ಸಿಂದಗಿ: ಕರ್ನಾಟಕದಲ್ಲಿ ಒಬ್ಬ ಸಿದ್ದು, ಪಂಜಾಬದಲ್ಲಿ ಒಬ್ಬ ಸಿದ್ದು ಇವರಿಬ್ಬರೇ ಸಾಕು ದೇಶದಲ್ಲಿ ಕಾಂಗ್ರೆಸ್ ಮುಳುಗಲು. ರಾಜ್ಯದಲ್ಲಿ ನಾವು 2023ರಲ್ಲಿ ಸರಕಾರ ರಚನೆ ಮಾಡುತ್ತೇವೆ ಎಂಬ ಭ್ರಮೆಯಲ್ಲಿರುವ ಸಿದ್ದು ಮತ್ತು ಡಿಕೆಸಿ ಅವರು ಕಚ್ಚಾಡುತ್ತಿದ್ದಾರೆ. ಕಾಂಗ್ರೆಸ್ ಪರಿಸ್ಥಿತಿಯಾಗಿದೆ. ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಮುಂದೆ 2023ರಲ್ಲಿ ಬಿಜೆಪಿ ರಾಜ್ಯದಲ್ಲಿ ಪುನಃ ಸರಕಾರ ರಚಿಸುತ್ತದೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಶುಕ್ರವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪೂರ್ಣ ಕಾಂಗ್ರೆಸ್ ಮುಕ್ತವಾಗಲಿಕ್ಕೆ ಸಮಿಪಕ್ಕೆ ಬಂದಿದೆ. ದೇಶದ 2-3 ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸರಕಾರವಿದೆ. 26 ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳಿವೆ. ಕೇಂದ್ರದಲ್ಲಿ ಬಲಿಷ್ಠ ಹಾಗೂ ಸಂಪೂರ್ಣ ಬಹುಮತದಲ್ಲಿ ಕೇಂದ್ರ ಸರಕಾರವಿದೆ. ಸಿದ್ದರಾಮಯ್ಯವರು ನಾನು 5 ವರ್ಷಗಳ ಆಡಳಿತದಲ್ಲಿ ಕ್ಷೀರ ಭಾಗ್ಯ, ಅನ್ನ ಭಾಗ್ಯ, ಕೃಷಿ ಭಾಗ್ಯ ಹೀಗೆ ಹತ್ತು ಹಲವು ಭಾಗ್ಯಗಳನ್ನು ಜನತೆಗೆ ನೀಡಿದ್ದೇನೆ ಎಂದು ಹೇಳುತ್ತಾರೆ.
ಭಾಗ್ಯಯೋಜನೆಗಳು ಘೋಷಣೆಗಳಾಗಿವೆ. ನಿಜವಾಗಿ ಫಲಾನುಭವಿಗಳಿಗೆ ತಲುಪಿಲ್ಲ. ಬಡವರಿಗೆ ಮುಟ್ಟಿಲ್ಲ. ಕೇವಲ ಪ್ರಚಾರಕ್ಕಾಗಿ ಘೋಷಣೆ ಮಾಡಿದ್ದಾರೆ. ಒಂದು ವೇಳೆ ಭಾಗ್ಯ ಯೋಜನೆಗಳು ಬಡವರಿಗೆ ಸರಿಯಾಗಿ ಮುಟ್ಟಿದ್ದರೆ ಅವೇ ಪುನಃ ಮುಖ್ಯಮಂತ್ರಿಗಳಾಗುತ್ತಿದ್ದರು. ಅವರು ಚಾಂಮುಂಡಿ ಕ್ಷೇತ್ರದಲ್ಲಿ 30 ಸಾವಿರ ಮತಗಳಿಗಿಂದ ಹೆಚ್ಚಿನ ಅಂತರದಲ್ಲಿ ಸೋಲುತ್ತಿರಲಿಲ್ಲ. ಇದರಿಂದ ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಅವರನ್ನು ಜನತೆ ಹೇಗೆ ನೋಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅವರು ಮನೆಗೆ ಹೋಗುತ್ತಿದ್ದಾರೆ. ಪಕ್ಷ ಮುಳುಗುತ್ತಿದೆ. ಆದ್ದರಿಂದ ಆಡತಾರೂಢ ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಅವರಿಗೆ ಮತ ನೀಡಿ ಚುನಾಯಿಸಿ ಎಂದು ಮನವಿ ಮಾಡಿದರು.
ವಸತಿ ಇಲಾಖೆ ಸಚಿವ ವಿ. ಸೋಮಣ್ಣ ಮಾತನಾಡಿ, ಉಪಚುನಾವಣೆ ಕ್ಷೇತ್ರದ 7 ಜಿಪಂ, ಒಂದು ಪುರಸಭೆ, ಒಂದು ಪಟ್ಟಣ ಪಂಚಾಯತಿ ಕ್ಷೇತ್ರಗಳಲ್ಲಿ ಓಡಾಡಿದ್ದೇನೆ. ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಅವರ ಬಗ್ಗೆ ಒಳ್ಳೆ ಅಭಿಪ್ರಾಯವಿದೆ. ಅವರ ಗೆಲುವು ಖಚಿತ. ರಮೇಶ ಭೂಸನೂರ ಅವರಿಗೆ ಮತ ನೀಡುವ ಮೂಲಕ ಬಿಜೆಪಿಗೆ ಶಕ್ತಿ ನೀಡಿ ಎಂದು ಮನವಿ ಮಾಡಿಕೊಂಡರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹಾಗೂ ಮುಖಂಡರು ಇದ್ದರು.