ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಡಿ.22, 24, 26ರಂದು ಬಿಜೆಪಿ ನಡೆಸಲು ಉದ್ದೇಶಿಸಿರುವ “ಪ್ರಜಾತಂತ್ರ ಉಳಿಸಿ’ ರಥಯಾತ್ರೆಗೆ ತಡೆಯೊಡ್ಡುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಗೆ ತೀವ್ರ ಹಿನ್ನಡೆಯಾಗಿದೆ.
ಪಕ್ಷ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಕೋಲ್ಕತಾ ಹೈಕೋರ್ಟ್‌ನ ನ್ಯಾ.ತಪವ್ರತ ಚಕ್ರವರ್ತಿ ನೇತೃತ್ವದ ನ್ಯಾಯ ಪೀಠ ಯಾತ್ರೆಗೆ ಗುರುವಾರ ಅನುಮತಿ ನೀಡಿದೆ.
ಯಾತ್ರೆ ಸಂಚರಿಸುವ ಜಿಲ್ಲೆಗಳ ಎಸ್‌ಪಿಗಳಿಗೆ ಮುಂಚಿತವಾಗಿ ಬಿಜೆಪಿ ಮಾಹಿತಿ ನೀಡಬೇಕು. ಈ ಸಂದರ್ಭದಲ್ಲಿ ಸಾರ್ವ ಜನಿಕ ಆಸ್ತಿಗೆ ತೊಂದರೆಯಾದರೆ ಅದಕ್ಕೆ ಪಕ್ಷವೇ ಹೊಣೆ ಎಂದು ತಾಕೀತು ಮಾಡಿದೆ. ಇದರ ಜತೆಗೆ ಪೊಲೀಸ್ ಇಲಾಖೆ ಕೂಡ ಯಾತ್ರೆ ನಡೆಯುವ ಜಿಲ್ಲೆಗಳಲ್ಲಿ ಸೂಕ್ತ ಬಂದೋಬಸ್ತ್ ಮಾಡಬೇಕು. ಅದಕ್ಕಾಗಿ 12 ಗಂಟೆಗಳ ಮೊದಲು ಎಲ್ಲಾ ಜಿಲ್ಲೆಗಳಲ್ಲಿ ಸಿದ್ಧತೆ ಪೂರ್ತಿ ಯಾಗಿರಬೇಕು ಎಂದು ಸೂಚನೆ ನೀಡಿದೆ.
ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಹೈಕೋರ್ಟ್ ಸೂಚನೆಯನ್ನು ಪಾಲಿಸುವುದಾಗಿ ತಿಳಿಸಿದ್ದಾರೆ. ಪಕ್ಷದ ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಹೈಕೋರ್ಟ್‌ಗೆ ಧನ್ಯವಾದ ಸಮರ್ಪಿಸುತ್ತೇವೆ. ಈಗಾಗಲೇ ನಿಗದಿ ಯಾದಂತೆ ರಥಯಾತ್ರೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಯಾತ್ರೆಯ ಪರಿಷ್ಕೃತ ದಿನಾಂಕಗಳನ್ನು ಆಯಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದೇವೆ ಎಂದೂ ಹೇಳಿದ್ದಾರೆ. ಕಾನೂನು ಸುವ್ಯವಸ್ಥೆಯ ಕಾರಣವೊಡ್ಡಿ ಮಮತಾ ಬ್ಯಾನರ್ಜಿ ಸರಕಾರ ಬಿಜೆಪಿ ರಥ ಯಾತ್ರೆಗೆ ಅನುಮತಿ ನಿರಾಕರಿಸಿತ್ತು.