ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆ, ವಿವಿಧ ಮಠಾಧೀಶರ ಭೇಟಿ, ಶಾಸಕಾಂಗ ಸಭೆ ರದ್ದು, ಜುಲೈ 26ರ ಗಡುವು.. ಎಲ್ಲದರ ಮಧ್ಯೆ ಸಚಿವ ಶ್ರೀರಾಮುಲುಗೆ ದೆಹಲಿ ವರಿಷ್ಠರು ಬುಲಾವ್ ನೀಡಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಇಂದು ಬೆಳಗ್ಗೆ ದೆಹಲಿಗೆ ಭೇಟಿ ನೀಡಿದ್ದಾರೆ. ಸಚಿವರಿಗೆ ದೆಹಲಿ ಬಿಜೆಪಿ ವರಿಷ್ಠರೇ ಬುಲಾವ್ ನೀಡಿದ್ದಾರೆ ಎನ್ನಲಾಗಿದೆ. ನಾಯಕತ್ವ ಬದಲಾವಣೆ ಚರ್ಚೆ ತಾರಕ್ಕೇರಿರುವ ಸಂದರ್ಭದಲ್ಲಿ ಹೈಕಮಾಂಡ್ ಬುಲಾವ್ ಬಿಜೆಪಿಯ ಎರಡೂ ಬಣಗಳಲ್ಲಿ ಕುತೂಹಲಕ್ಕೆ ಕಾರಣವಾಗಿರುವುದು ಸುಳ್ಳಲ್ಲ.
ಮುಖ್ಯಮಂತ್ರಿ ಬದಲಾವಣೆ ವದಂತಿಗಳ ನಡುವೆಯೇ ಯಡಿಯೂರಪ್ಪ ಸಂಪುಟದ ಸಚಿವರು, ಶಾಸಕರ ದೆಹಲಿ ದಂಡಯಾತ್ರೆ ಆರಂಭವಾಗಿದೆ. ಗುಜರಾತ್ ಪ್ರವಾಸದಲ್ಲಿದ್ದ ಸಚಿವ ಜಗದೀಶ್ ಶೆಟ್ಟರ್ ಅಲ್ಲಿಂದಲೇ ದೆಹಲಿಗೆ ತೆರಳಿದ್ದಾರೆ. ಸರ್ಕಾರದ ಕೆಲಸದ ಮೇರೆಗೆ ರಾಜನಾಥ್ ಸಿಂಗ್ ಅವರನ್ನೂ ಭೇಟಿಯಾಗಿದ್ದಾರೆ. ಆದರೆ ಅದರ ಹೊರತಾಗಿಯೂ ಬೇರೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.
ಇದನ್ನೂ ಓದಿ:ಇಂದೂ ಮುಂದುವರೆದ ಸ್ವಾಮೀಜಿಗಳ ಸಿಎಂ ಭೇಟಿ: ಕಾವೇರಿ ನಿವಾಸದಲ್ಲಿ ಕಾವೇರಿದ ಚರ್ಚೆ
ಮಾಜಿ ಸಚಿವ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕೂಡಾ ಇಂದು ದೆಹಲಿಗೆ ತೆರಳಿದ್ದಾರೆ. ತನ್ನ ಕ್ಷೇತ್ರದ ಕೆಲಸಗಳ ಬಗ್ಗೆ ಚರ್ಚೆ ಮಾಡಲು ಬಂದಿರುವುದಾಗಿ ಹೇಳಿರುವ ಅವರು ಹೈಕಮಾಂಡ್ ಭೇಟಿಗೆ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದರ ಮಧ್ಯೆ ವಾರಣಾಸಿಗೆ ಹೋಗಿರುವ ಶಾಸಕ ಅರವಿಂದ ಬೆಲ್ಲದ್ ಅಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ವರದಿಯಾಗಿದೆ. ಇತ್ತ ಸಿಎಂ ರೇಸ್ ನಲ್ಲಿರುವ ಸಚಿವ ಮುರುಗೇಶ್ ನಿರಾಣಿ ಕೂಡಾ ಹೈಕಮಾಂಡ್ ಸಮಾಯಾವಕಾಶಕ್ಕಾಗಿ ಕಾಯುತ್ತಿದ್ದಾರೆ.