ಮೈಸೂರು: ಕೋವಿಡ್-19 ಸೋಂಕು ಎದುರಿಸುವಲ್ಲಿ ಕಾಂಗ್ರೆಸ್ ವಿರೋಧ ಪಕ್ಷವಾಗಿ ಬಿಜೆಪಿಗೆ ಸಹಕಾರ ನೀಡಿದೆ. ಆದರೆ ಬಿಜೆಪಿಗೆ ಕೋವಿಡ್-19 ನಿಭಾಯಿಸಲು ಬರಲಿಲ್ಲ. ಇವರಿಗೆ ಸರಿಯಾದ ಬದ್ಧೆತೆಯೂ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ಮೊದಲ ಪ್ರಕರಣ ಬಂದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಇವರು ಏಪ್ರಿಲ್ ವರೆಗೂ ಸುಮ್ಮನಿದ್ದರು. ನಂತರವೂ ಮಾಡಿದ್ದೇನು ಚಪ್ಪಾಳೆ ತಟ್ಟಿಸಿದರು ಎಂದು ವ್ಯಂಗ್ಯವಾಡಿದರು.
ಮಧ್ಯರಾತ್ರಿಯೇ ಲಾಕ್ ಡೌನ್ ಜಾರಿ ಮಾಡಿದರು. ಜನರಿಗೆ ಸಿದ್ದತೆ ಮಾಡಿಕೊಳ್ಳಲು ಸಮಯ ನೀಡಲಿಲ್ಲ. ಇದರಿಂದ ಎಷ್ಟೋ ಕಾರ್ಮಿಕರಿಗೆ, ಬಡವರ್ಗದವರಿಗೆ ತೊಂದರೆ ಆಗಿದೆ. ಇದನ್ನು ಪ್ರಶ್ನಿಸುವುದು, ಕೇಳುವುದು ತಪ್ಪಾ? ಇದನ್ನು ಪ್ರಶ್ನಿಸುವುದಕ್ಕೆ ನಾವು ವಿರೋಧ ಪಕ್ಷದಲ್ಲಿರುವುದು. ಇವರಿಗೆ ಮುಂದಿನ ದಿನಗಳಲ್ಲಿ ಜನರು ಮತ್ತು ಮಾಧ್ಯಮದವರೇ ಬುದ್ದಿ ಕಲಿಸಬೇಕು ಎಂದರು.
ಈ ಸಮಯದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದರೆ ಕುಟುಂಬಕ್ಕೆ 10 ಸಾವಿರ ರೂ. ನೀಡುತ್ತಿದ್ದೆ. ಬರೋಬ್ಬರಿ 1 ಕೋಟಿ ಕುಟುಂಬಗಳಿಗೆ 10 ಸಾವಿರ ಕೊಡುತ್ತಿದ್ದೆ. ಇದನ್ನು ಯಡಿಯೂರಪ್ಪ ಅವರಿಗೆ ಹೇಳುತ್ತಿದ್ದೇನೆ. ಸಾಲ ತೆಗೆದುಕೊಂಡು 10,000 ಕೋಟಿ ರೂ. ಜನರಿಗೆ ಸಾಲ ಕೊಡುತ್ತಿದ್ದೆ ಎಂದರು.
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕ ವಿಚಾರದಲ್ಲಿ ಮಾತನಾಡಿದ ಅವರು, ರಾಜ್ಯಸಭೆಗೆ ನನ್ನ ಶಿಫಾರಸ್ಸು ಖರ್ಗೆ ಅಂತ ಈಗಾಗಲೇ ಹೇಳಿದ್ದೀನಿ. ವೇಣುಗೋಪಾಲ್ ಅವರಿಗೆ ಈ ಬಗ್ಗೆ ಹೇಳಿದ್ದೇನೆ. ಏನು ಹೇಳಬೇಕೋ ಎಲ್ಲವೂ ಹೈಕಮಾಂಡ್‌ಗೆ ತಿಳಿಸಿದ್ದೇನೆ ಎಂದರು.