Advertisement

ಕಾಂಗ್ರೆಸ್‌-ಜೆಡಿಎಸ್‌ ಎಣ್ಣೆ -ಸೀಗೆಕಾಯಿ ಇದ್ದಂತೆ 

04:56 PM Jun 04, 2018 | Team Udayavani |

ಧಾರವಾಡ: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಎಣ್ಣೆ-ಸೀಗೆಕಾಯಿ ಇದ್ದಂತೆ. ಎಷ್ಟೇ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರಕಾರ ಮಾಡಿದರೂ ಇವೆರಡೂ ಎಂದಿಗೂ ಒಂದಾಗಲಾರವು ಎಂದು ಶಾಸಕ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.

Advertisement

ನಗರದ ಮಗದುಮ್ಮ ಕಲ್ಯಾಣ ಮಂಟಪದಲ್ಲಿ ರವಿವಾರ ಹಮ್ಮಿಕೊಂಡಿದ್ದ ಧಾರವಾಡ ಗ್ರಾಮೀಣ-71 ರ ಮತಕ್ಷೇತ್ರದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸದ್ಯ ಈ ಸಮ್ಮಿಶ್ರ ಸರಕಾರದ ಫಲವಾಗಿ ಸಿಎಂ ಸೇರಿದಂತೆ ಎಲ್ಲ ಪ್ರಮುಖ ಖಾತೆಗಳು ದಕ್ಷಿಣ ಕರ್ನಾಟಕದ ಪಾಲಾಗಿದೆ. ಹೀಗಾಗಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದರೆ ಈ ಭಾಗದ ಧ್ವನಿಯಾಗಿ ಬಿಜೆಪಿ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ಮಾಜಿ ಸಿಎಂ ಜಗದೀಶ ಶೆಟ್ಟರ ಮಾತನಾಡಿ, ಮತದಾರರು ಹಾಗೂ ಕಾರ್ಯಕರ್ತರು ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಧಾರವಾಡ ಜಿಲ್ಲೆಯೇ ಸಾಕ್ಷಿಯಾಗಿದೆ. ಜಿಲ್ಲೆಗೆ ಇಬ್ಬರು ಮಂತ್ರಿ ಇದ್ದರೂ ಆ ಇಬ್ಬರೂ ಮಂತ್ರಿಗಳನ್ನು ಜನ ಮನೆಗೆ ಕಳುಹಿಸಿದ್ದಾರೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರ ಬಹಳ ದಿನ ಉಳಿಯಲ್ಲ. ಮತ್ತೂಮ್ಮೆ ಬಿಜೆಪಿ ರಾಜ್ಯದಲ್ಲಿ ಅಧಿ ಕಾರಕ್ಕೆ ಬರಲಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಪ್ರಹ್ಲಾದ ಜೋಶಿ, 2019ರಲ್ಲಿ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಇದನ್ನು ತಡೆಯಲು ಕಾಂಗ್ರೆಸ್‌-ಜೆಡಿಎಸ್‌ನಿಂದ ಅಸಾಧ್ಯ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಕಾರಣೀಕರ್ತರಾದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಜನಪ್ರತಿನಿಧಿಗಳು ವಿಧೇಯಕರಾಗಿರಬೇಕು. ಅಂದಾಗ ಮಾತ್ರ ಜನರು ನಮ್ಮನ್ನು ಸ್ವೀಕರಿಸುತ್ತಾರೆ. ಜನಪ್ರತಿನಿಧಿಗಳು ಗೆಲುವು ಸಾಧಿಸಿದ್ದೇವೆ ಎಂಬುದಾಗಿ ಬೀಗುವುದು ಬೇಕಿಲ್ಲ. ಸೌಮ್ಯ ಸ್ವಭಾವ ಹೊಂದಿ ತಮ್ಮ ಕಾರ್ಯಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ಅಮೃತ ದೇಸಾಯಿ ಮಾತನಾಡಿ, ನಾನು ಜನರ ಸೇವಕನೇ ಹೊರತು ಶಾಸಕನಲ್ಲ. ಜನರ ವಿಶ್ವಾಸಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಿಂದ ಪ್ರಹ್ಲಾದ ಜೋಶಿ ಗೆಲ್ಲಿಸುವುದೇ ನಮ್ಮ ಗುರಿ ಎಂದರು. ಮಾಜಿ ಶಾಸಕ ಎ.ಬಿ. ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಅರವಿಂದ ಬೆಲ್ಲದ, ಸಿ.ಎಂ. ನಿಂಬಣ್ಣವರ, ಮಾಜಿ ಶಾಸಕಿ ಸೀಮಾ ಮಸೂತಿ, ಮುಖಂಡರಾದ ತವನಪ್ಪ ಅಷ್ಟಗಿ
ಇದ್ದರು. ನಾಗರಾಜ ಗಾಣಿಗೇರ ಸ್ವಾಗತಿಸಿದರು. ಶಶಿಮೌಳಿ ಕುಲಕರ್ಣಿ ನಿರೂಪಿಸಿದರು. ಈರಣ್ಣ ಹಪ್ಪಳಿ ವಂದಿಸಿದರು.

