ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಿದೆ, ಪ್ರಚಾರವೂ ಆರಂಭವಾಗಿದೆ. ಈ ನಡುವೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ವ್ಯಂಗ್ಯವಾಡಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಈ ಚುನಾವಣೆಯಲ್ಲಿ ತಮ್ಮ ಭದ್ರಕೋಟೆ ಗೋರಖಪುರದಿಂದಲೇ ಸ್ಪರ್ಧೆ ಮಾಡುತ್ತಾರೆ ಎಂದು ಬಿಜೆಪಿ ಹೇಳಿದೆ. ಇದರ ಬೆನ್ನಲ್ಲೇ ಹೇಳಿಕೆ ನೀಡಿರುವ ಅಖಿಲೇಶ್, “ಮೊದಲು ಅವರು ‘ಅಯೋಧ್ಯೆಯಿಂದ ಸ್ಪರ್ಧೆ ಮಾಡುತ್ತಾರೆ ಅಥವಾ ‘ಅವರು ಮಥುರಾದಿಂದ ಕಣಕ್ಕಿಳಿಯುತ್ತಾರೆ’ ಅಥವಾ ‘ಅವರು ಪ್ರಯಾಗ್ ರಾಜ್ ನಿಂದ ಚುನಾವಣೆ ಸ್ಪರ್ಧಿಸುತ್ತಾರೆ’ ಎಂದು ಹೇಳುತ್ತಿದ್ದರು, ಆದರೆ ಈಗ ನೋಡಿ ಬಿಜೆಪಿ ಅವರನ್ನು ಈಗಾಗಲೇ ಗೋರಖ್ ಪುರಕ್ಕೆ ಕಳುಹಿಸಿದೆ. ಯೋಗಿ ಅಲ್ಲೇ ಉಳಿಯಬೇಕು. ಅಲ್ಲಿಂದ ಬರುವ ಅವಶ್ಯಕತೆ ಇಲ್ಲ” ಎಂದು ವ್ಯಂಗ್ಯವಾಡಿದರು.
ಅಲ್ಲದೆ ಈ ಬಾರಿ ನಮ್ಮ ಪಕ್ಷವು ಗೋರಖಪುರ ಜಿಲ್ಲೆಯ ಎಲ್ಲಾ ವಿಧಾನಸಭಾ ಸ್ಥಾನಗಳನ್ನು ಗೆಲ್ಲುತ್ತದೆ. ಸ್ವಂತ ನಗರದಲ್ಲಿ ಮೆಟ್ರೊ ಓಡಿಸಲು, ಒಳಚರಂಡಿ ನಿರ್ಮಿಸಲು ಯೋಗಿಗೆ ಸಾಧ್ಯವಾಗಲಿಲ್ಲ. ಈ ಬಾರಿ ಗೋರಖಪುರದ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಇಂದು ಬಿಜೆಪಿಯು ಅವರನ್ನು ಮನೆಗೆ ಕಳುಹಿಸಿದೆ. ಮುಂದೆ ಜನರು ಅವರನ್ನು ಮನೆಯಲ್ಲೇ ಉಳಿದುಕೊಳ್ಳುವಂತೆ ಮಾಡಲಿದ್ದಾರೆ’ ಎಂದು ಅಖಿಲೇಶ್ ಹೇಳಿದರು.
ಇದನ್ನೂ ಓದಿ:ಕೇರಳ ಸಿಎಂ ಪಿಣರಾಯಿ ವಿಜಯನ್ ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ
ಉತ್ತರ ಪ್ರದೇಶ ವಿಧಾನಸಭೆ ಚುನಾವನೆ ಘೋಷಣೆಯಾದ ಬಳಿಕ ಹಲವು ಬಿಜೆಪಿ ಶಾಸಕರು ಪಕ್ಷ ತೊರೆದು ಸಮಾಜವಾದಿ ಪಾರ್ಟಿ ಸೇರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಯೋಗಿಯ ಬಿಜೆಪಿಗೆ ಅಖಿಲೇಶ್ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ.
403 ಸದಸ್ಯ ಬಲವನ್ನು ಹೊಂದಿರುವ ಉತ್ತರ ಪ್ರದೇಶ ವಿಧಾನ ಸಭೆಗೆ ಫೆಬ್ರವರಿ 10 ರಿಂದ ಮಾರ್ಚ್ 7ರ ವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.