Advertisement

ರಾಜ್ಯದಲ್ಲಿ ಬಿಜೆಪಿಗೆ 22 ಸ್ಥಾನ ಖಚಿತ

06:34 AM Mar 14, 2019 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಜನಪರ, ಪಾರದರ್ಶಕ, ಅಭಿವೃದ್ಧಿಪರ ಆಡಳಿತವೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶ್ರೀರಕ್ಷೆಯಾಗಲಿದ್ದು, ರಾಜ್ಯದಲ್ಲಿ 22ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆ, ರಾಜ್ಯ ಸರ್ಕಾರದ ವೈಫ‌ಲ್ಯಗಳು ಹಾಗೂ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಾದ ಜನಪರ ಯೋಜನೆಗಳ ವಿಚಾರಗಳನ್ನೇ ಮುಂದಿಟ್ಟುಕೊಂಡು ರಾಜ್ಯದಲ್ಲಿ ಈ ಬಾರಿ ಚುನಾವಣೆ ಎದುರಿಸಲಾಗುವುದು ಎಂದು ತಿಳಿಸಿದರು.

ಇತ್ತೀಚೆಗೆ ಬರ ಅಧ್ಯಯನ ಪ್ರವಾಸ ನಡೆಸಲಾಗಿದೆ. ನಂತರ 26 ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದು, ಉಳಿದೆರಡು ಕ್ಷೇತ್ರಗಳಲ್ಲಿ ಸದ್ಯದಲ್ಲೇ ಪ್ರವಾಸ ಕೈಗೊಳ್ಳಲಿದ್ದೇನೆ. ಎಲ್ಲೆಡೆ ಬಿಜೆಪಿಗೆ ಪೂರಕ ವಾತಾವರಣವಿದ್ದು, 22 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಆ ಗುರಿ ತಲುಪಲು ಎಲ್ಲರೂ ಸಂಘಟಿತವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಿ ಭ್ರಷ್ಟಾಚಾರ ರಹಿತ, ಹಗರಣ ಮುಕ್ತ ಆಡಳಿತ ನೀಡಿದೆ. ಅಭಿವೃದ್ಧಿಯಲ್ಲಿ ಮುಂದುವರಿದ ದೇಶಗಳಿಗೆ ಸವಾಲೊಡ್ಡುವ ರೀತಿಯಲ್ಲಿ ಮುನ್ನುಗ್ಗುತ್ತಿದೆ. ಮೋದಿಯವರ ಆರ್ಥಿಕ ನೀತಿಗಳು ಅನೇಕ ದೇಶಗಳನ್ನು ನಿಬ್ಬೆರಗಾಗಿಸಿದೆ. 

ದೇಶದ 130 ಕೋಟಿ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ಸೌಲಭ್ಯ ಸಿಗುವ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ 12.5 ಕೋಟಿ ಸಣ್ಣ ಹಿಡುವಳಿದಾರರಿಗೆ ವಾರ್ಷಿಕ 6000 ರೂ. ನೆರವು ನೀಡುವ ಕಾರ್ಯಕ್ರಮ ಜಾರಿಗೆ ತಂದು ಕೇಂದ್ರ ಸರ್ಕಾರ ಸ್ಪಂದಿಸಿದೆ ಎಂದು ಹೇಳಿದರು.

Advertisement

ರಾಜ್ಯದ ಇತಿಹಾಸದಲ್ಲಿ 104 ಶಾಸಕ ಬಲದ ಬಿಜೆಪಿ ಪ್ರತಿಪಕ್ಷದಲ್ಲಿದ್ದರೆ, 37 ಸ್ಥಾನ ಪಡೆದ ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ ಬೆಂಬಲದಿಂದ ಆಡಳಿತ ಹಿಡಿದಿದೆ. ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲ. ರಾಜ್ಯದ 160ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತವಾಗಿದ್ದು, ಕುಡಿಯುವ ನೀರಿಲ್ಲ. ಜಾನುವಾರುಗಳಿಗೆ ಮೇವಿಲ್ಲ. ಜನರೆಲ್ಲಾ ಗುಳೆ ಹೋಗಲಾರಂಭಿಸಿದ್ದಾರೆ. ಇಷ್ಟಾದರೂ ಯಾವ ಸಚಿವರು ಜಿಲ್ಲೆಗಳಿಗೂ ಹೋಗುತ್ತಿಲ್ಲ, ವಿಧಾನಸೌಧದಲ್ಲೂ ಇಲ್ಲ ಎಂದು ವಾಗ್ಧಾಳಿ ನಡೆಸಿದರು.

ಮೈತ್ರಿ ಸರ್ಕಾರದ ವೈಫ‌ಲ್ಯಗಳನ್ನು ಜನರ ಮುಂದಿಡಲಾಗುವುದು. ಮಹದಾಯಿ ಜಲವಿವಾದ ಇತ್ಯರ್ಥದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಜನರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
 
ತೇಜಸ್ವಿನಿ ಅನಂತ್‌ಕುಮಾರ್‌ ಮಠಕ್ಕೆ ಭೇಟಿ 
ತುಮಕೂರು: ಬೆಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ತೇಜಸ್ವಿನಿ ಅನಂತ್‌ ಕುಮಾರ್‌ ಬುಧವಾರ ಸಂಜೆ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮಿಗಳಿಂದ ಆಶೀರ್ವಾದ ಪಡೆದರು. ಬಳಿಕ ಕರ್ನಾಟಕ ರತ್ನ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ತೆರಳಿ ಶ್ರೀಗಳ ಗದ್ದುಗೆ ಪೂಜೆ ಸಲ್ಲಿಸಿ, ಹಿರಿಯ ಶ್ರೀಗಳಲ್ಲಿ ಬೇಡಿಕೊಂಡರು. ಆನಂತರ ಮಠಕ್ಕೆ ಬಂದು ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು. 

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಯವರು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ 46,000 ಕೋಟಿ ರೂ. ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದರೆ 9 ತಿಂಗಳ ಆಡಳಿತ ಕಳೆದರೂ ಈವರೆಗೆ ಬಿಡುಗಡೆ ಮಾಡಿರುವುದು 4,500 ಕೋಟಿ ರೂ. ಮಾತ್ರ. ಜನರಿಗೆ ಸುಳ್ಳು ಭರವಸೆ ನೀಡಿ 37 ಸ್ಥಾನಗಳನ್ನು ಕುಮಾರಸ್ವಾಮಿ ಗೆದ್ದಿದ್ದಾರೆ. ಇಲ್ಲದಿದ್ದರೆ 20 ಸ್ಥಾನವನ್ನೂ ಗೆಲ್ಲುತ್ತಿರಲಿಲ್ಲ.  
 ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next