ಯಲಹಂಕ: ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಬಿಜೆಪಿ ಶಾಸಕರಿಗೆ ಮುಂದಿನ ವಾರ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಸಮೀಪದ ರಮಡಾ ರೆಸಾರ್ಟ್‌ಗೆ ಶನಿವಾರ ಮಧ್ಯಾಹ್ನ 12 ಗಂಟೆಗೆ ಭೇಟಿ ನೀಡಿದ ಯಡಿಯೂರಪ್ಪ ಅವರು, ಶಾಸಕರ ಕುಶಲೋಪರಿ ವಿಚಾರಿಸಿದರು. ಬಳಿಕ ಕೆಲ ಹೊತ್ತು ಸಭೆ ನಡೆಸಿ ಚರ್ಚಿಸಿದರು.
ಶಾಸಕರು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಊಹಾಪೋಹ, ವದಂತಿಗಳ ಬಗ್ಗೆಯೂ ತಲೆಕೆಡಿಕೊಳ್ಳಬೇಡಿ. ಈಗಾಗಲೇ ರಾಜೀನಾಮೆ ನೀಡಿರುವ ಕಾಂಗ್ರೆಸ್, ಜೆಡಿಎಸ್‌ನ ಅತೃಪ್ತ ಶಾಸಕರು ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ. ಈಗಾಗಲೇ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಇಷ್ಟಾದರೂ ಕಾಂಗ್ರೆಸ್, ಜೆಡಿಎಸ್‌ನವರು ಅತೃಪ್ತರು ರಾಜೀನಾಮೆ ಹಿಂಪಡೆಯುತ್ತಾರೆ ಎಂಬುದಾಗಿ ಸುಳ್ಳು ಮಾಹಿತಿ ಹರಡುತ್ತಿದ್ದಾರೆ. ಮುಂದಿನ ವಾರ ಬಿಜೆಪಿ ಸರ್ಕಾರ ರಚನೆಯಾಗುವುದರಲ್ಲಿ ಅನುಮಾನವೇ ಬೇಡ. ಭಾನುವಾರ ಸಂಜೆ 4 ಗಂಟೆಗೆ ಮತ್ತೆ ಸಭೆ ಸೇರೋಣ ಎಂದು ಯಡಿಯೂರಪ್ಪ ಶಾಸಕರಿಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ.
ಸಭೆಯ ಬಳಿಕ ಯಡಿಯೂರಪ್ಪ ಅವರು ಶಾಸಕರೊಂದಿಗೆ ರೆಸಾರ್ಟ್‌ನಲ್ಲೇ ಊಟ ಸೇವಿಸಿ, ನಂತರ ನಗರಕ್ಕೆ ವಾಪಸ್ಸಾದರು. ಪಕ್ಷದ ಕೆಲ ನಾಯಕರು ರೆಸಾರ್ಟ್‌ನಲ್ಲೇ ಇದ್ದು, ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ರೆಸಾರ್ಟ್‌ನಲ್ಲಿ ಸದ್ಯ 86 ಶಾಸಕರು ವಾಸ್ತವ್ಯ ಹೂಡಿದ್ದಾರೆ.
ಹಿರಿಯ ನಾಯಕರು, ಬೆಂಗಳೂರು ಹಾಗೂ ಸುತ್ತಮುತ್ತಲ ಕ್ಷೇತ್ರಗಳ ಕೆಲ ಶಾಸಕರು ತಮ್ಮ ಮನೆಗಳಲ್ಲೇ ಉಳಿದಿದ್ದು, ಸೋಮವಾರ ಸದನದಲ್ಲಿ ನೇರವಾಗಿ ಪಾಲ್ಗೊಳ್ಳಲಿದ್ದಾರೆ. ರೆಸಾರ್ಟ್‌ನಲ್ಲಿ ಕರಾವಳಿ ಭಾಗದ ಶಾಸಕರನ್ನು ಒಂದೆಡೆ ಇರಿಸಿದ್ದರೆ, ಉಳಿದ ಶಾಸಕರನ್ನು ಒಟ್ಟಿಗೆ ಇರಿಸಲಾಗಿದೆ. ಶಾಸಕರು ವಾಸ್ತವ್ಯ ಹೂಡಿರುವ ಕಡೆ ಇತರರಿಗೆ ಪ್ರವೇಶವಿಲ್ಲದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.