Advertisement

ಡಾ|ಅಂಬೇಡ್ಕರ್‌ ಗೆ ಬಿಜೆಪಿ ಸರಕಾರದಿಂದ ನಿಜವಾದ ಗೌರವ ಸಲ್ಲಿಕೆ

11:39 AM Apr 12, 2022 | Team Udayavani |

ಹುಬ್ಬಳ್ಳಿ: ಡಾ| ಬಾಬಾಸಾಹೇಬ ಅಂಬೇಡ್ಕರ್‌ ಅವರು ಸರ್ವರಿಗೂ ಸಮಬಾಳು ಸಮಪಾಲು ಎಂಬ ಸಂವಿಧಾನ ರಚಿಸಿದರು. ಅದನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನ್ಯಾಯ, ತುಳಿತಕ್ಕೊಳಗಾದವರನ್ನು ಮುಖ್ಯವಾಹಿನಿಗೆ ತರುವವರೆಗೆ ಎಲ್ಲರಿಗೂ ಮೀಸಲಾತಿ ಇದ್ದೇ ಇರುತ್ತದೆ ಎಂದು ಸ್ಪಷ್ಟ ಭರವಸೆ ನೀಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಘಂಟಿಕೇರಿ ಕ್ರಿಶ್ಚಿಯನ್‌ ಕಾಲೋನಿಯ ಎಸ್‌ಸಿ-ಎಸ್‌ಟಿ ಹಾಸ್ಟೆಲ್‌ನಲ್ಲಿ ಬಿಜೆಪಿ ಹು-ಧಾ ಮಹಾನಗರ ಜಿಲ್ಲಾ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ-ಶಿಕ್ಷಕರ ಕೋಷ್ಠದಿಂದ ಜ್ಯೋತಿಬಾ ಫುಲೆ ದಿವಸ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ| ಅಂಬೇಡ್ಕರ್‌ ಅವರಿಗೆ ನಿಜವಾದ ಗೌರವ ಸಲ್ಲಿಸುವುದು ಆರಂಭವಾಗಿದ್ದೇ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ. ಅಂಬೇಡ್ಕರ್‌ ಅವರ ಜನ್ಮಸ್ಥಳ, ಶಿಕ್ಷಣ ಪಡೆದ ನಿವಾಸ, ದೀಕ್ಷೆ ಪಡೆದ ಸ್ಥಳ, ಮಹಾನಿರ್ವಾಣ ಸ್ಥಳ, ಅಂತ್ಯಕ್ರಿಯೆ ಸ್ಥಳಗಳನ್ನು ಅಭಿವೃದ್ಧಿ ಪಡಿಸಿ ಪಂಚತೀರ್ಥಗಳನ್ನಾಗಿ ಮಾಡಲಾಗಿದೆ. ದೇಶದಲ್ಲಿ ಹಿಂದೆ ಅಧಿಕಾರದಲ್ಲಿದ್ದವರು ಡಾ| ಬಿ.ಆರ್‌. ಅಂಬೇಡ್ಕರ್‌ ಮತ್ತು ಬಾಬು ಜಗಜೀವನರಾಮ ಸೇರಿದಂತೆ ಅನೇಕರಿಗೆ ಅಪಮಾನ ಕೂಡ ಮಾಡಿದರು. ದಲಿತರು ಮತ್ತು ಅಲ್ಪಸಂಖ್ಯಾತರನ್ನು ತಮ್ಮ ಮತ ಬ್ಯಾಂಕ್‌ ಮಾಡಿಕೊಂಡರು. ಮೋದಿ ಸರಕಾರ ಆಡಳಿತಕ್ಕೆ ಬಂದ ಮೇಲೆ ದೇಶಕ್ಕಾಗಿ ಕೆಲಸ ಮಾಡಿದ, ತಮ್ಮ ಪ್ರಾಣ ಪಣಕ್ಕಿಟ್ಟವರ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಟ, ತ್ಯಾಗ ಬಲಿದಾನ ಮಾಡಿದ ಅನೇಕ ಮಹಾತ್ಮರ ಚರಿತ್ರೆ ಎಲ್ಲರಿಗೂ ತಿಳಿಸುವ ಕಾರ್ಯ ಮಾಡಲಾಗುತ್ತಿದೆ. ಇತಿಹಾಸ ತಿಳಿಯದೆ ಉತ್ತಮ ಭವಿಷ್ಯ ನಿರ್ಮಿಸಲು ಸಾಧ್ಯವಿಲ್ಲ ಎಂದರು.

ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರು 18ನೇ ಶತಮಾನದಲ್ಲಿ ಸಾಮಾಜಿಕ ನ್ಯಾಯ, ಮಹಿಳಾ ಸಶಕ್ತೀಕರಣ ಹಾಗೂ ಶಿಕ್ಷಣಕ್ಕೆ ನೀಡಿದ ಕೊಡುಗೆ ಮರೆಯಲು ಸಾಧ್ಯವಿಲ್ಲ. ಫುಲೆ ದಂಪತಿ ಅಂದಿನ ಕಾಲದಲ್ಲೇ ಸ್ತ್ರೀ ಅಸಮಾನತೆ ವಿರುದ್ಧ ಹೋರಾಡಿ ಜನಜಾಗೃತಿ ಮೂಡಿಸಿದರು. ಅಪಮಾನಗಳನ್ನು ಸಹಿಸಿ, ಯಾವುದಕ್ಕೂ ಹಿಂಜರಿಯದೆ ಸಮಾಜದಲ್ಲಿ ತುಳಿತಕ್ಕೊಳಗಾದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಅವಿರತವಾಗಿ ಹೋರಾಡಿದರು ಎಂದು ಹೇಳಿದರು.

ಮಾಜಿ ಶಾಸಕ ಅಶೋಕ ಕಾಟವೆ, ದತ್ತಮೂರ್ತಿ ಕುಲಕರ್ಣಿ, ಪ್ರಭು ನವಲಗುಂದಮಠ, ಸಂಜಯ ಕಪಟಕರ, ರಂಗಾಯಣ ನಿರ್ದೇಶಕ ರಮೇಶ ಪರವೀರನಾಯ್ಕ, ಬಸವರಾಜ ಅಮ್ಮಿನಬಾವಿ, ಬಸವರಾಜ ಗರಗ, ಶಿವಾನಂದ ಮುತ್ತಣ್ಣವರ, ಪ್ರತಿಭಾ ಪವಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ನಂದಾ ಹಣಬರಟ್ಟಿ ಮೊದಲಾದವರಿದ್ದರು.

Advertisement

ಚಂದ್ರಶೇಖರ ಗೋಕಾಕ ಪ್ರಾಸ್ತಾವಿಕ ಮಾತನಾಡಿದರು. ಎಸ್‌ಸಿ-ಎಸ್‌ಟಿ ಹಾಸ್ಟೆಲ್‌ ಮೇಲ್ವಿಚಾರಕ ಡಾ| ಪ್ರಹ್ಲಾದ ಗೆಜ್ಜಿ ಸ್ವಾಗತಿಸಿದರು. ಅಣ್ಣಪ್ಪ ಗೋಕಾಕ ನಿರೂಪಿಸಿದರು. ರಾಮಚಂದ್ರ ಪೊದ್ದಡ್ಡಿ ವಂದಿಸಿದರು.

ಬಿಜೆಪಿ ಸರಕಾರದಿಂದ ಮುಂದಿನ ಐದು ವರ್ಷಗಳಲ್ಲಿ 4 ಕೋಟಿಗೂ ಅಧಿಕ ಎಸ್‌ ಸಿ-ಎಸ್‌ಟಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಹಾಸ್ಟೆಲ್‌ಗ‌ಳ ವ್ಯವಸ್ಥೆ ಮಾಡಲಾಗುತ್ತಿದೆ. ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗಾಗಿ 59 ಸಾವಿರ ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ನಿಗದಿಪಡಿಸಿ ಮೆಟ್ರಿಕ್ಯುಲೇಷನ್‌ ನಂತರದ ಸ್ಕಾಲರ್‌ಶಿಪ್‌ ಕೊಡಲಾಗುತ್ತಿದೆ. ಧಾರವಾಡದಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್‌ ಆರಂಭಿಸಲಾಗಿದೆ. –ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next