Advertisement

ಬಿಜೆಪಿ ಕೆಟ್ಟ ಆಡಳಿತ ಕಿತ್ತೂಗೆಯಬೇಕಿದೆ: ಮೊಯ್ಲಿ

06:01 PM Sep 19, 2022 | Team Udayavani |

ರಾಯಚೂರು: ಬಿಜೆಪಿ ಕೆಟ್ಟ ಆಡಳಿತ ನೀಡುತ್ತಿದ್ದು, ಈ ಬಗ್ಗೆ ಜನಜಾಗೃತಿ ಮಾಡಿ ಅಧಿಕಾರದಿಂದ ಕೆಳಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕರೆ ನೀಡಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಕೆಪಿಸಿಸಿ ಕಾರ್ಮಿಕ ಘಟಕದಿಂದ ಏರ್ಪಡಿಸಿದ್ದ ವಿಭಾಗೀಯ ಮಟ್ಟದ ಕಾರ್ಮಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಕೋಮು ದ್ವೇಷ ಬಿತ್ತುವ ಮೂಲಕ ಜನರ ನಡುವೆ ದ್ವೇಷ ಹೆಚ್ಚಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ. ಸಂಕಷ್ಟದಲ್ಲಿರುವ
ಜನರಿಗೆ ಇಂಧನ ದರ, ಅಡುಗೆ ಅನಿಲ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ದೂರಿದರು.

Advertisement

ಕಾಂಗ್ರೆಸ್‌ ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ಜಾರಿಗೊಳಿಸಿದರೆ, ಬಿಜೆಪಿ ಸರ್ಕಾರ ಅದನ್ನು ಸರಿಯಾಗಿ ಜಾರಿ ಮಾಡದೆ ವಂಚನೆ ಮಾಡುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತ, ಕಾರ್ಮಿಕ ಜನವಿರೋಧಿ ನೀತಿ ಅನುಸರಿಸುತ್ತಿದೆ. ಕೇಂದ್ರ ಸರ್ಕಾರದ ದುರಾಡಳಿತವನ್ನು ಜನರಿಗೆ ತಿಳಿಸಿ ಜಾಗೃತಿ ಮೂಡಿಸಲು ಕಾಂಗ್ರೆಸ್‌ ಯುವ ನಾಯಕ ರಾಹುಲ್‌ ಗಾಂಧಿ  ನೇತೃತ್ವದಲ್ಲಿ ಭಾರತ್‌ ಜೋಡೋ ಪಾದಯಾತ್ರೆ ಆರಂಭಿಸಿದ್ದು, ಜಿಲ್ಲೆಯಿಂದಲೂ ಸಂಚರಿಸುವರು.ಪಕ್ಷದ ಕಾರ್ಯಕರ್ತರು ಕಾರ್ಮಿಕರನ್ನು, ರೈತರನ್ನು ಒಗ್ಗೂಡಿಸಿ ಜಾಗೃತಿ ಮೂಡಿಸಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.

ಎಐಸಿಸಿ ಕಾರ್ಯದರ್ಶಿ ಎನ್‌. ಎಸ್‌ ಬೋಸರಾಜು, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ವಿ ನಾಯಕ, ಶಾಸಕ ಬಸನಗೌಡ ದದ್ದಲ್‌ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ, ಮುಖಂಡ ಚೆನ್ನಾರೆಡ್ಡಿ, ಕೆ. ಶಾಂತಪ್ಪ, ನರಸಿಂಹಲು ಮಾಡಗಿರಿ, ಮರಿಗೌಡ, ನಗರಸಭೆ ಸದಸ್ಯ ಜಯಣ್ಣ, ಸಾಜೀದ್‌ ಸಮೀರ್‌ ಹಾಗೂ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next