Advertisement

ಬ್ರಾಹ್ಮಣರ ಓಣಿಯಿಂದ ಹರಿಜನರ ಕೇರಿವರೆಗೆ ಬಿಜೆಪಿ ತಲುಪಿದೆ: ಕಾರಜೋಳ

11:46 PM Aug 05, 2019 | Lakshmi GovindaRaj |

ಬೆಂಗಳೂರು: “ಬಿಜೆಪಿ ಯಾವುದೇ ಒಂದು ಜಾತಿ, ಧರ್ಮದ ಪಕ್ಷವಲ್ಲ. ಬಿಜೆಪಿಯು ಮೇಲ್ವರ್ಗ, ಬ್ರಾಹ್ಮಣರ ಪಕ್ಷ ಎಂಬುದಿಲ್ಲ. ಬ್ರಾಹ್ಮಣರ ಓಣಿಯಿಂದ ಹರಿಜನ ಕೇರಿಯವರೆಗೆ ಪಕ್ಷ ತಲುಪಿದೆ. ಪಕ್ಷದ ಸಿದ್ಧಾಂತ ಒಪ್ಪಿ ಬರುವ ಯಾವುದೇ ಧರ್ಮ, ಜಾತಿಯವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕೆಲಸ ಆಗಬೇಕು’ ಎಂದು ಬಿಜೆಪಿ ಹಿರಿಯ ನಾಯಕ ಗೋವಿಂದ ಕಾರಜೋಳ ಕರೆ ನೀಡಿದರು.

Advertisement

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸದಸ್ಯತ್ವ ಅಭಿಯಾನದ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಇಂದು ಅಲ್ಪಸಂಖ್ಯಾತ ವಿದ್ಯಾವಂತ ಮಹಿಳೆಯರು ಬಿಜೆಪಿ ಸದಸ್ಯರಾಗಲು ಹಾತೊರೆಯುತ್ತಿದ್ದಾರೆ. ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ ಕಠಿಣ ಶಿಕ್ಷೆಯಂತಿದ್ದ ತ್ರಿವಳಿ ತಲಾಖ್‌ ರದ್ಧುಪಡಿಸಿರುವ ಕ್ರಮವನ್ನು ಬಹಳಷ್ಟು ಮಂದಿ ಮೆಚ್ಚಿದ್ದು, ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು.

ಪಕ್ಷವು ಮುಸ್ಲಿಂ, ದೀನ ದಲಿತರು, ಹಿಂದುಳಿದ ವರ್ಗದವರ ವಿರೋಧಿಯಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮುಂದುವರಿಸಬೇಕು ಎಂದು ಮನವಿ ಮಾಡಿದರು. ಈವರೆಗೆ 18.90 ಲಕ್ಷ ಸದಸ್ಯತ್ವ ನೋಂದಣಿಯಾಗಿರುವುದು ಶ್ಲಾಘನೀಯ. ರಾಜ್ಯದಲ್ಲಿ ಇತ್ತೀಚೆಗಿನ ರಾಜಕೀಯ ಬೆಳವಣಿಗೆಯಿಂದ ಸದಸ್ಯತ್ವ ನೋಂದಣಿಗೆ ಹೆಚ್ಚು ಒತ್ತು ನೀಡಲಾಗದ ಕಾರಣ ತುಸು ಹಿನ್ನಡೆಯಾಗಿದೆ.

ಯಾವುದೇ ಪಕ್ಷ ಬಲಾಡ್ಯವಾಗಿರಬೇಕಾದರೆ ಆ ಪಕ್ಷದ ಕಾರ್ಯಕರ್ತರ ಪಡೆ ಬಲವಾಗಿರಬೇಕು ಎಂದರು. ಸಭೆ ಉದ್ಘಾಟಿಸಿ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಶಾಸಕ ಸಿ.ಟಿ.ರವಿ, ಕೇವಲ 10 ಮಂದಿಯಿಂದ ಆರಂಭವಾದ ಪಕ್ಷ ಇಂದು 11 ಕೋಟಿ ಸದಸ್ಯತ್ವ ಹೊಂದಿದ್ದು, ಅತಿ ಹೆಚ್ಚು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಜತೆಗೆ ಅತಿ ಹೆಚ್ಚು ಸಂಸದರನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಅರವಿಂದ ಲಿಂಬಾವಳಿ, ದೇಶದ ವಾತಾವರಣ ಕ್ರಮೇಣ ಬದಲಾಗುತ್ತಿದೆ. ದೇಶದ ಸ್ವಾಭಿಮಾನ ಎತ್ತಿ ಹಿಡಿಯುವ ಜತೆಗೆ ಮುಸ್ಲಿಂ ಮಹಿಳೆಯರ ಗೌರವವನ್ನು ರಕ್ಷಿಸುವಂತಹ ಕಾರ್ಯವನ್ನು ಪಕ್ಷ ಮಾಡುತ್ತಿದೆ ಎಂದು ತಿಳಿಸಿದರು. ರಾಜ್ಯ ಸಂಚಾಲಕರಾದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌, ರಾಜ್ಯ ಬಿಜೆಪಿ ಕಾರ್ಯದರ್ಶಿ ಭಾರತಿ ಮುಗದಂ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next