Advertisement

ಕಡೆಗಣನೆಗೆ ಕಣೀರು ಹಾಕಿದ ಸೀಮಾ
ಧಾರವಾಡ ಗ್ರಾಮೀಣ-71 ಮತಕ್ಷೇತ್ರದಿಂದ ಟಿಕೆಟ್‌ ಸಿಗದೇ ಬಂಡಾಯ ಮಾಡಿದ್ದ ಮಾಜಿ ಶಾಸಕಿ ಸೀಮಾ ಮಸೂತಿ ಅವರು ಆ ಬಳಿಕ ಪಕ್ಷದ ವರಿಷ್ಠರ ಮಾತಿಗೆ ಮನ್ನಣೆ ಕೊಟ್ಟು ತಮ್ಮ ಬಂಡಾಯ ಶಮನಗೊಳಿಸಿದ್ದರು. ಆ ಬಳಿಕ ದೇಸಾಯಿ ಪರ ಪ್ರಚಾರ ಕೈಗೊಂಡಿದ್ದ ಮಸೂತಿ ಅವರಿಗೆ ಈ ಸಮಾರಂಭದಲ್ಲಿ ಸೂಕ್ತ ಸ್ಪಂದನೆ ಸಿಗದಿದ್ದರಿಂದ ಮನನೊಂದು ವೇದಿಕೆ ಮೇಲೆ ಕಣ್ಣೀರು ಹಾಕುತ್ತಾ ಕುಳಿತಿದ್ದ ದೃಶ್ಯ ಕಂಡು ಬಂತು.

ಕಾಂಗ್ರೆಸ್ ನಲ್ಲಿ ಗಂಡಸರಿಲ್ಲ
ಮನೆಗೆ ಬಂದಿದ್ದ ಹಾವನ್ನು ಹೊಡೆಯುವಂತೆ ಹೆಂಡತಿ ಹೇಳಿದಾಗ, ಆಕೆಯ ಗಂಡ ಪಕ್ಕದ ಮನೆಗೆ ಗಂಡಸರನ್ನು ಕರೆಯುವಂತೆ ಹೇಳಿದನಂತೆ ಎಂಬ ಕಥೆ ಪ್ರಸ್ತಾಪಿಸಿದ ಸಂಸದ ಜೋಶಿ, ಕಾಂಗ್ರೆಸ್‌ನಲ್ಲಿ ಬಿಜೆಪಿ ಸೋಲಿಸುವ ಗಂಡಸರಿಲ್ಲ. ಹೀಗಾಗಿ ಬಿಜೆಪಿ ಅವರನ್ನು ಮಣಿಸಲು ಆಗದ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಜೆಡಿಎಸ್‌ ಪಕ್ಷದವರ ಕಾಲಿಗೆ ಬಿದ್ದಿದ್ದಾರೆ. ಆದರೆ ಜೆಡಿಎಸ್‌ನವರಲ್ಲೂ ಬಿಜೆಪಿ ಸೋಲಿಸುವ ತಾಕತ್ತಿಲ್ಲ ಎಂದು ಲೇವಡಿ ಮಾಡಿದರು.

ಧಾರವಾಡ ಗ್ರಾಮೀಣ
ಶಾಸಕನಾಗಿ ಆಯ್ಕೆಯಾಗಿದ್ದೇನೆ. ಈ ಮೂಲಕ 29 ವರ್ಷಗಳಿಂದ ನಮ್ಮ ದೇಸಾಯಿ ಮನೆತನದ ರಾಜಕೀಯ ವನವಾಸ ಅಂತ್ಯವಾಗಿದ್ದು, ನಾವು ಅನುಭವಿಸಿದ ರಾಜಕೀಯ ವನವಾಸ ತೊರೆಯಲು ಅವಕಾಶ ನೀಡಿದ ಬಿಜೆಪಿ ಹಾಗೂ ಜನರ ಆಶೀರ್ವಾದಕ್ಕೆ ಕೃತಜ್ಞತೆಗಳು.
 ಅಮೃತ ದೇಸಾಯಿ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next