ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ (ಡಿ.29) ಭಾರತೀಯ ಜನತಾ ಪಕ್ಷ (BJP) ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ʼಆಪರೇಷನ್ ಕಮಲʼದಡಿ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಮತದಾರರ ಪಟ್ಟಿಯನ್ನು ತಿರುಚಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲು ಬಿಜೆಪಿ ಡಿಸೆಂಬರ್ 15 ರಿಂದ ಈ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದೆಹಲಿಯಲ್ಲಿ ಬಿಜೆಪಿ ಈಗಾಗಲೇ ತನ್ನ ಸೋಲನ್ನು ಒಪ್ಪಿಕೊಂಡಿದೆ. ಅವರಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ. ಯಾವುದೇ ದೃಷ್ಟಿ ಇಲ್ಲ ಮತ್ತು ನಂಬಲರ್ಹ ಅಭ್ಯರ್ಥಿಗಳಿಲ್ಲ. ಯಾವುದೇ ಬೆಲೆ ತೆತ್ತಾದರೂ ಚುನಾವಣೆಯಲ್ಲಿ ಗೆಲ್ಲಲು ಮತದಾರರ ಪಟ್ಟಿಯನ್ನು ದುರ್ಬಳಕೆ ಮಾಡಿಕೊಳ್ಳುವಂತಹ ಅಪ್ರಾಮಾಣಿಕ ತಂತ್ರಗಳನ್ನು ಅನುಸರಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ನನ್ನ ಹೊಸ ದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಡಿಸೆಂಬರ್ 15 ರಿಂದ ಆಪರೇಷನ್ ಕಮಲ ಸಕ್ರಿಯವಾಗಿದೆ. ಈ 15 ದಿನಗಳಲ್ಲಿ 5,000 ಮತದಾರರನ್ನು ಪಟ್ಟಿಯಿಂದ ಅಳಿಸಲು ಅರ್ಜಿಗಳನ್ನು ಸಲ್ಲಿಸಲಾಗಿದೆ. ಹೆಚ್ಚುವರಿಯಾಗಿ, 7,500 ಮತದಾರರನ್ನು ಸೇರಿಸಲು ಅರ್ಜಿಗಳನ್ನು ಸಲ್ಲಿಸಲಾಗಿದೆ. ಶೇ.12ರಷ್ಟು ಮತಗಳಲ್ಲಿ ಅಕ್ರಮಗಳು ನಡೆಯುತ್ತಿವೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಅಕ್ಟೋಬರ್ 29 ರಂದು ಚುನಾವಣಾ ಆಯೋಗವು ನಡೆಸಿದ ಸಾರಾಂಶ ಪರಿಷ್ಕರಣೆಯಲ್ಲಿ ಹೊಸದಿಲ್ಲಿ ಕ್ಷೇತ್ರದಲ್ಲಿ ಸುಮಾರು 1 ಲಕ್ಷ ಮತದಾರರನ್ನು ಸೇರಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದರು.