಿಗೆ ಲಭ್ಯವಿದೆ. ಈಗಾಗಲೇ ಜಿಲ್ಲೆಯಲ್ಲಿರುವ ಹಾಸಿಗೆ, ಆಮ್ಲಜನಕ, ಔಷಧಿ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ ಎಂದರು. ಸರ್ಕಾರ ಜಾರಿಗೊಳಿಸಿದ ನಿಯಮಾವಳಿ ದಯವಿಟ್ಟು ಎಲ್ಲರೂ ಪಾಲಿಸಿ. ಜೀವ ಅಮೂಲ್ಯವಾಗಿದೆ. ಒಮ್ಮೆ ನಿಯಂತ್ರಣ ಕಳೆದುಕೊಂಡರೆ ಬಹಳ ಕಷ್ಟವಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಸುರಕ್ಷತೆ ಹೊಂದಬೇಕು ಎಂದು ಸಚಿವರು ಸಾರ್ವಜನಿಕರಿಗೆ ಕರೆ ನೀಡಿದರು.

ನರಗುಂದದಲ್ಲಿ ಪೊಲೀಸ್‌ ನಾಕಾಬಂದಿ: ಸಚಿವ ಸಿ.ಸಿ. ಪಾಟೀಲ ನಿವಾಸದ ಎದುರು ದಿಂಗಾಲೇಶ್ವರ ಶ್ರೀಗಳು ಧರಣಿ ಕೈಗೊಂಡಿರುವುದನ್ನು ತಡೆಯಲು ನರಗುಂದ ಪ್ರವೇಶಿಸುವ ಮೂರು ಕಡೆ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ನಾಕಾಬಂಧಿ ಹಾಕಲಾಗಿತ್ತು. ನರಗುಂದ ಹೊರವಲಯದ ಕಲಕೇರಿ, ಕುರ್ಲಗೆರಿ ಹಾಗೂ ಅಳಗವಾಡಿ ರಸ್ತೆಯಲ್ಲಿ ಪೊಲೀಸ್‌ ನಿಯೋಜನೆ. ಆಯಾ ಮಾರ್ಗದಿಂದ ಪಟ್ಟಣಕ್ಕೆ ಆಗಮಿಸುತ್ತಿದ್ದ ಖಾಸಗಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ನಾಕಾಬಂಧಿ ಹಾಗೂ ಸಚಿವರ ನಿವಾಸ ಸೇರಿದಂತೆ ಪಟ್ಟಣದ ಹಲವೆಡೆ ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಜಿಲ್ಲೆಯ ಪೊಲೀಸರನ್ನು ಬಂಧೋಬಸ್ತ್ಗೆ ನಿಯೋಜಿಸಲಾಗಿತ್ತು. ಶ್ರೀಗಳ ಧರಣಿ ಹಿನ್ನೆಲೆಯಲ್ಲಿ ಸಚಿವರ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next